ಸದ್ಗುರು ಎಲ್ಲರಿಗೂ ದೊರೆಯುವುದು ದುರ್ಲಬ. ಗುರುವಿನ ಕರುಣೆ ದೊಡ್ಡದಿದೆ. ಯಾರು ಗುರುವನ್ನು ಅರಿಯುತ್ತಾನೆಯೋ ಅವನು ಧನ್ಯತೆ ಪಡೆದುಕೊಳ್ಳುತ್ತಾನೆ. ಗುರು ಸೇವೆಯಿಂದ ಮುಕ್ತಿ ಲಭಿಸುತ್ತದೆ.

ಧಾರವಾಡ:

ನಿಜಭಕ್ತಿಗೆ ಗುರು ತಲೆಬಾಗುವನು. ಗುರುಸೇವೆಯನ್ನು ಯಾರು ಮಾಡುತ್ತಾರೆಯೋ ಅವರು ಸಾರ್ಥಕ ಬದುಕು ಬದುಕಬಲ್ಲರು ಎಂದು ದೇವರಹುಬ್ಬಳ್ಳಿ ಸಿದ್ಧಾಶ್ರಮಯದ ಸಿದ್ದಶಿವಯೋಗಿ ಸ್ವಾಮೀಜಿ ಹೇಳಿದರು.

ತಾಲೂಕಿನ ದೇವರಹುಬ್ಬಳ್ಳಿ ಸಿದ್ಧಾಶ್ರಮದ ಉತ್ತರಾಧಿಕಾರಿಯಾಗಿ ನಾಗಭೂಷಣ ಶಿವಯೋಗಿಗಳು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಡೆದ ಗುರು ಪೂರ್ಣಿಮೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸದ್ಗುರು ಎಲ್ಲರಿಗೂ ದೊರೆಯುವುದು ದುರ್ಲಬ. ಗುರುವಿನ ಕರುಣೆ ದೊಡ್ಡದಿದೆ. ಯಾರು ಗುರುವನ್ನು ಅರಿಯುತ್ತಾನೆಯೋ ಅವನು ಧನ್ಯತೆ ಪಡೆದುಕೊಳ್ಳುತ್ತಾನೆ. ಗುರು ಸೇವೆಯಿಂದ ಮುಕ್ತಿ ಲಭಿಸುತ್ತದೆ ಎಂದರು.

ಗುರು ಕೂಡ ಶಿಷ್ಯರನ್ನು ಯಾವುದೇ ರಾಗದ್ವೇಷವಿಲ್ಲದೇ ಪ್ರೀತಿಸಬೇಕು. ಬಡವ-ಬಲ್ಲಿದ ಎನ್ನದೆ ಎಲ್ಲರನ್ನೂ ಸಮಾನವಾಗಿ ಕಂಡು ಅವರಿಗೆ ಮುಕ್ತಿ ಮಾರ್ಗ ತೋರಿಸಬೇಕು ಎಂದು ಹೇಳಿದರು.

ಸಿದ್ಧಾಶ್ರಮದ ಕಿರಿಯ ಶ್ರೀಗಳಾದ ನಾಗಭೂಷಣ ಶಿವಯೋಗಿ ಸ್ವಾಮೀಜಿ ಮಾತನಾಡಿ, ಗುರು ದೇವತೆಗಳಿಗಿಂತಲೂ ಶ್ರೇಷ್ಠನಾಗಿದ್ದಾನೆ. ಹರ ಮುನಿದರೂ ಗುರು ಕಾಯುವನು. ಸಾಯುಜ್ಯದಿಂದ ದೇವರು ಮುಕ್ತಿಕೊಡಬಹುದು. ಆದರೆ, ಜೀವನ ಮುಕ್ತಿಯನ್ನು ಗುರು ಮಾತ್ರ ಕೊಡಬಲ್ಲ. ಹೀಗಾಗಿ ಗುರುವಿನ ಕರುಣೆ ಎಲ್ಲರನ್ನು ಕಾಯುತ್ತದೆ ಎಂದರು.

ಮಾತೋಶ್ರೀ ಜಾಣಮ್ಮ ತಾಯಿ ಮಾತನಾಡಿ, ಜೀವನಮುಕ್ತಿಗಾಗಿ ಪ್ರತಿಯೊಬ್ಬರಿಗೂ ಒಬ್ಬ ಗುರು ಬೇಕೇಬೇಕು. ಗುರುಮುಟ್ಟದ ಕಾಯ ಮುಕ್ತಿಯಾಗದು ಎಂದರು.

ಯಾದವಾಡ ಸಿದ್ಧಾಶ್ರಮದ ಡಾ. ಆನಂದ ಸ್ವಾಮೀಜಿ, ಮಾತೋಶ್ರಿ ರತ್ನಮ್ಮತಾಯಿ ಉಪಸ್ಥಿತರಿದ್ದರು. ಸಾವಿರಾರು ಭಕ್ತರು ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.