ನಾರಾಯಣ ಗುರು ಹಾಗೂ ಮಹಾತ್ಮ ಗಾಂಧಿಯವರ ಐತಿಹಾಸಿಕ ಸಂವಾದ ಶತಮಾನೋತ್ಸವ ಡಿ. 3ರಂದು ಕೊಣಾಜೆಯಲ್ಲಿ ನಡೆಯಲಿದೆ.

ಮಂಗಳೂರು: ವರ್ಕಲ ಶಿವಗಿರಿ ಮಠ, ಮಂಗಳೂರು ವಿವಿಯ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಆಶ್ರಯದಲ್ಲಿ ನಾರಾಯಣ ಗುರು ಹಾಗೂ ಮಹಾತ್ಮ ಗಾಂಧಿಯವರ ಐತಿಹಾಸಿಕ ಸಂವಾದ ಶತಮಾನೋತ್ಸವ ಡಿ. 3ರಂದು ನಡೆಯಲಿದೆ ಎಂದು ಕಾರ್ಯಕ್ರಮದ ಕೇಂದ್ರ ಸಂಘಟನಾ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ತಿಳಿಸಿದ್ದಾರೆ.ನಗರದ ಸರ್ಕ್ಯೂಟ್‌ ಹೌಸ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 3ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ಥಾಪನೆಯಾಗಿರುವ ಶ್ರೀನಾರಾಯಣಗುರು ಪೀಠದ ಒಂದು ಭಾಗದ ಉದ್ಘಾಟನೆ ನಡೆಯಲಿದೆ. ಇದೇ ವೇಳೆ ಇನ್ನೊಂದು ಭಾಗದ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಹೇಳಿದರು.ಮಧ್ಯಾಹ್ನದ ಬಳಿಕ ಬ್ರಹ್ಮಶ್ರೀ ನಾರಾಯಣಗುರು ಮತ್ತು ಮಹಾತ್ಮಗಾಂಧಿ ಕುರಿತು ಐತಿಹಾಸಿಕ ಸಂವಾದ ಶತಮಾನೋತ್ಸವ ನಡೆಯಲಿದೆ. ಮಂಗಳೂರು ವಿವಿ ಕ್ಯಾಂಪಸ್‌ನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಶಿವಗಿರಿ ಮಠದ ಸ್ವಾಮೀಜಿ ಸಚ್ಚಿದಾನಂದ, ಕೆ.ಸಿ. ವೇಣುಗೋಪಾಲ್‌ ಸೇರಿದಂತೆ, ವಿವಿಧ ಧರ್ಮಗಳ ಧಾರ್ಮಿಕ ಮುಖಂಡರು, ಸಚಿವರು ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.ವೈಕಂ ಸತ್ಯಾಗ್ರಹದ ವೇಳೆ 1925ರ ಮಾರ್ಚ್‌ 9 ಮತ್ತು 10ರ ಎರಡು ದಿನ ಗಾಂಧೀಜಿ ಕೇರಳದ ವೈಕಂನಲ್ಲಿ ಉಳಿದಿದ್ದರು. ಅಸಮಾನತೆ, ಅಸ್ಪೃಶ್ಯತೆ ತಾಂಡವವಾಡುತ್ತಿದ್ದ ಆ ಸಂದರ್ಭದಲ್ಲಿ ಹಿಂದೂಗಳು ಅನ್ಯ ಮತಕ್ಕೆ ಮತಾಂತರಗೊಳ್ಳುತ್ತಿದ್ದರು. ಅದನ್ನು ತಡೆಯಲು ನಾರಾಯಣಗುರುಗಳ ನೆರವನ್ನು ಪಡೆಯುವ ಬಗ್ಗೆ ಡಾ. ಪಲ್ಪುರಂತಹ ಸಾಮಾಜಿಕ ಸುಧಾರಕರು ಗಾಂಧೀಜಿಗೆ ತಿಳಿಸಿದಾಗ, ಗಾಂಧೀಜಿ ಶಿವಗಿರಿಗೆ ಪ್ರಯಾಣಿಸಿದ್ದರು. ಅಲ್ಲಿ ವನಜಾಕ್ಷಿ ಮಠದಲ್ಲಿ ನಾರಾಯಣಗುರು ಮತ್ತು ಗಾಂಧೀಜಿ ಸಮಾಗಮದ ವೇಳೆ ಸಹಸ್ರಾರು ಮಂದಿ ಜಮಾಯಿಸಿದ್ದರು. ಈ ಮೂಲಕ ಅವರಿಬ್ಬರ ಸಮಾಗಮದ ಪ್ರತೀಕವಾಗಿ ಐತಿಹಾಸಿಕ ಕಾರ್ಯಕ್ರಮ ನಡೆಸಲು ತೀರ್ಮಾನಿಸಿ ಅದನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆಸಲು ನಿರ್ಧರಿಸಲಾಯಿತು ಎಂದವರು ಹೇಳಿದರು.

ಕೇಂದ್ರ ಸಂಘಟನಾ ಸಮಿತಿ ರಕ್ಷಣಾಧಿಕಾರಿ ಜ್ಞಾನ ತೀರ್ಥ ಸಾಮೀಜಿ, ಪ್ರಧಾನ ಸಂಚಾಲಕ ಪಿ.ವಿ. ಮೋಹನ್‌, ಗೌರವ ಉಪಾಧ್ಯಕ್ಷರಾದ ನವೀನ್‌ ಡಿ ಸುವರ್ಣ, ಸೂರ್ಯಕಾಂತ್‌ ಜೆ. ಸುವರ್ಣ, ಗೌರವ ಪ್ರಧಾನ ಕಾರ್ಯದರ್ಶಿ ರಕ್ಷಿತ್‌ ಶಿವರಾಂ, ಪದ್ಮರಾಜ್‌, ಸದಾಶಿವ ಉಳ್ಳಾಲ್‌, ನವೀನ್‌ ಡಿಸೋಜಾ ಮತ್ತಿತರರಿದ್ದರು.