ಗುರುಬಸವ ಸಾಮೂಹಿಕ ಪ್ರಾರ್ಥನೆ ಕೃತಿ ಲೋಕಾರ್ಪಣೆ

| Published : Jun 01 2024, 12:47 AM IST

ಸಾರಾಂಶ

ಭಾಲ್ಕಿ ಹಿರೇಮಠ ಸಂಸ್ಥಾನದಲ್ಲಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಪ್ರೊ.ಜಗನ್ನಾಥ ಕಮಲಾಪೂರೆ ಮತ್ತು ಬಾಬು ಬಿ.ಮಡಕಿ ಸಂಪಾದನೆಯ ಗುರುಬಸವ ಸಾಮೂಹಿಕ ಪ್ರಾರ್ಥನೆ ಕೃತಿ ಲೋಕಾರ್ಪಣೆ ಮಾಡಲಾಯಿತು.

ಭಾಲ್ಕಿ: ಭಾಲ್ಕಿ ಹಿರೇಮಠ ಸಂಸ್ಥಾನದಲ್ಲಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಪ್ರೊ.ಜಗನ್ನಾಥ ಕಮಲಾಪೂರೆ ಮತ್ತು ಬಾಬು ಬಿ.ಮಡಕಿ ಸಂಪಾದನೆಯ "ಗುರುಬಸವ ಸಾಮೂಹಿಕ ಪ್ರಾರ್ಥನೆ’ ಕೃತಿ ಲೋಕಾರ್ಪಣೆ ಮಾಡಲಾಯಿತು.

ಮನ್ನಳ್ಳಿ ಗ್ರಾಮದ ದಂಪತಿ ನಿರ್ಮಲಾ ವಿಶ್ವನಾಥ ಚಿಮ್ಮಾ ಇದಲಾಯಿ ಅವರು ಅಪ್ಪಟ ಬಸವಭಕ್ತರು. ಹೃದಯದ ತುಂಬಾ ಬಸವಣ್ಣನವರನ್ನು ತುಂಬಿಕೊಂಡವರು. ಎಡದ ಕೈಯಲ್ಲಿ ಲಿಂಗಪೂಜೆ, ಬಲದ ಕೈಯಲ್ಲಿ ಜಂಗಮ (ಸಮಾಜ) ಸೇವೆ ಎಂಬ ಬಸವವಾಣಿ ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡವರು. ಇವರ ಮೊಮ್ಮಕ್ಕಳಾದ ರತ್ನ ಹಾಗೂ ಶಿವಲಿಂಗವರ ದೀಕ್ಷಾ ಕಾರ್ಯ, ಶರಣತತ್ವದ ಹಾಲು ಹಾಗೂ ಕಿರಗುಣಿ ಸಮಾರಂಭದ ಸವಿನೆನಪಿಗಾಗಿ ಈ ಕೃತಿ ಪ್ರಕಟಿಸುತ್ತಿರುವುದು ಇವರ ಬಸವಸೇವೆಗೆ ಹಿಡಿದ ಕನ್ನಡಿಯಾಗಿದೆ.

ಸಮಾರಂಭಕ್ಕೆ ಬಂದ ಅತಿಥಿಗಳಿಗೆ ಈ ಕಿರು ಪುಸ್ತಕ ಉಡುಗೊರೆಯಾಗಿ ಕೊಡುವ ಮೂಲಕ ಬಸವತತ್ವ ಪ್ರಚಾರ ಮಾಡುತ್ತಿರುವುದು ಬಹಳ ಸಂತೋಷದ ವಿಷಯ. ಇವರ ಬಸವತತ್ವ ಸೇವೆ ಮತ್ತು ಕಳಕಳಿ ಮೆಚ್ಚುವಂತಹದ್ದು.

ಪ್ರಾರ್ಥನೆ ಮಾಡುವುದರಿಂದ ಮನುಷ್ಯ ಮಾನಸಿಕವಾಗಿ ನೆಮ್ಮದಿಯಿಂದ ಇರುತ್ತಾನೆ. ದಿನಾಲು ಪ್ರಾರ್ಥನೆ ಮಾಡುವುದರಿಂದ ಮನುಷ್ಯನ ಮನಸ್ಸು ಶಾಂತ-ಸಮಾಧಾನದಿಂದ ಇರುತ್ತದೆ. ಮಹಾತ್ಮ ಗಾಂಧೀಜಿಯವರ ಜೀವನದಲ್ಲಿ ದಿನನಿತ್ಯ ಪ್ರಾರ್ಥನೆ ಮಾಡುತ್ತಿದ್ದರು. ಶರಣರು, ಸಂತರು, ಮಹಾತ್ಮರು ಪ್ರಾರ್ಥನೆಗೆ ಹೆಚ್ಚಿನ ಮಹತ್ವ ಕೊಟ್ಟಿದ್ದರು. ಆ ಪ್ರಾರ್ಥನೆ ಮೂಲಕ ತಮ್ಮ ಮನಃಶಾಂತವಾಗಿಟ್ಟುಕೊಳ್ಳುತ್ತಿದ್ದರು. ನಾವೆಲ್ಲರೂ ನಮ್ಮ ನಿತ್ಯ ಬದುಕಿನಲ್ಲಿ ಪ್ರಾರ್ಥನೆ ಮಾಡುತ್ತ ನಮ್ಮ ಜೀವನ ನೆಮ್ಮದಿ-ಶಾಂತ-ಸಮಾಧಾನದಿಂದ ನಡೆಸೋಣ ಎಂದು ಪೂಜ್ಯರು ಆಶೀರ್ವಚನ ನೀಡಿದರು.

ಗುರುಬಸವ ಪಟ್ಟದ್ದೇವರು ಸಮ್ಮುಖ ವಹಿಸಿದ್ದರು. ಪ್ರೊ. ಜಾಧವ ಕಲಬುರಗಿ ಅವರಿಂದ ಕೃತಿ ಲೋಕಾರ್ಪಣೆ ಮಾಡಲಾಯಿತು. ಕಾಶಿನಾಥ ಚಿದ್ರೆ, ಬಸವರಾಜ ಅನೀಲಕುಮಾರ, ಶರಣಮ್ಮ, ಶೃತಿ, ರತ್ನಶ್ರೀ, ಶಿವಲಿಂಗ, ಮಲ್ಲಿಕಾರ್ಜುನ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.