ಸಾರಾಂಶ
ಅಂಕೋಲಾ, ಕುಮಟಾ ತಾಲೂಕಿನ ಹಲವು ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಕುಂಡಬಾಳ-ಮರಾಕಲ್ ಯೋಜನೆ ಪೈಪ್‌ಲೈನ್‌ಗೆ ರಂಧ್ರ ಕೊರೆದು ನೀರು ಕಳ್ಳತನ ಮಾಡಲಾಗುತ್ತಿದೆ. ಈ ಕುರಿತು ದೂರು ನೀಡಲಾಗಿದೆ.
ರಾಘು ಕಾಕರಮಠ
ಅಂಕೋಲಾ: ಗುಂಡಬಾಳ-ಮರಾಕಲ್ ಯೋಜನೆ ಪ್ರಾರಂಭವಾಗಿ ಹಲವು ವರ್ಷಗಳು ಸಂದಿವೆ. ಗಂಗಾವಳಿ ನದಿಯಿಂದ ಬಹುಗ್ರಾಮ ಕುಡಿಯುವ ನೀರನ್ನು ಸರಬರಾಜು ಮಾಡುವ ಯೋಜನೆ ಇದಾಗಿದ್ದು, ಬೃಹತ್ ಪೈಪಿಗೆ ರಂಧ್ರ ತೆಗೆದು ನೀರನ್ನು ಕಳುವು ಮಾಡಿ ಕುಡಿಯುವ ನೀರನ್ನು ಗಿಡ-ಮರಗಳಿಗೆ ಬಳಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.ತಾಲೂಕಿನ ಗುಂಡಬಾಳದಿಂದ ಕುಮಟಾ ತಾಲೂಕಿನ ಗೋಕರ್ಣ ಸೇರಿದಂತೆ ಹಿರೇಗುತ್ತಿ, ತೊರ್ಕೆ ಇನ್ನಿತರ ಗ್ರಾಪಂಗಳಿಗೆ ನೀರು ದೊರೆಯಲೆಂದು ಸರ್ಕಾರ ಈ ಯೋಜನೆ ಜಾರಿಗೆ ತಂದಿತ್ತು. ಶುದ್ಧ ಕುಡಿಯುವ ನೀರಿನ ಸರಬರಾಜು ಕೇಂದ್ರ ಆಂದ್ಲೆ ಮತ್ತು ಬಳಲೆಯ ಮೇಲ್ಭಾಗದಲ್ಲಿದ್ದು, ಹಿರೇಗುತ್ತಿ ಗ್ರಾಪಂ ಮತ್ತು ಬೆಟ್ಕುಳಿ ಗ್ರಾಮಕ್ಕೆ ಜೆ.ಜೆ.ಎಂ. ಅಡಿಯಲ್ಲಿ ೪.೭೫ ಲಕ್ಷ ಲೀಟರ್ ನೀರನ್ನು ಪ್ರತಿನಿತ್ಯ ಪೂರೈಸಲಾಗುತ್ತಿತ್ತು. ಆದರೂ ನೀರಿನ ಕೊರತೆ ಮತ್ತು ವ್ಯತ್ಯಾಸ ಕಂಡು ಬರುತ್ತಿರುವುದರಿಂದ ಹಿರೇಗುತ್ತಿ ಗ್ರಾಪಂ ಅಧ್ಯಕ್ಷ ಶಾಂತಾ ನಾಯಕ ಇದರ ಕುರಿತು ಪರಿಶೀಲನೆಗೆ ಮುಂದಾಗಿದ್ದರು. ಗುಂಡಬಾಳದಿಂದ ನೀರು ಪೈಪ್‌ನಲ್ಲಿ ಬರುವಾಗ ಹಲವು ಕಡೆಗಳಲ್ಲಿ ಈ ನೀರಿನ ಪೈಪ್‌ಗೆ ರಂಧ್ರ ತೆರೆದು ತಮ್ಮ ತಮ್ಮ ತೋಟ-ಹೊಲಗದ್ದೆಗಳಿಗೆ ಉಪಯೋಗಿಸುತ್ತಿದ್ದಾರೆ ಎಂದು ಪರಿಶೀಲನೆಯ ವೇಳೆ ಕಂಡು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸಂಜೀವ ನಾಯಕ ಪ್ರಕರಣ ದಾಖಲಿಸಿದ್ದಾರೆ.ಕೆಲವು ಕಡೆಗಳಲ್ಲಿ ಈ ನೀರಿನ ಪೈಪನ್ನು ತೆರವುಗೊಳಿಸಿದ್ದು, ತಪ್ಪು ಮಾಡಿದವರು ತಪ್ಪೊಪ್ಪಿಗೆಯನ್ನು ಬರೆದುಕೊಟ್ಟ ವಿದ್ಯಾಮಾನಗಳು ವರದಿಯಾಗಿದೆ. ಈ ರೀತಿ ತಪ್ಪು ಮಾಡಿದವರ ವಿರುದ್ಧ ಕಾನೂನಾತ್ಮಕವಾಗಿ ಕಠಿಣ ಕ್ರಮವಾಗಲಿ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಇಲಾಖೆ ಪರಿಶೀಲಿಸಲಿ: ಶುದ್ಧ ಕುಡಿಯುವ ನೀರನ್ನು ಅನ್ಯ ಕಾರ್ಯಗಳಿಗೆ ಬಳಸುತ್ತಿರುವವರಲ್ಲಿ ಶ್ರೀಮಂತ ವರ್ಗದವರು ಇದ್ದಾರೆ ಎಂದು ತಿಳಿದು ಬಂದಿದೆ. ಮುಂದಿನ ದಿನಗಳಲ್ಲಿ ಇಲಾಖೆಯಿಂದ ಪರಿಶೀಲನೆಗೆ ಸಾಧ್ಯವಾಗದಿದ್ದಲ್ಲಿ ಸಾರ್ವಜನಿಕರೇ ಪರಿಶೀಲನೆ ನಡೆಸಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಪ್ರಾರಂಭವಾಗಿದೆ.ಕುಡಿಯುವ ನೀರು ಯೋಜನೆಯಡಿಯಲ್ಲಿ ಮನೆ ಮನೆಗೆ ನೀರು ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ. ಆದರೆ ಈ ಕುಡಿಯುವ ನೀರಿನ ಪೈಪ್‌ಗೆ ರಂಧ್ರ ತೆಗೆದು ತಮ್ಮ ತಮ್ಮ ಬಳಕೆಗೆ ನೀರನ್ನು ಬಳಸಿಕೊಳ್ಳುತ್ತಿರುವ ಕೆಲವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರಿದಲ್ಲಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಕುಮಟಾ, ಅಂಕೋಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸಂಜೀವ ನಾಯಕ ಹೇಳಿದರು.