ಸಾರಾಂಶ
ಸಿರಿಗೆರೆ: ಸಮೀಪದ ಲಕ್ಷ್ಮೀಸಾಗರ (ರಾಷ್ಟ್ರೀಯ ಹೆದ್ದಾರಿ 48) ಸಮೀಪದ ಬಳ್ಳಿಗಟ್ಟೆ ಗ್ರಾಮದ ತೋಟದ ಆಸುಪಾಸುಗಳಲ್ಲಿ ರಾತ್ರಿ ವೇಳೆ ಬಂದೂಕುಧಾರಿಗಳು ಓಡಾಡುತ್ತಿರುವುದು ಅಲ್ಲಿನ ಜನರಲ್ಲಿ ಆತಂಕ ಸೃಷ್ಟಿಸಿದೆ.
ಬೆಂಗಳೂರಿನಲ್ಲಿ ರೇಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ರಾಜಪ್ಪ ಎಂಬುವವರ ತೋಟ ಬಳಿಗಟ್ಟೆ ಗ್ರಾಮದ ಸಮೀಪದ ಇದೆ. ತೋಟ ನೋಡಿಕೊಳ್ಳಲು ಅಜ್ಜಿಯೊಬ್ಬರನ್ನು ನೇಮಿಸಿದ್ದಾರೆ. ಜೊತೆಗೆ ತೋಟದ ರಕ್ಷಣೆಯ ಸಲುವಾಗಿ ತೋಟದಲ್ಲಿ ಸಿಸಿ ಟಿವಿ ಅಳವಡಿಸಿದ್ದಾರೆ.ತೋಟದ ಸುತ್ತ ಬಳ್ಳಾರಿ ಜಾಲಿ ಮುಳ್ಳು ಬೆಳೆದಿದ್ದು, ಅಲ್ಲಿ ಸರಾಗವಾಗಿ ಓಡಾಡುವುದೇ ಕಷ್ಟ. ಹೀಗಿರುವಾಗ ಸೋಮವಾರ ರಾತ್ರಿ 5 ಜನ ಆಗಂತುಕರು ಈ ದಾರಿಯಲ್ಲಿ ಓಡಾಡಿರುವುದು ಅಲ್ಲಿನ ಸಿಸಿ ಟೀವಿಯಲ್ಲಿ ದಾಖಲಾಗಿದೆ. ಆಗಂತುಕರು ತಲೆಗೆ ಟಾರ್ಚ್ ಕಟ್ಟಿಕೊಂಡಿರುವುದು, ಮತ್ತೊರ್ವ ಹೆಗಲ ಮೇಲೆ ಬಂದೂಕು ಹೊತ್ತಿರುವುದು ನಿಚ್ಚಳವಾಗಿ ವಿಡಿಯೋದಲ್ಲಿ ದಾಖಲಾಗಿದೆ. ಉಳಿದವರು ಉದ್ದನೆಯ ಲಾಠಿ ಹಿಡಿದು ಓಡಾಡುತ್ತಿರುವ ದೃಶ್ಯವನ್ನು ನೋಡಬಹುದಾಗಿದೆ.
ಅವೇಳೆಯಲ್ಲಿ ಸಿದ್ಧತೆ ಮಾಡಿಕೊಂಡು ದುರ್ಗಮ ದಾರಿಯಲ್ಲಿ ಓಡಾಡಿರುವ ಜನರ ಬಗ್ಗೆ ಸುತ್ತಲಿನ ರೈತ ಸಮುದಾಯ ಆತಂಕಕ್ಕೆ ಒಳಗಾಗಿದೆ. ಕೆಲವು ಸಂದರ್ಭದಲ್ಲಿ ರಾತ್ರಿ ವೇಳೆ ವಿದ್ಯುತ್ ನೀಡುವುದರಿಂದ ಕೃಷಿಕರು ಜಮೀನು, ತೋಟಗಳಲ್ಲಿ ಇರುತ್ತಾರೆ. ಕೈತಪ್ಪಿನಿಂದ ಬಂದೂಕು ಬಳಸಿದರೆ ಅದರಿಂದ ಉಂಟಾಗುವ ಅಪಾಯ ನಿರೀಕ್ಷೆ ಮೀರಿದ್ದಾಗಿರುತ್ತದೆ.ವಿಷಯ ತಿಳಿದ ನಂತರ ಪೊಲಿಸ್ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದೆ. ಸೋಮವಾರ ರಾತ್ರಿ ಬಂದೂಕು ಮುಂತಾದ ಪರಿಕರ ಇಟ್ಟುಕೊಂಡು ಓಡಾಡಿರುವ ಜನರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಸುತ್ತಲಿನ ಗ್ರಾಮದ ಜನರಿರುವಂತಿಲ್ಲ. ರಾತ್ರಿ ವೇಳೆಯಲ್ಲಿ ಪ್ರಾಣಿ ಪಕ್ಷಿಗಳ ಬೇಟೆಗಾಗಿ ಬಂದಿರಬಹುದೆಂದು ಅಂಜಾಜು ಮಾಡಿದ್ದೇವೆ. ಜೊತೆಗೆ ಇತ್ತೀಚೆಗೆ ಈ ಗ್ರಾಮಗಳ ಸುತ್ತಮುತ್ತ ಕಳ್ಳತನದ ಪ್ರಕರಣಗಳೂ ವರದಿಯಾಗಿಲ್ಲ ಎಂದು ಪ್ರಜಾವಾಣಿಗೆ ಭರಮಸಾಗರ ಠಾಣೆಯ ಇನ್ಸ್‌ಪೆಕ್ಟರ್ ರವಿನಾಯಕ್ ತಿಳಿಸಿದರು.