ಗುರುಬಲಕ್ಕಿದೆ ಶಿಷ್ಯನ ಬದುಕು ಬದಲಿಸುವ ಶಕ್ತಿ

| Published : Jul 13 2025, 01:18 AM IST

ಗುರುಬಲಕ್ಕಿದೆ ಶಿಷ್ಯನ ಬದುಕು ಬದಲಿಸುವ ಶಕ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಂತ್ರಿಕ ಯಾಂತ್ರಿಕ ಬೆಳವಣಿಗೆಯ ಯುಗದಲ್ಲಿ ಮಾನವೀಯ ಮೌಲ್ಯಗಳು, ಉತ್ತಮ ಜೀವನ ಮಾರ್ಗದರ್ಶನಕ್ಕೆ ಸಾಕ್ಷಿಯಾಗುವ ಸಂಗೀತ ಸಾಹಿತ್ಯಾದಿಯಾಗಿ ಕಲೆಗಳು ವಿಜೃಂಭಿಸಿ ಜೀವನೋನ್ನತಿಯ ಶಿಕ್ಷಣ ನೀಡಬೇಕಾಗಿದೆ

ಹಾನಗಲ್ಲ: ಸಮರ್ಥ ಗುರುವಿನ ಶಕ್ತಿ ಅರಿತು ಗುರುವಿನ ಮಾರ್ಗದರ್ಶನ ಪಡೆದರೆ ಶಿಷ್ಯ ಗಣದ ಉನ್ನತಿ ಸಾಧ್ಯ ಎಂಬ ಸತ್ಯಕ್ಕೆ ಪುಷ್ಟಿ ನೀಡುವ ಸಂಸ್ಕಾರ ಮನೆಗಳಿಂದಲೇ ಆರಂಭವಾಗಬೇಕು ಎಂದು ಸಂಸ್ಕಾರ ಭಾರತಿ ಕರ್ನಾಟಕ ಉತ್ತರ ಪ್ರಾಂತ ಸಂಚಾಲಕ ಶ್ರೀನಿವಾಸ ಘೋಷ್ ತಿಳಿಸಿದರು.

ಇಲ್ಲಿನ ವೆಂಕಟೇಶ್ವರ ಮಂದಿರದ ಸಭಾಭವನದಲ್ಲಿ ಸಂಸ್ಕಾರ ಭಾರತಿ ಜಿಲ್ಲಾ ಘಟಕ ಆಯೋಜಿಸಿದ ಗುರುಪೂಜಾ ಹಾಗೂ ಸಂಗೀತ ಸಂಭ್ರಮ, ಕಲಾವಿದರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಗುರು ಮಾರ್ಗದರ್ಶನ ನಮ್ಮ ಬದುಕನ್ನೇ ಬದಲಿಸಬಲ್ಲದು. ಶಿಷ್ಯನ ಉನ್ನತಿಗೆ ಗುರುವಿನ ಸಂಕಲ್ಪವೂ ಇರುತ್ತದೆ. ನಮ್ಮ ಕಲಾ ವೈಭವ ಕಳೆ ಕಳೆದುಕೊಳ್ಳುತ್ತಿದೆ. ಕಲೆಯ ಉನ್ನತಿಗೆ ಆದ್ಯತೆ ನೀಡಲೇಬೇಕಾದ ಕಾಲದಲ್ಲಿ ನಾವಿದ್ದೇವೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಪ್ರೊ. ಮಾರುತಿ ಶಿಡ್ಲಾಪೂರ, ತಾಂತ್ರಿಕ ಯಾಂತ್ರಿಕ ಬೆಳವಣಿಗೆಯ ಯುಗದಲ್ಲಿ ಮಾನವೀಯ ಮೌಲ್ಯಗಳು, ಉತ್ತಮ ಜೀವನ ಮಾರ್ಗದರ್ಶನಕ್ಕೆ ಸಾಕ್ಷಿಯಾಗುವ ಸಂಗೀತ ಸಾಹಿತ್ಯಾದಿಯಾಗಿ ಕಲೆಗಳು ವಿಜೃಂಭಿಸಿ ಜೀವನೋನ್ನತಿಯ ಶಿಕ್ಷಣ ನೀಡಬೇಕಾಗಿದೆ ಎಂದರು.

ಜಿಲ್ಲಾ ಕಾರ್ಯದರ್ಶಿ ಶ್ರವಣ ಕುಲಕರ್ಣಿ ಮಾತನಾಡಿ, ನಮ್ಮ ಜೀವನಶೈಲಿ ಬದಲಾಗಬೇಕಾಗಿದೆ. ಗುರುವಿನ ಕಾರುಣ್ಯವಿಲ್ಲದೆ ಏನೂ ಸಾಧ್ಯವಿಲ್ಲ. ಭಾರತೀಯ ಕಲಾ ಸಂಸ್ಕೃತಿ ಉಳಿಸಿ ಬೆಳೆಸುವ ಅಗತ್ಯವಿದೆ. ಮಕ್ಕಳ ಮನದಲ್ಲಿ ಸುಸಂಸ್ಕೃತಿಯ ಬೀಜ ಬಿತ್ತಿ ಬೆಳೆಯೋಣ ಎಂದರು.

ಹಿರಿಯ ಕಲಾವಿದ ಎಸ್.ಎಸ್. ಮೂರಮಟ್ಟಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಂಸ್ಕಾರ ಭಾರತಿ ಜಿಲ್ಲಾ ಕಾರ್ಯಕಾರಿ ಸದಸ್ಯ ಕಲಾವಿದ ನರಸಿಂಹ ಕೋಮಾರ, ಜಗದೀಶ ಮಡಿವಾಳರ, ರಾಮಕೃಷ್ಣ ಸುಗಂಧಿ, ಬಾಲಚಂದ್ರ ಅಂಬಿಗೇರ, ಜಿಲ್ಲಾ ಕಾರ್ಯದರ್ಶಿ ಶ್ರವಣ ಕುಲಕರ್ಣಿ, ಅಕ್ಷಯ ಜೋಶಿ, ಶಶಿಕಲಾ ಅಕ್ಕಿ, ಡಾ.ಎಂ. ಪ್ರಸನ್ನಕುಮಾರ, ಕಲಾವಿದ ಶಿವಯ್ಯ ಇಟಗಿಮಠ, ಮಂಜುನಾಥ ಸಣ್ಣಿಂಗಮ್ಮನವರ, ಶ್ರೀಪಾದ ಅಕ್ಕಿವಳ್ಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸರಸ್ವತಿ ಸಂಗೀತ ವಿದ್ಯಾಲಯದ ಕಲಾವಿದೆ ಪ್ರತೀಕ್ಷಾ ನರಸಿಂಹ ಕೋಮಾರ, ಶ್ರೀಗುರುಕುಮಾರೇಶ ಕೃಪಾ ಸಂಗೀತ ತರಬೇತಿ ಕೇಂದ್ರದ ಕಲಾವಿದ ಗಗನದೀಪ ಜಗದೀಶ ಮಡಿವಾಳರ ಹಾಗೂ ಸಂಗಡಿಗರಿಂದ ಸಂಗೀತ ಸಂಭ್ರಮ ಕಾರ್ಯಕ್ರಮ ನಡೆಯಿತು. ಕಲಾವಿದ ಬಾಲಚಂದ್ರ ಅಂಬಿಗೇರ ಜನಪದ ಹಾಗೂ ರಂಗಗೀತೆ ಹಾಡಿದರು. ಅಮೃತಾ ಬೆಳಕೇರಿ, ನಿರೀಕ್ಷಾ ಮಾನೋಜಿ, ವಿಜಯಲಕ್ಷ್ಮಿ ಕಳ್ಳಿ ಭರತ ನಾಟ್ಯದ ಮೂಲಕ ಸಹೃದಯರ ಮನ ಸೆಳೆದರು.