ಸಾರಾಂಶ
ಯಲಬುರ್ಗಾ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಗನಹಾಳ ಹಾಗೂ ಕರಮುಡಿ, ಚಿಕ್ಕೋಪ ಸೇರಿದಂತೆ ನಾನಾ ಶಾಲೆಯಲ್ಲಿ ಅದ್ಧೂರಿ ಶಾಲಾ ಪ್ರಾರಂಭೋತ್ಸವ ನಡೆಯಿತು. ವಿದ್ಯಾರ್ಥಿಗಳಿಗೆ ಹೂವು ನೀಡಿ ಸ್ವಾಗತಿಸಲಾಯಿತು.
ಯಲಬುರ್ಗಾ: ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಗನಹಾಳ ಹಾಗೂ ಕರಮುಡಿ, ಚಿಕ್ಕೋಪ ಸೇರಿದಂತೆ ನಾನಾ ಶಾಲೆಯಲ್ಲಿ ಅದ್ಧೂರಿ ಶಾಲಾ ಪ್ರಾರಂಭೋತ್ಸವ ನಡೆಯಿತು.
ಶಾಲಾ ಪ್ರಾರಂಭೋತ್ಸವ ಪ್ರಯುಕ್ತ ಮಕ್ಕಳಿಗೆ ಹೂ ನೀಡಿ ಸ್ವಾಗತಿಸಲಾಯಿತು. ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ, ಕ್ಷೀರಭಾಗ್ಯ ಯೋಜನೆಯಡಿ ಬಿಸಿ ಹಾಲು ವಿತರಣೆ ಮಾಡಲಾಯಿತು. ಮಧ್ಯಾಹ್ನ ಶಾಲೆಯಲ್ಲಿ ವಿದ್ಯಾರ್ಥಿಗಳು ಬಿಸಿಯೂಟ, ಸಿಹಿಯೂಟ ಸವಿದರು.ಬಳಿಕ ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಫ್.ಎಂ. ಕಳ್ಳಿ ಮಕ್ಕಳಿಗೆ ಸಿಹಿಯೂಟ ವಿತರಿಸಿ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಮಕ್ಕಳಿಗೆ ಸಿಹಿಯೂಟ ನೀಡುವ ಮೂಲಕ ಮೊದಲ ದಿನದಿಂದಲೇ ಹಾಜರಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ಇನ್ನೂ ತಾಲೂಕಿನ ಕರಮುಡಿ, ಮಾರನಾಳ, ಚಿಕ್ಕೋಪ ಸೇರಿದಂತೆ ನಾನಾ ಶಾಲೆಗಳಲ್ಲಿ ವಿಶೇಷವಾದ ಕರಿಗಡಬು, ಹೋಳಿಗೆ, ಶಿರಾ ಇನ್ನಿತರ ಸಿಹಿಯೂಟವನ್ನು ಶಾಲಾ ಮಕ್ಕಳಿಗೆ ಉಣಬಡಿಸಿದ್ದಾರೆ ಎಂದರು.
ಶಾಲೆಯ ಅಂದ ಹೆಚ್ಚಿಸಲು ಸ್ಥಳೀಯ ಶಾಲಾ ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳ ಪ್ರಯತ್ನ ಮೆಚ್ಚುವಂತಹದ್ದಾಗಿದೆ. ಹಳೆಯ ವಿದ್ಯಾರ್ಥಿಗಳು ಶಾಲಾಭಿವೃದ್ಧಿಗೆ ಕೈಜೋಡಿಸುತ್ತಿರುವುದು ಅಭಿನಂದನಾರ್ಹವಾಗಿದೆ ಎಂದು ಹೇಳಿದರು.ಆನಂತರ ಮಕ್ಕಳೊಂದಿಗೆ ಕುಳಿತು ಊಟ ಸವಿದರು. ಇದೇ ಸಂದರ್ಭದಲ್ಲಿ ಸಂಗನಾಳ ಗ್ರಾಮದ ಶಾಲೆಯ ಹಳೆಯ ವಿದ್ಯಾರ್ಥಿಗಳು ಶಾಲೆ ಅಂದಗೊಳಿಸುವ ಸಲುವಾಗಿ ₹೧೦ ಸಾವಿರ ಮೌಲ್ಯದ ಬಣ್ಣವನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ ಮತ್ತು ಸ್ವತಃ ಹಳೆಯ ವಿದ್ಯಾರ್ಥಿಗಳು ಪೇಂಟಿಂಗ್ ಮಾಡಿಸುತ್ತಿರುವುದು ವಿಶೇಷವಾಗಿದೆ.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶರಣಪ್ಪ ಕಟ್ಟೆಪ್ಪನವರ, ಷಣ್ಮುಖಪ್ಪ ಯರಂಗಳಿ, ಪರಮೇಶ್ ಪತ್ತಾರ, ಮುಖ್ಯಗುರು ಶರಣಯ್ಯ ಸರಗಣಾಚಾರ, ಶಿಕ್ಷಕರಾದ ಸಂಗಪ್ಪ ಶ್ಯಾಗೋಟಿ, ಉಮೇಶ್ ಕೋಳೂರು, ಬಸವರಾಜ ನವಲಗುಂದ, ಮಂಜುನಾಥ ಬೂದಿಹಾಳ, ಮೀನಾಕ್ಷಮ್ಮ, ವೀರಾಕ್ಷಿ ಮತ್ತಿತರರು ಇದ್ದರು.