ಜೀವನದಲ್ಲಿ ಸಾಧನೆ ಮಾಡಬೇಕಾದರೆ ನಿರ್ದಿಷ್ಟ ಗುರಿ ಅದಕ್ಕೆ ಸಮನಾಗಿ ಗುರುವಿನ ಮಾರ್ಗದರ್ಶನ ಬೇಕಿದ್ದು, ವಿದ್ಯಾರ್ಥಿಗಳು ಈಗಿನಿಂದಲೇ ಗುರು ಹಿರಿಯರಿಗೆ ಗೌರವ ಕೊಡುವ ಮನೋಭಾವ ಮೂಡಿಸಿಕೊಳ್ಳಬೇಕಿದೆ ಎಂದು ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಜೀವನದಲ್ಲಿ ಸಾಧನೆ ಮಾಡಬೇಕಾದರೆ ನಿರ್ದಿಷ್ಟ ಗುರಿ ಅದಕ್ಕೆ ಸಮನಾಗಿ ಗುರುವಿನ ಮಾರ್ಗದರ್ಶನ ಬೇಕಿದ್ದು, ವಿದ್ಯಾರ್ಥಿಗಳು ಈಗಿನಿಂದಲೇ ಗುರು ಹಿರಿಯರಿಗೆ ಗೌರವ ಕೊಡುವ ಮನೋಭಾವ ಮೂಡಿಸಿಕೊಳ್ಳಬೇಕಿದೆ ಎಂದು ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು. ತಾಲೂಕಿನ ಮಲ್ಲಿದೇವಿಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯನಿರ್ವಹಿಸಿ ನಿವೃತ್ತರಾದ ತಿಮ್ಮಯ್ಯನವರಿಗೆ ಗ್ರಾಮಸ್ಥರು ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ವಿದ್ಯೆ ಕಲಿಸಿದ ಗುರುಗಳನ್ನು ಮಾತನಾಡಿಸುವುದೇ ಕಷ್ಟವಾಗಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸೇರಿಕೊಂಡು ವಿದ್ಯೆಕಲಿಸಿದ ತಮ್ಮ ನೆಚ್ಚಿನ ಗುರುಗಳಿಗೆ ಹಾಗೂ ಅವರ ಶ್ರೀಮತಿಯವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡುತ್ತಿರುವುದು ಸಂತಸ ತಂದಿದೆ. ಹಿಂದೆಲ್ಲ ಗುರುವಿನ ಗುಲಾಮನಾಗುವ ತನಕ ಮುಕ್ತಿ ದೊರೆಯುವುದಿಲ್ಲ ಎಂದು ಭಕ್ತಿಯಿಂದ ವಿದ್ಯೆ ಕಲಿಯುತ್ತಿದ್ದರು. ಆದರೆ ಕಾಲ ಬದಲಾಗಿ ಗುರು ಹಿರಿಯರಿಗೆ ಗೌರವಾಧಾರಗಳು ಇಲ್ಲದಂತಾಗಿದೆ. ಭಾರತ ಸಾಧು, ಸಂತರ, ಮಹಾನ್ ಜ್ಞಾನಿಗಳ ನಾಡಾಗಿದ್ದು, ಪ್ರಪಂಚವೇ ಭಾರತದ ಸಂಸ್ಕೃತಿಗೆ ತಲೆ ಬಾಗುತ್ತಿದೆ. ಆದರೆ ಯುವ ಜನತೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿ ನಮ್ಮ ದೇಶದ ಸಂಸ್ಕೃತಿಯನ್ನು ಮರೆಯುತ್ತಿರುವುದು ಆತಂಕದ ವಿಷಯ. ಆದ್ದರಿಂದ ಯುವ ಜನತೆ ಸಂಸ್ಕಾರಯುತ ಶಿಕ್ಷಣ ಪಡೆದುಕೊಂಡು ಗುರು-ಹಿರಿಯರು, ಹೆತ್ತವರನ್ನು ಗೌರವಿಸುವ ಮೂಲಕ ಅವರೊಟ್ಟಿಗೆ ಸಹಬಾಳ್ವೆಯ ಜೀವನ ನಡೆಸಬೇಕು. ಇಂತಹ ಕಾರ್ಯಕ್ರಮಗಳು ಇಂದಿನ ಹಾಗೂ ಮುಂದಿನ ವಿದ್ಯಾರ್ಥಿಗಳಿಗೆ ಪ್ರೇರಕವಾಗಲಿ ಎಂದರು.ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ತಳಿರು ತೋರಣಗಳಿಂದ ಗ್ರಾಮ ಕಂಗೊಳಿಸುತಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಗಳವರನ್ನು ಎತ್ತಿನಗಾಡಿಯಲ್ಲಿ ಮೆರವಣಿಗೆ ಮಾಡಿದರು. ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಅಚ್ಚುಮೆಚ್ಚಿನ ಗುರುಗಳಾಗಳಾದ ತಿಮ್ಮಯ್ಯ ದಂಪತಿಯವರಿಗೆ ಪ್ರೀತಿಯಿಂದ ಸನ್ಮಾನಿಸಿ ಹೃದಯಷ್ಪರ್ಶಿ ಬೀಳ್ಕೊಡುಗೆ ನೀಡಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಯ್ಯ, ಕಿವಾನಿ ಕೇರ್ಸ್ ಬೆಂಗಳೂರಿನ ಎಂ.ಡಿ. ಸತ್ಯಮೂರ್ತಿ ಸೇರಿದಂತೆ ಹಿರಿಯ ವಿದ್ಯಾರ್ಥಿಗಳು, ಕಿರಿಯ ವಿದ್ಯಾರ್ಥಿಗಳು, ಗ್ರಾಮದ ಮುಖಂಡರು ಭಾಗವಹಿಸಿದ್ದರು.