ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಮೈಸೂರು-ಊಟಿ ಹೆದ್ದಾರಿಯಲ್ಲಿ ಇತ್ತೀಚೆಗೆ ಆರಂಭವಾದ ಪೆಟ್ರೋಲ್ ಬಂಕ್‌ಗಳ ಮುಂದೆ ಹಾಕಲಾದ ಡಿವೈಡರ್‌ಗಳೇ ಸಾವಿನ ತಾಣವಾಗುತ್ತಿವೆಯೇ ಎಂದು ಸಾರ್ವಜನಿಕರಲ್ಲಿ ಪ್ರಶ್ನೆ ಮೂಡಿದೆ.ಮೈಸೂರು-ಊಟಿ ಹೆದ್ದಾರಿಯ ತಾಲೂಕಿನ ಅಗತಗೌಡನಹಳ್ಳಿ ಗೇಟ್ ಬಳಿ ಬುಧವಾರ ಸಂಜೆ ಪೆಟ್ರೋಲ್ ಬಂಕ್ ಮುಂದಿನ ಡಿವೈಡರ್ ಓಪನ್ ಆದ ಜಾಗ ಮೂಲಕ ಬೈಕ್ ಸವಾರ ದಾಟಲು ಹೋದಾಗ ಎದುರು ಬಂದ ಕಾರು ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ.
ಮೈಸೂರು-ಊಟಿ ಹೆದ್ದಾರಿಯ ಗುಂಡ್ಲುಪೇಟೆ ಬಳಿಯ ಕಬ್ಬೇಕಟ್ಟೆ, ಅಗತಗೌಡನಹಳ್ಳಿ ಗೇಟ್ ಹಾಗೂ ಹಿರೀಕಾಟಿ-ಚಿಕ್ಕಹುಂಡಿ ಗೇಟ್ ಬಳಿಯ ಪೆಟ್ರೋಲ್ ಬಂಕ್‌ಗಳ ಮುಂದೆ ಹಾಕಲಾಗಿದ್ದ ಡಿವೈಡರ್ ಓಪನ್ ಆಗಿದೆ.ಡಿವೈಡರ್ ಓಪನ್ ಆಗದಿದ್ದರೆ ಅಪಘಾತಗಳು ಆಗುವುದು ಬಹುತೇಕ ಕಡಿಮೆ. ಬಂಕ್ ಮುಂದಿನ ಡಿವೈಡರ್ ಓಪನ್ ಮಾಡಿರುವ ಕಾರಣ ಬೈಕ್, ಕಾರು ಸವಾರರು ಬಂಕ್‌ನೊಳಗೆ ಹೋಗಲು ಯತ್ನಿಸಿದಾಗ ಅಪಘಾತಗಳು ಸಂಭವಿಸಿವೆ.
ಓಪನ್‌ಗೆ ಕಾರಣ?:ಹೆದ್ದಾರಿಗಳಲ್ಲಿ ಪೆಟ್ರೋಲ್ ಬಂಕ್ ಆರಂಭಿಸುವ ಮುನ್ನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆದೇಶದಂತೆ ಬಂಕ್ ಮುಂದಿನ ಸರ್ವೀಸ್ ರಸ್ತೆಗೆ ಡಿವೈಡರ್ ಮಾಡಲಾಗಿತ್ತು. ಸರ್ವೀಸ್ ರಸ್ತೆಗೆ ಡಿವೈಡರ್ ಹಾಕಿರುವ ಕಾರಣ ಹೆದ್ದಾರಿಯಲ್ಲಿ ತೆರಳುವ ಬಹುತೇಕ ವಾಹನಗಳು ಸರ್ವೀಸ್ ರಸ್ತೆ ಇದ್ದರೆ ವಾಹನಗಳು ಬರುವುದಿಲ್ಲ ಎಂದು ಬಂಕ್ ಮಾಲೀಕರು ಸರ್ವೀಸ್ ರಸ್ತೆಗೆ ಹಾಕಲಾಗಿದ್ದ ಕೆಲ ದೂರವರೆಗಿನ ಡಿವೈಡರ್ ತೆಗೆದು ಹಾಕಿದ್ದಾರೆ.
ಡಿವೈಡರ್ ಓಪನ್ ಮಾಡದಿದ್ದರೆ ವಾಹನಗಳು ಬಂಕ್‌ನೊಳಗೆ ಬರುವುದಿಲ್ಲ ಎಂಬ ಉದ್ದೇಶ ಹಾಗೂ ವ್ಯಾಪಾರದ ದೃಷ್ಟಿಯಿಂದ ಡಿವೈಡರ್ ಓಪನ್ ಮಾಡಲು ಬಂಕ್ ಮಾಲೀಕರು ಮುಂದಾಗಿದ್ದಾರೆ.ಪೊಲೀಸರು ಬಿಸಿ ಮುಟ್ಟಿಸುತ್ತಿಲ್ಲ!:
ಪೆಟ್ರೋಲ್ ಬಂಕ್‌ಗಳ ಮುಂದಿನ ಡಿವೈಡರ್ ಓಪನ್ ಆಗಿರುವುದರಿಂದಲೇ ಅಪಘಾತಗಳು ಹೆಚ್ಚುತ್ತಿವೆ. ಡಿವೈಡರ್ ಮುಚ್ಚಿ ಎಂದು ಇಲ್ಲಿನ ಪೊಲೀಸರು ಬಿಸಿ ಮುಟ್ಟಿಸುತ್ತಿಲ್ಲ. ರಸ್ತೆ ಅಪಘಾತದಿಂದ ಜನರ ಪ್ರಾಣ ಹೋಗುತ್ತಿವೆ. ಡಿವೈಡರ್ ಓಪನ್ ಮಾಡಿದ ಬಂಕ್ ಮಾಲೀಕರ ಮೇಲೆ ಪ್ರಕರಣ ದಾಖಲಿಸುವ ಪ್ರಯತ್ನವನ್ನೂ ಪೊಲೀಸರು ಮಾಡುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.ಬಂಕ್‌ಗಳಿಗೆ ನೋಟಿಸ್ ಜಾರಿ ಮಾಡಿದ್ರೂ ಮುಚ್ಚಿಲ್ಲ:
ಮೈಸೂರು-ಊಟಿ ಹೆದ್ದಾರಿಯ ಪೆಟ್ರೋಲ್ ಬಂಕ್‌ಗಳ ಮುಂದಿನ ಡಿವೈಡರ್ ಓಪನ್: ಅಪಘಾತಕ್ಕೆ ಆಹ್ವಾನ ಎಂದು ಕಳೆದ ಜೂ.೨೫ ರಂದು ಕನ್ನಡಪ್ರಭ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಕನ್ನಡಪ್ರಭದ ವರದಿ ಬಳಿಕ ಎಚ್ಚೆತ್ತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಡಿವೈಡರ್ ಓಪನ್ ಮಾಡಿದ್ದ ಬಂಕ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ.ಇದಾದ ಬಳಿಕವೂ ಬಂಕ್ ಮಾಲೀಕರು ಓಪನ್ ಮಾಡಿದ ಡಿವೈಡರ್ ಮುಚ್ಚುವ ಗೋಜಿಗೆ ಹೋಗಿಲ್ಲ. ಇದರ ಬೆನ್ನಲ್ಲೇ ಬುಧವಾರ ಸಂಜೆ ಡಿವೈಡರ್ ಬಳಿಯೇ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ್ದಾನೆ.