ಭಾವೈಕ್ಯತೆ, ಕೋಮುಸೌಹಾರ್ದ ಎಂದರೆ ನಮಗೆ ಗೋಚರಿಸುವುದು ಗುರು-ಶಿಷ್ಯರಾದ ಕಳಸದ ಗುರು ಗೋವಿಂದ ಭಟ್ಟರು ಮತ್ತು ಸಂತ ಶಿಶುನಾಳ ಶರೀಫರು ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ। ಮಹೇಶ್‌ ಜೋಶಿ ಅಭಿಪ್ರಾಯಪಟ್ಟರು.

 ಬೆಂಗಳೂರು: ಭಾವೈಕ್ಯತೆ, ಕೋಮುಸೌಹಾರ್ದ ಎಂದರೆ ನಮಗೆ ಗೋಚರಿಸುವುದು ಗುರು-ಶಿಷ್ಯರಾದ ಕಳಸದ ಗುರು ಗೋವಿಂದ ಭಟ್ಟರು ಮತ್ತು ಸಂತ ಶಿಶುನಾಳ ಶರೀಫರು ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ। ಮಹೇಶ್‌ ಜೋಶಿ ಅಭಿಪ್ರಾಯಪಟ್ಟರು.

ಕರ್ನಾಟಕ ಸುಗಮ ಸಂಗೀತ ಪರಿಷತ್‌ನಿಂದ ಬಸವನಗುಡಿಯ ಕಹಳೆ ಬಂಡೆ ಉದ್ಯಾನವನದಲ್ಲಿ ‘ಮರೆಯಲಾಗದ ಮಹನೀಯರ ನೆನಪುಗಳು’ ಮಾಲಿಕೆಯಡಿ ಆಯೋಜಿಸಿದ್ದ ಡಿ.ವಿ.ಜಿ., ಸಂತ ಶಿಶುನಾಳ ಶರೀಫರು ಮತ್ತು ಪುತಿನ ನುಡಿ ನಮನ ಕಾರ್ಯಕ್ರಮದಲ್ಲಿ ಶರೀಫರ ಕುರಿತು ಅವರು ಮಾತನಾಡಿದರು.

ಗುರು ಗೋವಿಂದ ಭಟ್ಟರು ಮತ್ತು ಶರೀಫರನ್ನು ನೋಡಿದರೆ ಭಾವೈಕ್ಯತೆ, ಕೋಮುಸೌಹಾರ್ದತೆ ನಮ್ಮ ಕಣ್ಣ ಮುಂದೆ ಬರುತ್ತದೆ. ಮಂದಿರ, ಮಸೀದಿ, ಚರ್ಚ್‌ನಲ್ಲಿ ಶರೀಫರು ಸಮಾನತೆಯನ್ನು ಕಂಡವರು.ಬರುವ ಜುಲೈ 3 ರಂದು ಶಿಶುನಾಳದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್‌ ಮತ್ತು ಕಸಾಪ ಸಹಯೋಗದಲ್ಲಿ ಶರೀಫರಿಗೆ ಸಂಬಂಧಿಸಿದ ಅತ್ಯುತ್ತಮ ಕಾರ್ಯಕ್ರಮವೊಂದನ್ನು ಆಯೋಜಿಸಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ಕವಿತೆಗಳ ‘ನಿನ್ನ ಮರೆಯೂ ಮಾತು’ ಧ್ವನಿ ಸಾಂದ್ರಿಕೆಯನ್ನೂ ಇದೇ ಸಂದರ್ಭದಲ್ಲಿ ಕವಿ ಬಿ.ಆರ್‌.ಲಕ್ಷ್ಮಣ ರಾವ್‌ ಲೋಕಾರ್ಪಣೆಗೊಳಿಸಿದರು.

ವೈ.ಕೆ.ಮುದ್ದುಕೃಷ್ಣ, ನಗರ ಶ್ರೀನಿವಾಸ ಉಡುಪ, ಡಾ.ಕಿಕ್ಕೇರಿ ಕೃಷ್ಣಮೂರ್ತಿ, ಸೀಮಾ ರಾಯ್ಕರ್‌ ಮತ್ತಿತರರು ಗೀತ ಗಾಯನ ನಡೆಸಿಕೊಟ್ಟರು. ನಿರ್ದೇಶಕ ಟಿ.ಎನ್‌.ಸೀತಾರಾಂ, ಡಾ.ಹೇಮಾ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.