ಗುಜರಾತ್ ಕಂಪನಿಗೆ ಟಿಬಿ ಡ್ಯಾಂ 32 ಗೇಟ್‌ಗಳ ನಿರ್ಮಾಣ ಹೊಣೆ

| N/A | Published : Jun 03 2025, 12:32 AM IST / Updated: Jun 03 2025, 01:21 PM IST

ಗುಜರಾತ್ ಕಂಪನಿಗೆ ಟಿಬಿ ಡ್ಯಾಂ 32 ಗೇಟ್‌ಗಳ ನಿರ್ಮಾಣ ಹೊಣೆ
Share this Article
  • FB
  • TW
  • Linkdin
  • Email

ಸಾರಾಂಶ

ತುಂಗಭದ್ರಾ ಜಲಾಶಯದ 32 ಕ್ರಸ್ಟ್‌ ಗೇಟ್‌ಗಳ ಬದಲಾವಣೆ ನಿರ್ಮಾಣ ಕಾಮಗಾರಿ ಗುಜರಾತ್ ಮೂಲದ ಹಾರ್ಡವೇರ್‌ ಟೂಲ್ಸ್‌ ಆ್ಯಂಡ್‌ ಮಷಿನರಿ ಪ್ರಾಜೆಕ್ಟ್‌ ಕಂಪನಿ ಪಾಲಾಗಿದೆ.

 ಹೊಸಪೇಟೆ : ತುಂಗಭದ್ರಾ ಜಲಾಶಯದ 32 ಕ್ರಸ್ಟ್‌ ಗೇಟ್‌ಗಳ ಬದಲಾವಣೆ ನಿರ್ಮಾಣ ಕಾಮಗಾರಿ ಗುಜರಾತ್ ಮೂಲದ ಹಾರ್ಡವೇರ್‌ ಟೂಲ್ಸ್‌ ಆ್ಯಂಡ್‌ ಮಷಿನರಿ ಪ್ರಾಜೆಕ್ಟ್‌ ಕಂಪನಿ ಪಾಲಾಗಿದೆ. ಈ ಕಂಪನಿ 15 ತಿಂಗಳಲ್ಲಿ ಕಾಮಗಾರಿ ಪೂರೈಸಬೇಕು ಎಂಬ ಕಾಲಮಿತಿಯೊಂದಿಗೆ ತುಂಗಭದ್ರಾ ಮಂಡಳಿ ಕಾಮಗಾರಿ ನಿರ್ಮಾಣದ ಹೊಣೆ ವಹಿಸಿದೆ.

ಗುಜರಾತ್‌ನ ಅಹಮದಾಬಾದ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಹಾರ್ಡವೇರ್‌ ಟೂಲ್ಸ್‌ ಆ್ಯಂಡ್‌ ಮಷಿನರಿ ಪ್ರಾಜೆಕ್ಟ್‌ ಕಂಪನಿಗೆ ಈಗಾಗಲೇ ಜಲಾಶಯದ 19ನೇ ಗೇಟ್‌ಗೆ ಕ್ರಸ್ಟ್‌ ಗೇಟ್‌ ನಿರ್ಮಾಣ ಮಾಡುವ ಹೊಣೆ ವಹಿಸಲಾಗಿದೆ. ಜೂನ್‌ ಅಂತ್ಯದೊಳಗೆ ಈ ಕಾಮಗಾರಿ ಪೂರೈಸಬೇಕಿದೆ. ಈ ಮಧ್ಯೆ 32 ಗೇಟ್‌ಗಳ ಕಾಮಗಾರಿಯನ್ನೂ ಇದೇ ಕಂಪನಿಗೆ ವಹಿಸಲಾಗಿದ್ದು, 33 ಗೇಟ್‌ಗಳ ನಿರ್ಮಾಣ ಕಾಮಗಾರಿ ಈ ಕಂಪನಿ ಪಾಲಾದಂತಾಗಿದೆ. 32 ಗೇಟ್‌ಗಳ ನಿರ್ಮಾಣಕ್ಕೆ ₹52 ಕೋಟಿ ಮೊತ್ತವನ್ನು ತುಂಗಭದ್ರಾ ಮಂಡಳಿ ನಿಗದಿ ಮಾಡಿತ್ತು. ಇ- ಟೆಂಡರ್‌ನಲ್ಲಿ ಹಾರ್ಡವೇರ್‌ ಟೂಲ್ಸ್‌ ಆ್ಯಂಡ್‌ ಮಷಿನರಿ ಪ್ರಾಜೆಕ್ಟ್‌ ಕಂಪನಿ ₹41.42 ಕೋಟಿಯಲ್ಲಿ ಕಾಮಗಾರಿ ಪೂರೈಸುವುದಾಗಿ ಬಿಡ್‌ ಸಲ್ಲಿಸಿತ್ತು. ಕಡಿಮೆ ಮೊತ್ತದ ಬಿಡ್‌ ಸಲ್ಲಿಸಿದ ಹಿನ್ನೆಲೆ ಈ ಕಂಪನಿಗೆ ನಿರ್ಮಾಣದ ಹೊಣೆ ವಹಿಸಲಾಗಿದೆ ಎಂದು ತುಂಗಭದ್ರಾ ಮಂಡಳಿ ಮೂಲಗಳು ತಿಳಿಸಿವೆ.

ತುಂಗಭದ್ರಾ ಜಲಾಶಯದ ಗೇಟ್‌ಗಳನ್ನು ಬದಲಿಸಬೇಕು ಎಂದು ಆಂಧ್ರಪ್ರದೇಶದ ಎನ್‌ಡಿಟಿ ಸರ್ವಿಸ್‌ ಸಂಸ್ಥೆ ವರದಿ ನೀಡಿತ್ತು. ಆ ಬಳಿಕ ತಜ್ಞರು ಕೂಡ ಬದಲಾವಣೆಗೆ ಅಸ್ತು ಎಂದಿದ್ದರು. ಹಾಗಾಗಿ 32 ಗೇಟ್‌ಗಳ ಬದಲಾವಣೆಗೆ ತುಂಗಭದ್ರಾ ಮಂಡಳಿ ಅರ್ಜಿ ಆಹ್ವಾನಿಸಿತ್ತು.

ತುಂಗಭದ್ರಾ ಜಲಾಶಯದ 32 ಗೇಟ್‌ಗಳ ಮರು ನಿರ್ಮಾಣಕ್ಕಾಗಿ ಗುಜರಾತ ಮೂಲದ ಅನಾರ್‌ ಕಂಪನಿ ಮತ್ತು ಹಾರ್ಡವೇರ್‌ ಟೂಲ್ಸ್‌ ಆ್ಯಂಡ್‌ ಮಷಿನರಿ ಪ್ರಾಜೆಕ್ಟ್‌ ಕಂಪನಿ, ತೆಲಂಗಾಣ ರಾಜ್ಯದ ಸ್ವಪ್ನಾ ಮತ್ತು ಬೆಕಂ ಕಂಪನಿಗಳು ಅರ್ಜಿ ಸಲ್ಲಿಸಿದ್ದವು. ಮರು ಟೆಂಡರ್‌ನಲ್ಲೂ ಕೂಡ ಈ ಕಂಪನಿಗಳು ಅರ್ಜಿ ಸಲ್ಲಿಸಿದ್ದವು. ತಾಂತ್ರಿಕ ಬಿಡ್‌ ಓಪನ್‌ ಮಾಡಿ, ಮಂಡಳಿ ಸಮಿತಿ ಎದುರು ಎಲ್ಲಾ ದಾಖಲೆಗಳನ್ನು ಒದಗಿಸಿದ ಬಳಿಕ ಸಮಿತಿ ಪರಿಶೀಲನೆ ನಡೆಸಿ ಹಾರ್ಡವೇರ್‌ ಟೂಲ್ಸ್‌ ಆ್ಯಂಡ್‌ ಮಷಿನರಿ ಪ್ರಾಜೆಕ್ಟ್‌ ಕಂಪನಿಗೆ ಟೆಂಡರ್‌ ಹೊಣೆ ವಹಿಸಿದೆ.

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟ್‌ 2024ರ ಆ. 10ರಂದು ಕಳಚಿ ಬಿದ್ದಿತ್ತು. ಈ ಗೇಟ್‌ಗೆ ಸ್ಟಾಪ್‌ ಲಾಗ್ ಅಳವಡಿಕೆ ಮಾಡಲಾಗಿದ್ದು, ಈಗ ಕ್ರಸ್ಟ್‌ ಗೇಟ್‌ ನಿರ್ಮಾಣಕ್ಕೆ ಗುಜರಾತ ಮೂಲದ ಹಾರ್ಡವೇರ್‌ ಟೂಲ್ಸ್‌ ಆ್ಯಂಡ್‌ ಮಷಿನರಿ ಪ್ರಾಜೆಕ್ಟ್‌ ಕಂಪನಿಗೆ ₹1.98 ಕೋಟಿಗೆ ಟೆಂಡರ್‌ ಆಗಿದೆ. ಶೀಘ್ರವೇ ಈ ಗೇಟ್‌ ಅಳವಡಿಕೆ ಕಾರ್ಯ ನಡೆಯಲಿದೆ ಎಂದು ತುಂಗಭದ್ರಾ ಮಂಡಳಿ ಮೂಲಗಳು ತಿಳಿಸಿವೆ.

Read more Articles on