ಕಳೆದ ಹದಿನೈದು ದಿನಗಳಿಂದ ಈ ಭಾಗದಲ್ಲಿ ಸಮರ್ಪಕ ಮಳೆಯಾಗದ ಕಾರಣ ಕೃಷಿ ಚಟುವಟಿಕೆ ಸ್ಥಗಿತ

ಹನುಮಸಾಗರ: ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆ ಹನುಮಸಾಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರು ಮತ್ತು ಗ್ರಾಮಸ್ಥರು ಮಳೆಗಾಗಿ ವಿಶೇಷ ಪೂಜೆ, ಪ್ರಾರ್ಥನೆ ಹಾಗೂ ಜನಪದ ಸಂಪ್ರದಾಯ ಆಚರಿಸುವ ಮೂಲಕ ವರುಣ ದೇವನ ಕೃಪೆಗೆ ಮೊರೆ ಹೋದರು.

ಸಮೀಪದ ತುಮರಿಕೊಪ್ಪ ಗ್ರಾಮದಲ್ಲಿ ಮಂಗಳವಾರ ಮಾರುತೇಶ್ವರ ಸ್ವಾಮಿಗೆ 101 ಕೊಡಗಳಿಂದ ಜಲಾಭಿಷೇಕ ನಡೆಸಲಾಗಿದ್ದು, ಹನುಮಸಾಗರ ಪಟ್ಟಣದಲ್ಲಿ ಪ್ರಾಚೀನ ಜನಪದ ಸಂಪ್ರದಾಯವಾದ ಗುರ್ಜಿ-ಗುರ್ಜಿ ಆಚರಣೆ ಮೂಲಕ ಉತ್ತಮ ಮಳೆಯಾಗಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಕಳೆದ ಹದಿನೈದು ದಿನಗಳಿಂದ ಈ ಭಾಗದಲ್ಲಿ ಸಮರ್ಪಕ ಮಳೆಯಾಗದ ಕಾರಣ ಕೃಷಿ ಚಟುವಟಿಕೆ ಸ್ಥಗಿತಗೊಂಡಿದ್ದು, ಬಿತ್ತನೆ ಮಾಡಿದ ಬೆಳೆಗಳು ಬಿಸಿಲಿನ ತಾಪಕ್ಕೆ ಕಮರುತ್ತಿವೆ. ಇದರಿಂದ ಆತಂಕಗೊಂಡ ತುಮರಿಕೊಪ್ಪ ಗ್ರಾಮದ ರೈತರು ಹಾಗೂ ಗ್ರಾಮಸ್ಥರು ಮಾರುತೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ನಿರ್ಧಾರ ಕೈಗೊಂಡರು.

ಬೆಳಗ್ಗೆ ಗ್ರಾಮದ ನೀರಿನ ಟ್ಯಾಂಕ್ ಸಮೀಪ ನೂರಾರು ಜನ ಸೇರಿ ಅಲ್ಲಿಂದ ದೇವಸ್ಥಾನದವರೆಗೆ ಸರತಿ ಸಾಲಿನಲ್ಲಿ ನಿಂತು ಒಬ್ಬರಿಂದ ಮತ್ತೊಬ್ಬರಿಗೆ ನೀರಿನ ಕೊಡ ಹಸ್ತಾಂತರಿಸುವ ಮೂಲಕ 101 ಕೊಡಗಳ ನೀರಿನಿಂದ ಮಾರುತೇಶ್ವರನಿಗೆ ಜಲಾಭಿಷೇಕ ನೆರವೇರಿಸಿದರು.

ಬಳಿಕ ಗ್ರಾಮದ ಇತರೆ ದೇವರಿಗೂ ತಲಾ ಐದು ಕೊಡ ನೀರಿನಿಂದ ಅಭಿಷೇಕ ಮಾಡಿ ಮಳೆಗಾಗಿ ಪ್ರಾರ್ಥಿಸಿದರು. ಈ ವೇಳೆ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಇದೇ ವೇಳೆ ಹನುಮಸಾಗರ ಪಟ್ಟಣದಲ್ಲಿ ರೈತರು ಹಾಗೂ ಯುವಕರು ಹಲವು ತಲೆಮಾರುಗಳಿಂದ ನಡೆದು ಬಂದಿರುವ ಗುರ್ಜಿ-ಗುರ್ಜಿ ಸಂಪ್ರದಾಯ ಆಚರಿಸಿ ಮಳೆರಾಯನನ್ನು ಬೇಡಿಕೊಂಡರು. ಮುಂಗಾರು ಆರಂಭವಾಗಿ ಒಂದು ತಿಂಗಳಿಗೂ ಅಧಿಕ ಕಾಲ ಕಳೆದಿದ್ದರೂ ನಿರೀಕ್ಷಿತ ಮಳೆಯಾಗದ ಹಿನ್ನೆಲೆಯಲ್ಲಿ ಈ ವಿಶೇಷ ಆಚರಣೆಗೆ ಚಾಲನೆ ನೀಡಲಾಯಿತು.

ಆಚರಣೆಯ ಅಂಗವಾಗಿ ಕೆಲ ಯುವಕರು ಮಹಿಳೆಯರ ವೇಷ ಧರಿಸಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಜನಪದ ಗೀತೆಗಳನ್ನು ಹಾಡಿದರು. ಗುರ್ಜಿ ಗುರ್ಜಿ ಅಡ್ಡಾಡಿ ಬಂದೆ, ಹಳ್ಳ-ಕೊಳ್ಳ ತಿರುಗಾಡಿ ಬಂದೆ, ಕಾರಮಳೆ ಕಪ್ಪತ್ತ ಮಳೆ, ಸುರಿಮಳೆಯೋ ಸುರಿಮಳೆಯೋ ಎಂಬ ಹಾಡುಗಳ ಮೂಲಕ ಮಳೆರಾಯನನ್ನು ಪ್ರಾರ್ಥಿಸಿದರು. ಗ್ರಾಮಸ್ಥರು ಭಕ್ತಿಭಾವದಿಂದ ಈ ಸಂಪ್ರದಾಯದಲ್ಲಿ ಪಾಲ್ಗೊಂಡು ಉತ್ತಮ ಮಳೆಯಾಗುವಂತೆ ದೇವರಲ್ಲಿ ಬೇಡಿಕೊಂಡರು.

ಕಟಿಗೇರ ಹಾಗೂ ಹಕ್ಕಿಯರ ಓಣಿಯ ಯುವಕರು ಮತ್ತು ರೈತರು ಪಟ್ಟಣದ ಪ್ರಮುಖ ದೇವಸ್ಥಾನಗಳು ಹಾಗೂ ದರ್ಗಾಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಸಗಣಿಯಿಂದ ನೆಲದ ಮೇಲೆ ದೇವತೆಯ ಚಿತ್ರ ಬಿಡಿಸಿ, ಅದರ ಮೇಲೆ ಹುಲ್ಲು ಇಟ್ಟು ಗುರ್ಜಿ ಪೂಜೆ ನೆರವೇರಿಸಲಾಯಿತು. ಮನೆ ಮನೆಗೆ ತೆರಳಿ ಜನಪದ ಗೀತೆ ಹಾಡುತ್ತ ಕಾಳು, ಕಡಿ ಸೇರಿದಂತೆ ವಿವಿಧ ಧಾನ್ಯ ಸಂಗ್ರಹಿಸಿ, ಬಳಿಕ ಅವುಗಳನ್ನು ದೇವಸ್ಥಾನಕ್ಕೆ ಅರ್ಪಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಅಬ್ದುಲ್ ಕಟಗಿ ಮಹಿಳೆಯ ವೇಷಧರಿಸಿ ಗಮನ ಸೆಳೆದರೆ, ಹುಸೇನಬಾಷ ಗುಡಿಹೂಲ ಹಾಗೂ ಅಬ್ದುಲ್ ಗುರ್ಜಿಯ ಪಾತ್ರ ನಿರ್ವಹಿಸಿದರು. ನಾಗಪ್ಪ ಮೋಟಗಿ, ಭೀಮಪ್ಪ ಇಟಗಿ, ರೆಹಮಾನಸಾಬ್, ಸಿದ್ದಪ್ಪ, ಮಾರುತಿ, ನಾಗಪ್ಪ ಹಳ್ಳಿಗುಡಿ, ಮಲ್ಲಪ್ಪ, ದಾದುಸಾಬ್‌, ರಾಜಮಹ್ಮದ್, ರಂಜಾನಸಾಬ್‌, ಮಹಮದ್ ಸಾಬ್, ಮೈನು, ಯೂಸುಫ್ ಖಾಜಾ, ಮೈಬುಸಾಬ್, ಹುಸೇನಸಾಬ್ ಸೇರಿದಂತೆ ಅನೇಕ ರೈತರು ಮತ್ತು ಯುವಕರು ಭಾಗವಹಿಸಿದ್ದರು.