ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ವಿದ್ಯಾರ್ಥಿಗಳಿಗೆ ವಿದ್ಯೆ, ಬುದ್ದಿ ಕಲಿಸಿ ಸಮಾಜದಲ್ಲಿ ಉತ್ತಮ ಭವಿಷ್ಯ ರೂಪಿಸುವಲ್ಲಿ ಗುರುಗಳ ಪಾತ್ರ ಮಹತ್ವವಾದದ್ದು ಎಂದು ಹಾವೇರಿ, ಹಾನಗಲ್‌ನ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಎಸ್.ಕೆ.ಜನಾರ್ಧನ್ ಹೇಳಿದರು.ತಾಲೂಕಿನ ಸುಂಕಾತೊಣ್ಣೂರು ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹಸಂಗಮ ಕಾರ್‍ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಒಬ್ಬ ವಿದ್ಯಾರ್ಥಿ ಜೀವನದಲ್ಲಿ ಎಷ್ಟೇ ಎತ್ತರಕ್ಕೇರಿದರೂ ಗುರುಗಳ ಮುಂದೆ ತುಂಬಾ ಚಿಕ್ಕವನಾಗಿರುತ್ತಾನೆ ಎಂದರು.
ಮನೆಗಳಲ್ಲಿ ವಿದ್ಯಾವಂತ ಪೋಷಕರು ಇಲ್ಲದ ದಿನಗಳಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಗುರುಗಳು ಪ್ರಮುಖ ಪಾತ್ರವಹಿಸಿದ್ದಾರೆ. ಅಂತಹ ಗುರುಗಳನ್ನು ಪ್ರತಿಯೊಬ್ಬರೂ ಭಕ್ತಿ, ಭಾವದಿಂದ ನೋಡಬೇಕು ಎಂದು ತಿಳಿಸಿದರು.ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಬಗ್ಗೆ ಆಸಕ್ತಿ ವಹಿಸಬೇಕು. ಪ್ರಸ್ತುತ ಶಿಕ್ಷಣದಲ್ಲಿ ಗುಣಮಟ್ಟ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಜೀವನದಲ್ಲಿ ಶಿಸ್ತು, ಸಂಯಮ, ಶ್ರದ್ಧೆ ಹಾಗೂ ಗುರು- ಹಿರಿಯರು, ತಂದೆ- ತಾಯಿಗಳನ್ನು ಗೌರವಿಸುವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯಶಿಕ್ಷಕಿ ಸರಿತಾ ಮಾತನಾಡಿ, ಜೀವನದಲ್ಲಿ ಕಷ್ಟಪಟ್ಟು ಅಧ್ಯಯನ ಮಾಡಿದರೆ ದೊಡ್ಡಮಟ್ಟದಲ್ಲಿ ಬೆಳೆಯಲು ಸಾಧ್ಯ. ಇತ್ತೀಚಿನ ವಿದ್ಯಾರ್ಥಿಗಳಿಗೆ ಕಷ್ಟದ ಬಗ್ಗೆ ಅರಿವು ಕಡಿಮೆಯಾಗುತ್ತಿದೆ. ಮನೆಗಳಲ್ಲೂ ಸಹ ಪೋಷಕರು ವಿದ್ಯಾರ್ಥಿಗಳಿಗೆ ಕಷ್ಟದ ಬಗ್ಗೆ ಅರಿವು ಮೂಡಿಸುತ್ತಿಲ್ಲ ಎಂದರು.ಮಕ್ಕಳು ಮೊಬೈಲ್ ಬಳಕೆ, ಧಾರಾವಾಹಿ ನೋಡುವುದು ಜಾಸ್ತಿಯಾಗಿದೆ. ಇವುಗಳಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇದೆ. ಆದರೆ, ವಿದ್ಯಾರ್ಥಿಗಳು ಒಳ್ಳೆಯದಕ್ಕಿಂತ ಕೆಟ್ಟದನ್ನು ಮಾತ್ರ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ತಮ್ಮ ಮಕ್ಕಳ ಭವಿಷ್ಯ ರೂಪಿಸುವುದಕ್ಕಾಗಿ ಪೋಷಕರು ಕಷ್ಟಪಟ್ಟು ಸಾಲ ಮಾಡಿ ಶಾಲೆಗೆ ಸೇರಿಸುತ್ತಾರೆ. ವಿದ್ಯಾರ್ಥಿಗಳು ಅದನ್ನು ದುರುಪಯೋಗ ಮಾಡಿಕೊಳ್ಳದೆ ಚನ್ನಾಗಿ ಓದಿ ಉನ್ನತ ಮಟ್ಟಕ್ಕೆ ಹೋಗುವ ಮೂಲಕ ಪೋಷಕರು ಹಾಗೂ ಶಾಲೆಗೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದು ಹೇಳಿದರು.
ಪ್ರೌಢಶಾಲಾ ಶಿಕ್ಷಕರಾದ ಕೆ.ಬಿ.ಲಲಿತಕುಮಾರ್, ಆರ್.ನಾಗರಾಜು, ಎಸ್.ಎನ್.ವರದರಾಜನ್, ಸಿ.ಟಿ.ಪುಟ್ಟಲಕ್ಷ್ಮಮ್ಮ, ವಿ.ಜ್ಯೋತಿ, ಚಲುವರಾಜು, ಪುರುಷೋತ್ತಮ್ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕ್ಷರಾದ ಮರೀಗೌಡ, ನಾಗಭೂಷಣ್, ಶಂಕರಯ್ಯ, ಜಿ.ಆರ್.ನರಸಿಂಹ, ರವಿ, ಶೀಲಾವತಿ, ವಿಜಯಕುಮಾರಿ, ರವೀಂದ್ರ ಇವರನ್ನು ಹಿರಿಯ ವಿದ್ಯಾರ್ಥಿಗಳು ಅಭಿನಂದಿಸಿದರು.ಸಮಾರಂಭದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾರಾಯಣ್, ಸಾವಯವ ಕೃಷಿಕ ದೇವೇಗೌಡ ಸೇರಿ ಹಿರಿಯ ವಿದ್ಯಾರ್ಥಿಗಳು ಹಾಜರಿದ್ದರು.