ಸಾರಾಂಶ
ಗುರುಮಠಕಲ್ ಪಟ್ಟಣದಲ್ಲಿ ಮಳೆ, ಚಳಿ ಎನ್ನದೇ ಅರೆ ಹುಚ್ಚರಂತೆ ಅಲೆಯುತ್ತಿದ್ದ ನಿರ್ಗತಿಕ ಮಾನಸಿಕ ಅಸ್ವಸ್ಥೆ ಮಹಿಳೆಯು ಜಿಲ್ಲಾಡಳಿತದ ಕಾಳಜಿಯಿಂದ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಮಹಿಳೆಯು ಗುರುಮಠಕಲ್ ನಗರದ ಬೀದಿಬದಿಯಲ್ಲಿ ಅಲೆಯುವ ವಿಚಾರ ಮಾಧ್ಯಮಗಳಿಂದ ತಿಳಿದ ಜಿಲ್ಲಾಧಿಕಾರಿ ಡಾ. ಸುಶೀಲಾ, ಅವರನ್ನು ಮಹಿಳಾ ಹಾರೈಕೆ ಕೇಂದ್ರಕ್ಕೆ ಸೇರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿ ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಗುರುಮಠಕಲ್ ಪಟ್ಟಣದಲ್ಲಿ ಮಳೆ, ಚಳಿ ಎನ್ನದೇ ಅರೆ ಹುಚ್ಚರಂತೆ ಅಲೆಯುತ್ತಿದ್ದ ನಿರ್ಗತಿಕ ಮಾನಸಿಕ ಅಸ್ವಸ್ಥೆ ಮಹಿಳೆಯು ಜಿಲ್ಲಾಡಳಿತದ ಕಾಳಜಿಯಿಂದ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಮಹಿಳೆಯು ಗುರುಮಠಕಲ್ ನಗರದ ಬೀದಿಬದಿಯಲ್ಲಿ ಅಲೆಯುವ ವಿಚಾರ ಮಾಧ್ಯಮಗಳಿಂದ ತಿಳಿದ ಜಿಲ್ಲಾಧಿಕಾರಿ ಡಾ. ಸುಶೀಲಾ, ಅವರನ್ನು ಮಹಿಳಾ ಹಾರೈಕೆ ಕೇಂದ್ರಕ್ಕೆ ಸೇರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿ ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಗುರುಮಠಕಲ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ಮೇಲ್ವಿಚಾರಕಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಗಳು ಆ ಮಹಿಳೆಯನ್ನು ವಶಕ್ಕೆ ಪಡೆದುಕೊಂಡು ಜಿಲ್ಲಾಧಿಕಾರಿ ಅವರ ಆದೇಶದ ಮೇರೆಗೆ ನಗರದಲ್ಲಿನ ವಸತಿ ರಹಿತರ ಆಶ್ರಯ ಕೇಂದ್ರದ ಅಧೀನಕ್ಕೆ ಒಪ್ಪಿಸಿದರು.
ನನ್ನ ಹೆಸರು ಸುರತಿಕ. ತಂದೆ ಶ್ರೀರಾಮ್, ತಾಯಿ ರುಕ್ಮನಿಭಾಯಿ ಎಂದು ಆಕೆಯೇ ಹೇಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಖಿನ್ನತೆಗೆ ಒಳಗಾದಂತೆ ಕಾಣುವ ಮಹಿಳೆಯು ಮಾಸಿದ ಹರಕಲು ಬಟ್ಟೆ, ಗಂಟು ಕಟ್ಟಿದ ತಲೆ ಕೂದಲು ಇದ್ದುದ್ದರಿಂದ ಆಕೆಯ ನೋವುಗಳನ್ನು ಯಾರೂ ಆಲಿಸಿಲ್ಲ. ವಸತಿ ರಹಿತರ ಆಶ್ರಯ ಕೇಂದ್ರವನ್ನು ನಿರ್ವಹಣೆ ಮಾಡುತ್ತಿರುವ ಭಾರತಾಂಬೆ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಭೀಮಾಶಂಕರ ದೊಡ್ಡಮನಿ ಮತ್ತು ಸಂಸ್ಥೆಯ ಸಿಬ್ಬಂದಿ ವರ್ಗದವರು ಆಕೆಯ ತಲೆ ಕೂದಲು ಕತ್ತರಿಸಿ, ಸ್ನಾನ ಮಾಡಿಸಿ, ಒಳ್ಳೆಯ ಬಟ್ಟೆಯನ್ನು ತೊಡಿಸಿದ್ದಾರೆ. ಸಾಮಾನ್ಯ ಜನರಂತೆ ಹೊಸ ಬದುಕಿಗೆ ಕಾಲಿಡುವಂತೆ ಮಾಡಿದ್ದಾರೆ.ಈ ವೇಳೆ ನಗರಸಭೆಯ ಸಮುದಾಯ ಸಂಘಟನಾ ಅಧಿಕಾರಿ ಭೀಮಣ್ಣ ವೈದ್ಯ ಮಹಿಳಾ ಕೇಂದ್ರಕ್ಕೆ ಭೇಟಿ ನೀಡಿ, ಮಹಿಳೆಯ ಆರೋಗ್ಯ ತಪಾಸಣೆ ಮಾಡಿ, ಸೂಕ್ತ ವ್ಯವಸ್ಥೆ ಕಲ್ಪಿಸಲು ಕೇಂದ್ರದ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.