ಗುಜರಾತ್ ಇಂಡೆಕ್ಸ್- ಸಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಸಂಜಯ್ ಜೋಶಿ, ಮುಖ್ಯ ಕಾರ್ಯಾಚರಣೆ ಅಧಿಕಾರಿ ಕೆ. ಅನ್ನಪೂರ್ಣ ಚಾಲನೆ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್‌ ನಲ್ಲಿ ಗುಜರಾತ್ ಕರಕುಶಲ ಉತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಶುಕ್ರವಾರದಿಂದ ಜೂ. 29 ರವರೆಗೆ ನಡೆಯುವ ಈ ಮೇಳದಲ್ಲಿ ಗುಜರಾತಿನ ಸುಮಾರು 75 ಮಂದಿ ಕುಶಲಕರ್ಮಿಗಳು ಪಾಲ್ಗೊಂಡಿದ್ದಾರೆ. ತಯಾರಿಸಿದ ಬಾಂದಿನಿ ಸೀರೆ, ಕಸೂತಿ ಮಾಡಿದ ಬೆಡ್‌ ಶೀಟ್‌ ಗಳು, ಟವೆಲ್‌ ಗಳು, ಕುಶನ್ ಕವರ್, ಪರಿಸರ ಸ್ನೇಹಿ ಆಭರಣ, ಡ್ರೆಸ್ ಮೆಟೀರಿಯಲ್, ಚನಿಯಾ ಚೋಲಿ, ಕುರ್ತಿಗಳು ಮೊದಲಾದವು ರಿಯಾಯಿತಿ ದರಕ್ಕೆ ಮಾರಾಟವಾಗುತ್ತಿದೆ. ಈ ಉತ್ಸವಕ್ಕೆ ಗುಜರಾತ್ ಇಂಡೆಕ್ಸ್- ಸಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಸಂಜಯ್ ಜೋಶಿ, ಮುಖ್ಯ ಕಾರ್ಯಾಚರಣೆ ಅಧಿಕಾರಿ ಕೆ. ಅನ್ನಪೂರ್ಣ ಚಾಲನೆ ನೀಡಿದರು.

ಜೂ. 22 ರವರೆಗೆ ನಿತ್ಯ ಸಂಜೆ 6 ರಿಂದ 8 ರವರೆಗೆ ಗುಜರಾತಿನ ಪ್ರಸಿದ್ಧ ಮೀನಾ ಬೇನ್ ಉದಯಬಾಯಿ ಸೇವಕ್ ಮತ್ತು ತಂಡದಿಂದ ಗರ್ಭಾ ನೃತ್ಯ, ರಾಜು ಬಾಯಿ ಬೋಕಿರಿಯ ತಂಡದಿಂದ ರಾಸ್ ಪ್ರದರ್ಶನ ನಡೆಯುತ್ತದೆ. ಈ ವೇಳೆ ಜೆಎಸ್ಎಸ್ ಅರ್ಬನ್ ಹಾತ್ ಸಂಯೋಜನಾಧಿಕಾರಿ ಎಂ. ಶಿವನಂಜಸ್ವಾಮಿ, ರಾಕೇಶ್ ರೈ, ಗುಜರಾತ್ ಇಂಡೆಕ್ಸ್- ಸಿ ಸಂಸ್ಥೆಯ ವ್ಯವಸ್ಥಾಪಕ ಡಾ. ಸ್ನೇಹಲ್ ಮಕ್ವಾನ್ ಇದ್ದರು.