ಮಾರಿ ಕಣಿವೆ ಕೋಡಿ ಎತ್ತರ ಕಡಿಮೆ ಮಾಡುವ ಗುಲ್ಲು

| Published : Oct 22 2024, 12:02 AM IST

ಸಾರಾಂಶ

ಮಧ್ಯ ಕರ್ನಾಟಕದ ಏಕಮಾತ್ರ ಜಲಪಾತ್ರೆ ಮಾರಿಕಣಿವೆ(ವಿವಿಸಾಗರ ಜಲಾಶಯ)ಡ್ಯಾಂ ಮತ್ತೆ ಸುದ್ದಿಯಲ್ಲಿದೆ. ಇದುವರೆಗೂ ಭದ್ರಾ ಜಲಾಶಯದಿಂದ ಐದು ಟಿಎಂಸಿ ನೀರು ತಂದು ಸುರಿಯಬೇಕು ಎಂಬ ಬಿಗಿ ಪಟ್ಟು ಹಿಡಿದು ಹಿರಿಯೂರು ನೆಲದಲ್ಲಿ ಹೋರಾಟ ನಡೆದಿದ್ದವು. ಭದ್ರಾ ದಿಂದ ಸದ್ಯಕ್ಕೆ ಎರಡು ಟಿಎಂಸಿ ನೀರು ಪೂರೈಕೆಯಾಗುತ್ತಿದೆ. ಅಚ್ಚುಕಟ್ಟುದಾರರಿಗೆ ಕಳೆದ ಮೂರು ವರ್ಷಗಳಿಂದ ಯಾವುದೇ ನೀರಿನ ಸಮಸ್ಯೆ ಇಲ್ಲ. ಆದರೆ ಇತ್ತೀಚೆಗೆ ಅಲ್ಲಿನ ರೈತ ಮುಖಂಡರು ಮಾರಿ ಕಣಿವೆ ಕೋಡಿ ಎತ್ತರ ಕಡಿಮೆ ಮಾಡಲಾಗುತ್ತಿದೆ ಎಂಬ ಹೊಸ ವಿಷಯವೊಂದನ್ನು ಎಳೆದುಕೊಂಡು ಬಂದು ಹೋರಾಟ ಶುರು ಮಾಡಿರುವುದು ಜಲಸಂಪನ್ಮೂಲ ಇಲಾಖೆಗೆ ಅಚ್ಚರಿ ತರಿಸಿದೆ. ಪ್ರಸ್ತಾಪವಿರದ ಸಂಗತಿ ಇವರ ತಲೆಗೆ ನುಸುಳಿದ್ದಾದರೂ ಹೇಗೆ ಎಂದು ಪ್ರಶ್ನಿಸುತ್ತದೆ ಇಲಾಖೆ.

ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಧ್ಯ ಕರ್ನಾಟಕದ ಏಕಮಾತ್ರ ಜಲಪಾತ್ರೆ ಮಾರಿಕಣಿವೆ(ವಿವಿಸಾಗರ ಜಲಾಶಯ)ಡ್ಯಾಂ ಮತ್ತೆ ಸುದ್ದಿಯಲ್ಲಿದೆ. ಇದುವರೆಗೂ ಭದ್ರಾ ಜಲಾಶಯದಿಂದ ಐದು ಟಿಎಂಸಿ ನೀರು ತಂದು ಸುರಿಯಬೇಕು ಎಂಬ ಬಿಗಿ ಪಟ್ಟು ಹಿಡಿದು ಹಿರಿಯೂರು ನೆಲದಲ್ಲಿ ಹೋರಾಟ ನಡೆದಿದ್ದವು. ಭದ್ರಾ ದಿಂದ ಸದ್ಯಕ್ಕೆ ಎರಡು ಟಿಎಂಸಿ ನೀರು ಪೂರೈಕೆಯಾಗುತ್ತಿದೆ. ಅಚ್ಚುಕಟ್ಟುದಾರರಿಗೆ ಕಳೆದ ಮೂರು ವರ್ಷಗಳಿಂದ ಯಾವುದೇ ನೀರಿನ ಸಮಸ್ಯೆ ಇಲ್ಲ. ಆದರೆ ಇತ್ತೀಚೆಗೆ ಅಲ್ಲಿನ ರೈತ ಮುಖಂಡರು ಮಾರಿ ಕಣಿವೆ ಕೋಡಿ ಎತ್ತರ ಕಡಿಮೆ ಮಾಡಲಾಗುತ್ತಿದೆ ಎಂಬ ಹೊಸ ವಿಷಯವೊಂದನ್ನು ಎಳೆದುಕೊಂಡು ಬಂದು ಹೋರಾಟ ಶುರು ಮಾಡಿರುವುದು ಜಲಸಂಪನ್ಮೂಲ ಇಲಾಖೆಗೆ ಅಚ್ಚರಿ ತರಿಸಿದೆ. ಪ್ರಸ್ತಾಪವಿರದ ಸಂಗತಿ ಇವರ ತಲೆಗೆ ನುಸುಳಿದ್ದಾದರೂ ಹೇಗೆ ಎಂದು ಪ್ರಶ್ನಿಸುತ್ತದೆ ಇಲಾಖೆ.

ಮಾರಿಕಣಿವೆ ಕೋಡಿ ಎತ್ತರವ ಕಡಿಮೆ ಮಾಡಲಾಗುತ್ತಿದೆ. ವೋಟ್ ಬ್ಯಾಂಕ್ ರಾಜಕಾರಣಕ್ಕೋಸ್ಕರ ಕೋಡಿ ತಗ್ಗಿಸುವ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಸಲಾಗಿದೆ. ಯಾವುದೇ ಕಾರಣಕ್ಕೂ ಕಾರ್ಯಸಾಧುವಾಗಲು ಬಿಡುವುದಿಲ್ಲ ಎಂಬ ಹೇಳಿಕೆಗಳು ಹರಿದಾಡುತ್ತಿವೆ. ಹಾಗೇನಾದರೂ ಕೋಡಿ ಎತ್ತರ ಇಳಿಸಲು ಮುಂದಾದರೆ ಉಗ್ರ ಹೋರಾಟ ನಡೆಸುವುದಾಗಿ ರೈತ ಸಂಘಟನೆಗಳು ಹೇಳಿಕೆ ನೀಡಿವೆ. ಇಲ್ಲದ ಪ್ರಸ್ತಾವನೆಗೆ ಸಭೆಗಳ ಮೇಲೆ ಸಭೆ ನಡೆಸುತ್ತಿವೆ.

ಅಂದು ಜಲಾಶಯ ನಿರ್ಮಾಣ ಮಾಡಿದ ಎಚ್. ಡಿ. ರೈಸ್ ಅವರು ದೂರದೃಷ್ಟಿ ಇಟ್ಟುಕೊಂಡು ಡ್ಯಾಂ ಕಟ್ಟಿದ್ದಾರೆ. ಆದರೆ ಅವರ ದೂರದೃಷ್ಟಿ ಹಾಗೂ ವರದಿಯನ್ನು ಗ್ರಹಿಸದೆ, ಓದದೇ ವೋಟ್ ಬ್ಯಾಂಕ್ ರಾಜಕಾರಣಿಗಳು ಹಾಗೂ ಈಗಿನ ಆಧುನಿಕ ಇಂಜಿನಿಯರ್‌ಗಳು ಅಗಾಧ ಇತಿಹಾಸವಿರುವ ಕೋಡಿ ಮಟ್ಟ ಇಳಿಸಲು ಪ್ರಸ್ತಾವ ಕಳಿಸಿದ್ದಾರೆ ಎನ್ನುವುದು ರೈತ ಮುಖಂಡರ ಆರೋಪ.

ವಾಣಿ ವಿಲಾಸ ಜಲಾಶಯ ಜಿಲ್ಲೆಯ ಭವಿಷ್ಯದ ಪ್ರಶ್ನೆಯಾಗಿದೆ. ಈ ಪೀಳಿಗೆಗೆ ನಾವು ಕೊನೆಯ ಕೊಂಡಿಯಾಗಿದ್ದು ತಾಲೂಕಿನ ಎಲ್ಲಾ ಸಂಘ ಸಂಸ್ಥೆಗಳು, ಸಂಘಟನೆಗಳು, ಚಿಂತಕರು, ಸಾರ್ವಜನಿಕರು ವಿವಿ ಸಾಗರ ಡ್ಯಾಂ ಉಳಿಸಲು ಮುಂದಾಗಬೇಕು ಎಂಬಿತ್ಯಾದಿ ಭಾವನಾತ್ಮಕ ಸಂದೇಶಗಳ ರವಾನಿಸುತ್ತಿದ್ದಾರೆ. ತಾಲೂಕಿನ ನೆಲ, ಜಲ ಎಂದಾಗ ನಾವೆಲ್ಲರೂ ಒಂದಾಗಬೇಕು. ನಮ್ಮಲ್ಲಿ ಎಷ್ಟೇ ಬೇರೆ ಬೇರೆ ರೈತ ಸಂಘಟನೆಗಳಿದ್ದರೂ ನೀರಿನ ವಿಚಾರದಲ್ಲಿ ಒಗ್ಗಟ್ಟಾಗಿರುತ್ತೇವೆ. ಮತಕ್ಕಾಗಿ ಮಾಡುವ ರಾಜಕಾರಣಿಗಳ ಷಡ್ಯಂತ್ರವನ್ನು ಮುರಿಯುತ್ತೇವೆ ಎಂಬಿತ್ಯಾದಿ ಆವೇಶದ ಮಾತುಗಳು ಮಾರ್ದನಿಸುತ್ತಿವೆ. ಆದರೆ ಯಾರ ಬಳಿಯೂ ಕೋಡಿ ಇಳಿಸುವ ಪ್ರಸ್ತಾಪ (ಇದ್ದರೆ ತಾನೇ)ದ ಒಂದು ತುಂಡು ಕಾಗದ ಪತ್ರಗಳಿಲ್ಲ. ಬಾಯಿಂದ ಬಾಯಿಗೆ ತಲುಪಿಸುವ ಕೆಲಸ ಮಾತ್ರ ಮಾಡಲಾಗುತ್ತಿದೆ.

ವಿವಿ ಸಾಗರದ ಜಲಾಶಯ ಏನು ಎತ್ತ

ವಿವಿ ಸಾಗರ ಜಲಾಶಯ ಜಿಲ್ಲೆಯ ಜೀವನಾಡಿ ಕೆರೆಯಾಗಿದ್ದು 135 ಅಡಿ, 30 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. 50 ಮೀ ಎತ್ತರವಿರುವ ಜಲಾಶಯ ಮೈಸೂರು ಮಹಾರಾಜರ ದೂರದೃಷ್ಟಿಯ ಫಲವಾಗಿ 1907 ರಲ್ಲಿ ನಿರ್ಮಾಣಗೊಂಡಿತು. 117 ವರ್ಷಗಳ ಇತಿಹಾಸವಿರುವ ಡ್ಯಾo 1933 ರಲ್ಲಿ ಕೋಡಿ ಬಿದ್ದಿತ್ತು. ಆನಂತರ ಸುಮಾರು 89 ವರ್ಷಗಳ ನಂತರ 2022 ರಲ್ಲಿ ಕೋಡಿ ಬಿದ್ದು ಇತಿಹಾಸ ಸೃಷ್ಟಿಸಿತ್ತು. ಆಮೇಲೆ 1957 ರಲ್ಲಿ 125 ಅಡಿ, 1958 ರಲ್ಲಿ 124 ಅಡಿ, 2021 ರಲ್ಲಿ 125 ಅಡಿ ನೀರು ಸಂಗ್ರಹವಾಗಿತ್ತು. ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗ, ಮೊಳಕಾಲ್ಮುರು ತಾಲೂಕುಗಳಿಗೆ ನೀರು ಒದಗಿಸುವ ಜಲಾಶಯವನ್ನು ಸಿಮೆಂಟ್ ಬಳಸದೆ ಕೇವಲ ಗಾರೆಯಿಂದಲೇ ನಿರ್ಮಿಸಲಾಗಿದೆ. ಅತ್ಯಂತ ಹಳೆಯ ಆಣೆಕಟ್ಟುಗಳಲ್ಲಿ ವಿವಿ ಸಾಗರ ಆಣೆಕಟ್ಟು ಸಹ ಒಂದು ಎನ್ನಲಾಗಿದೆ.

ಹೊಸಪೇಟೆ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಮುರಿದು ಆತಂಕ ಸೃಷ್ಟಿಯಾದಾಗ ರಾಜ್ಯ ಸರ್ಕಾರ ಎಲ್ಲ ಜಲಾಶಯಗಳ ಪರಿಶೀಲಿಸಿ ವರದಿ ನೀಡುವಂತೆ ತಜ್ಞ ಇಂಜಿನಿಯರ್ ಗಳಿಗೆ ಸೂಚಿಸಿತ್ತು. ಅದರಂತೆ ನೀಡಲಾದ ವರದಿಯಲ್ಲಿ ವಿವಿ ಸಾಗರ ಜಲಾಶಯ ಯಾವುದೇ ಬಗೆಯ ಆತಂಕದ ಪರಿಧಿಯಲ್ಲಿ ಇಲ್ಲ. ಭವಿಷ್ಯದಲ್ಲಿ ಜಲಾಶಯವ ಕಾಯ್ದುಕೊಳ್ಳುವ ಸಂಬಂಧ ಕೇಂದ್ರ ಜಲಶಕ್ತಿ ಇಲಾಖೆಗೆ ಎರಡು ವರ್ಷದ ಹಿಂದೆ ಪ್ರಸ್ತಾವನೆಯೊಂದು ಹೋಗಿದೆ. ಆದರೆ ಅದು ಕೋಡಿ ಎತ್ತರವ ತಗ್ಗಿಸುವುದಲ್ಲ. ಪ್ರವಾಹ ತಡೆಯುವ ಸಂಬಂಧ ತಜ್ಞರು ಸೂಚಿಸಿರುವ ರಚನಾತ್ಮಕ ಸಲಹೆ ಇದಾಗಿದೆ.

ವಿವಿ ಸಾಗರ ಜಲಾಶಯದ ಕೋಡಿ ಎತ್ತರ ಕಡಿಮೆ ಮಾಡುವ ಯಾವ ಪ್ರಸ್ತಾಪವೂ ಜಲ ಸಂಪನ್ಮೂಲ ಇಲಾಖೆ ಮುಂದಿಲ್ಲ. ಕೇಂದ್ರ ಸರ್ಕಾರಕ್ಕೂ ಪ್ರಸ್ತಾವ ಸಲ್ಲಿಸಿಲ್ಲ. ಜಲಾಶಯವ ಬಹುಕಾಲ ಕಾಯ್ದುಕೊಳ್ಳುವ ಸಂಬಂಧ ತಜ್ಞರು ಸಲಹೆ ನೀಡುತ್ತಾರೆ. ಅದನ್ನು ಪಾಲನೆ ಮಾಡಲಾಗುತ್ತದೆ. ವಿವಿ ಸಾಗರ ಜಲಾಶಯದ ಕೋಡಿ ಎತ್ತರ ಕಡಿಮೆ ಮಾಡಲಾಗುತ್ತಿದೆ ಎಂಬುದು ಕಟ್ಟು ಕತೆ. ಯಾವುದೇ ಕಾರಣದಿಂದ ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ ಕಡಿಮೆ ಮಾಡಲು ಬರುವುದಿಲ್ಲ. ಇದೊಂದು ಸುಳ್ಳು ಸುದ್ದಿ. ಯಾವ ಮೂಲದಿಂದ ರೈತರಿಗೆ ಇದು ಸಿಕ್ಕಿತೆಂಬುದ ಅವರೇ ಬಹಿರಂಗ ಪಡಿಸಲಿ.- ಚೆಲುವರಾಜ್, ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ವಿಶ್ವೇಶ್ವರಯ್ಯ ನೀರಾವರಿ ನಿಗಮ