ಸಾರಾಂಶ
ದಾವಣಗೆರೆ : ತಂದೆ-ತಾಯಿ ರಕ್ತ ಸಂಬಂಧವಾದರೆ ಗುರು ಭಾವಸಂಬಂಧ ಎಂದು ರಾಮಕೃಷ್ಣ ಆಶ್ರಮದ ಕಾರ್ಯದರ್ಶಿ ಸ್ವಾಮಿ ತ್ಯಾಗೀಶ್ವರನಂದಜೀ ನುಡಿದರು.
ಹರಿಹರ ತಾಲೂಕಿನ ಕೊಂಡಜ್ಜಿಯಲ್ಲಿರುವ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಗುರುಪೂರ್ಣಿಮ ಕಾರ್ಯಕ್ರಮದಲ್ಲಿ ಗುರುವಿನ ಮಹತ್ವವನ್ನು ಕುರಿತು ಅವರು ಮಾತನಾಡಿದರು.
ಗುರುವು ಬ್ರಹ್ಮ ವಿಷ್ಣು ಮಹೇಶ್ವರರ ಪ್ರತೀಕವಾಗಿದ್ದು, ಸಮಾಜದ ಕಳೆಯನ್ನು ಕಿತ್ತೊಗೆಯಲು ವಿದ್ಯಾರ್ಥಿಗಳಿಗೆ ದಾರಿ ದೀಪವಾಗುತ್ತಾನೆ. ಸ್ವಾಮಿ ವಿವೇಕಾನಂದರ ಸ್ಫೂರ್ತಿದಾಯಕ ನುಡಿಗಳನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭಾರತವು ಮಹಾನ್ ಗುರುಗಳ ದೇಶ, ಈ ನಿಟ್ಟಿನಲ್ಲಿ ಭಾರತವು ವಿಶ್ವಗುರುವಾಗುವಲ್ಲಿ ಈ ಗುರುಪೂರ್ಣಿಮಾ ಕಾರ್ಯಕ್ರಮವು ನೆರವಾಗಲಿದೆ ಎಂದು ಆಶಿಸಿದರು.
ಡಿವೈಎಸ್‌ಪಿ ಪಿ.ಬಿ.ಪ್ರಕಾಶ್ ಮಾತನಾಡಿ, ಗುರುವು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಮಾರ್ಗ. ಆದ್ದರಿಂದ ಮಕ್ಕಳು ಗುರುಗಳ ಸಂಸರ್ಗದಲ್ಲಿ ತಮ್ಮನ್ನು ತಾವು ಉತ್ತಮ ಆದರ್ಶ ವ್ಯಕ್ತಿಗಳಾಗಿಸಿಕೊಳ್ಳಬೇಕು ಎಂದು ಆಶಿಸಿದರು.
ಶಾಲೆ ಪ್ರಾಚಾರ್ಯ ಎಚ್.ವಿ. ಯತೀಶ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಮಕ್ಕಳು ಹಾಗೂ ಸಂಗೀತ ಶಿಕ್ಷಕರು ಗುರುವಿನ ಮಹತ್ವ ಕುರಿತ ಶ್ಲೋಕಗಳು ಹಾಗೂ ಗೀತೆಗಳನ್ನು ಹಾಡುವ ಮೂಲಕ ನುಡಿನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಐಶ್ವರ್ಯ, ರಾಗಿಣಿ, ಶಿಲ್ಪಾ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.