ಸಾರಾಂಶ
ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಮೂಡುಬಿದಿರೆ ಆಲಂಗಾರು ಶ್ರೀ ಬಡಗು ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ ಮೊಕ್ಕಾಂ ನಡೆಸಿದರು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಮರವೊಂದು ವಿಶಾಲವಾಗಿ ವಿಸ್ತರಿಸಿ ಬೆಳೆದಾಗ ಅದರ ನೆರಳೂ ವಿಸ್ತಾರವಾಗುತ್ತದೆ. ತಂಪು ವಿಸ್ತರಿಸಿ ಹಣ್ಣು ಹಂಪಲು ಎಲ್ಲವೂ ಅಭಿವೃದ್ಧಿಯಾಗುತ್ತದೆ. 108 ವರ್ಷಗಳ ಬೆಳವಣಿಗೆಯ ಇತಿಹಾಸವಿರುವ ಸೊಸೈಟಿ ರಾಷ್ಟ್ರೀಕೃತ ಬ್ಯಾಂಕುಗಳನ್ನೂ ಮೀರಿ ಜನತೆ ಬೇಡಿಕೆ ಮತ್ತು ಭರವಸೆಯಿಂದ ವಿಶ್ವಾಸವಿರಿಸಿ ಬೆಳೆಸಿದ್ದಾರೆ ಎಂದು ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.ಭಾನುವಾರ ಇಲ್ಲಿನ ಮೂಡುಬಿದಿರೆ ಕೋ ಆಪರೇಟಿವ್ ಸರ್ವೀಸ್ ಸೊಸೈಟಿಗೆ ಅನುಗ್ರಹ ಭೇಟಿ ನೀಡಿ ಆಶೀರ್ವಚನ ನೀಡಿದರು. ಶ್ರೀಗಳನ್ನು ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್, ಉಪಾಧ್ಯಕ್ಷ ಗಣೇಶ್ ನಾಯಕ್ , ವಿಶೇಷ ಕರ್ತವ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ. ಧಾರ್ಮಿಕ ಬರಮಾಡಿಕೊಂಡರು. ಬಳಿಕ ಸೊಸೈಟಿ ವತಿಯಿಂದ ಶ್ರೀಗಳವರನ್ನು ಗೌರವಿಸಲಾಯಿತು.
ಬಾಹುಬಲಿ ಪ್ರಸಾದ್ ಸ್ವಾಗತಿಸಿದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಸೊಸೈಟಿಯ ನಿರ್ದೇಶಕರು, ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಕೆ. ರಘುವೀರ ಕಾಮತ್, ರಜನಿ ಕುಮಾರ್, ಸಿಬಂದಿವರ್ಗ, ಉದ್ಯಮಿ ಕೆ. ಶ್ರೀಪತಿ ಭಟ್, ವಿಶ್ರಾಂತ ಪ್ರಾಧ್ಯಾಪಕ ಡಾ. ಪುಂಡಿಕಾಯ್ ಗಣಪಯ್ಯ ಭಟ್, ನ್ಯಾಯವಾದಿ ಮನೋಜ್ ಶೆಣೈ ಮತ್ತಿತರರಿದ್ದರು.ಆಲಂಗಾರಿನಲ್ಲಿ ಗುರುಭಿಕ್ಷೆ, ಪಾದುಕಾ ಪೂಜೆ: ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಮೂಡುಬಿದಿರೆ ಆಲಂಗಾರು ಶ್ರೀ ಬಡಗು ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ ಮೊಕ್ಕಾಂ ನಡೆಸಿದರು. ಶ್ರೀಗಳು ಪಾದುಕಾ ಪೂಜೆ, ಗುರುಭಿಕ್ಷಾ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಈಶ್ವರ ಭಟ್ ಆಲಂಗಾರು, ಕೆ ಶ್ರೀಪತಿ ಭಟ್, ಎಂ ಚಂದ್ರಶೇಖರ, ವೆಂಕಟೇಶ್ ಉಪಾಧ್ಯಾಯ, ವಿನೋದ್ ಕುಮಾರ್, ದೇವಾನಂದ ಭಟ್ ಬೆಳುವಾಯಿ ಮೊದಲಾದವರು ಇದ್ದರು.