ಬಂದೂಕು ಪರವಾನಗಿ ನವೀಕರಣದಲ್ಲಿ ತೀವ್ರ ವಿಳಂಬವಾಗುತ್ತಿರುವುದನ್ನು ಖಂಡಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಾವಿರಕ್ಕೂ ಹೆಚ್ಚು ಬಂದೂಕು ಮಾಲೀಕರು ಹಾಗೂ ರೈತರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಐದು ವರ್ಷಕ್ಕೊಮ್ಮೆ ಬಂದೂಕು ಪರವಾನಗಿ ನವೀಕರಣ ಮಾಡಿಸಬೇಕೆಂಬ ನಿಯಮದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ರೈತರು ತಮ್ಮ ತಮ್ಮ ಬಂದೂಕುಗಳೊಂದಿಗೆ ಡಿಸಿ ಕಚೇರಿಗೆ ಆಗಮಿಸಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ನಿಧಾನಗತಿಯ ಕಾರ್ಯವೈಖರಿಯಿಂದ ದಿನವಿಡೀ ಕಚೇರಿ ಬಳಿ ಕಾಯುವಂತಾಗಿದೆ ಎಂದು ಸೋಮವಾರದಂದು ಆಕ್ರೋಶ ಹೊರಹಾಕಿದರು.
ಕನ್ನಡಪ್ರಭ ವಾರ್ತೆ ಹಾಸನ
ಬಂದೂಕು ಪರವಾನಗಿ ನವೀಕರಣದಲ್ಲಿ ತೀವ್ರ ವಿಳಂಬವಾಗುತ್ತಿರುವುದನ್ನು ಖಂಡಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಾವಿರಕ್ಕೂ ಹೆಚ್ಚು ಬಂದೂಕು ಮಾಲೀಕರು ಹಾಗೂ ರೈತರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಐದು ವರ್ಷಕ್ಕೊಮ್ಮೆ ಬಂದೂಕು ಪರವಾನಗಿ ನವೀಕರಣ ಮಾಡಿಸಬೇಕೆಂಬ ನಿಯಮದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ರೈತರು ತಮ್ಮ ತಮ್ಮ ಬಂದೂಕುಗಳೊಂದಿಗೆ ಡಿಸಿ ಕಚೇರಿಗೆ ಆಗಮಿಸಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ನಿಧಾನಗತಿಯ ಕಾರ್ಯವೈಖರಿಯಿಂದ ದಿನವಿಡೀ ಕಚೇರಿ ಬಳಿ ಕಾಯುವಂತಾಗಿದೆ ಎಂದು ಸೋಮವಾರದಂದು ಆಕ್ರೋಶ ಹೊರಹಾಕಿದರು.ಪರವಾನಗಿ ನವೀಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವೇ ಟೋಕನ್ ನೀಡಿ ದಿನಾಂಕ ನಿಗದಿಪಡಿಸಿದ್ದರೂ, ದಿನಕ್ಕೆ ಸುಮಾರು ೫೦ ಮಂದಿಗೆ ಟೋಕನ್ ನೀಡಲಾಗುತ್ತಿದೆ. ಆದರೆ ಕೇವಲ ೨೦ರಿಂದ ೨೫ ಮಂದಿಯ ಪರವಾನಗಿ ಮಾತ್ರ ನವೀಕರಿಸಲಾಗುತ್ತಿದೆ ಎಂದು ಆರೋಪಿಸಿದರು. ಇದರಿಂದ ಉಳಿದವರು ದಿನವಿಡೀ ಸಾಲಿನಲ್ಲಿ ನಿಂತು ಕಾಯಬೇಕಾಗಿ ಬಂದು, ಕೊನೆಗೆ ಯಾವುದೇ ಕೆಲಸವಾಗದೆ ಬರಿಗೈಯಲ್ಲಿ ಮನೆಗೆ ವಾಪಸ್ಸಾಗುವ ದುಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಹೇಳಿದರು. ಎಡಿಸಿ ಕಚೇರಿ ಎದುರು ಕೆಲಕಾಲ ಜಲಾಯಿಸಿ, ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ಗನ್ ಮಾಲೀಕರು, ದೂರದ ಗ್ರಾಮಗಳಿಂದ ಬೆಳಗ್ಗೆಯೇ ಬಂದರೂ ಸಂಜೆವರೆಗೂ ಪರವಾನಗಿ ನವೀಕರಣವಾಗುತ್ತಿಲ್ಲ. ಊಟ, ಕುಡಿಯುವ ನೀರಿಲ್ಲದೆ ಸಾಲಿನಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೆಲಸ ಕಾರ್ಯಗಳನ್ನು ಬಿಟ್ಟು ಬರುವ ರೈತರಿಗೆ ಇದು ತೀವ್ರ ಸಂಕಷ್ಟವಾಗುತ್ತಿದೆ ಎಂದರು.ಹಿಂದೆ ತಾಲೂಕು ತಹಸೀಲ್ದಾರ್ ಕಚೇರಿಗಳಲ್ಲೇ ಬಂದೂಕು ಪರವಾನಗಿ ನವೀಕರಣ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲೇ ನವೀಕರಣ ಮಾಡಿಸಬೇಕೆಂಬ ಹೊಸ ನಿಯಮ ಜಾರಿಯಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ರೈತರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಹೇಳಿದರು. ತಕ್ಷಣ ಜಿಲ್ಲಾಧಿಕಾರಿಗಳು ಈ ಸಮಸ್ಯೆಯತ್ತ ಗಮನಹರಿಸಿ, ರೈತರಿಗೆ ಅನುಕೂಲವಾಗುವಂತೆ ಪ್ರತಿ ತಾಲೂಕಿನ ತಹಸೀಲ್ದಾರ್ ಕಚೇರಿಗಳಲ್ಲೇ ಬಂದೂಕು ಪರವಾನಗಿ ನವೀಕರಣ ಹಾಗೂ ಲೈಸೆನ್ಸ್ ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಗನ್ ಮಾಲೀಕರು ಎಚ್ಚರಿಕೆ ನೀಡಿದರು.