ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಅಜ್ಞಾನ ಹಾಗೂ ಬಡತನವನ್ನು ನಿರ್ಮೂಲನೆ ಮಾಡುವ ಶಕ್ತಿ ಶಿಕ್ಷಣಕ್ಕೆ ಮಾತ್ರ ಇದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ನಡೆದ ಗುರು ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣದಿಂದ ಮಾತ್ರ ಸಮಾಜದ ಬದಲಾವಣೆ ಮತ್ತು ಸುಧಾರಣೆ ಸಾಧ್ಯ ಎಂದು ಆಶೀರ್ವಚನ ನೀಡಿದರು. ಶಿಕ್ಷಣದಿಂದ ಉನ್ನತ ಮಟ್ಟದ ಹುದ್ದೆಗಳನ್ನು ಪಡೆಯುವುದೇ ಮುಖ್ಯ ಉದ್ದೇಶವಾಗಬಾರದು. ತಾನು ಯಾರ ಬಳಿಯೋ ಕೆಲಸ ಮಾಡುವ ಬದಲು ಹತ್ತಾರು ಮಂದಿಗೆ ಉದ್ಯೋಗ ಕೊಡುವ ಹಂತಕ್ಕೆ ಬೆಳೆಯಬೇಕು. ಇದರಿಂದ ಶಿಕ್ಷಣ ಪಡೆದಿದ್ದಕ್ಕೂ ಸಾರ್ಥಕವಾಗಲಿದ್ದು ಹೆತ್ತವರಿಗೆ ಮತ್ತು ಹುಟ್ಟಿದ ಊರಿಗೂ ಕೀರ್ತಿ ಸಿಗಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಓದು ಹಾಗೂ ಬರೆಯುವುದನ್ನು ಕಲಿತರೆ ಎಲ್ಲವೂ ಮುಗಿದು ಹೋಗುತ್ತದೆಯೇ. ಖಂಡಿತ ಇಲ್ಲ. ಇಲ್ಲಿಂದಲೇ ಎಲ್ಲವೂ ಆರಂಭವಾಗುವುದು. ಓದಿ ವಿದ್ಯಾವಂತರಾಗಿ ದುಡಿಮೆಯೊಂದಿಗೆ ಉತ್ತಮ ಬದುಕು ಕಟ್ಟಿಕೊಳ್ಳಬೇಕು. ನಂತರ ತಾನು ಹುಟ್ಟಿ ಬೆಳೆದ ಊರಿನ ಬಗ್ಗೆಯೂ ಚಿಂತನೆ ಮಾಡಬೇಕು. ಎಲ್ಲರನ್ನೂ ಒಗ್ಗೂಡಿಸಿ ಊರಿನ ಅಭಿವೃದ್ಧಿಗೆ ಶ್ರಮಿಸಬೇಕು. ಶೈಕ್ಷಣಿಕ ಹಂತದಿಂದಲೇ ಸಮಾಜಮುಖಿ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಹಣ ಕಟ್ಟಿ ಶಾಲೆಗೆ ಮಕ್ಕಳನ್ನು ಸೇರಿಸಿದರೆ ಸಾಕು ನಮ್ಮ ಜವಾಬ್ದಾರಿ ಮುಗಿಯಿತು ಎಂದುಕೊಳ್ಳುವ ಅದೆ? ಪಾಲಕರಿದ್ದಾರೆ. ಅದು ತಪ್ಪು ಕಲ್ಪನೆ. ಮಕ್ಕಳ ಶೈಕ್ಷಣಿಕ ವ್ಯವಸ್ಥೆ ಮೇಲೆ ಕಣ್ಣಾಡಿಸಬೇಕು. ತಾವು ಮಕ್ಕಳೊಂದಿಗೆ ಕುಳಿತು ಮಕ್ಕಳ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಅರಿತು ಅದಕ್ಕೆ ತಕ್ಕಂತೆ ಆದ್ಯತೆ ನೀಡಬೇಕು. ಯಶಸ್ಸಿನ ಶಿಖರವನ್ನು ಏರುವವರೆಗೂ ಬೆಂಗಾವಲಾಗಿ ನಿಲ್ಲಬೇಕು. ಮಕ್ಕಳು ಸಾಧನೆಯ ಗುರಿ ಮುಟ್ಟಿದ ಕ್ಷಣವೇ ಹೆತ್ತವರ ಬದುಕು ಸಾರ್ಥಕವಾಗುತ್ತದೆ. ಶ್ರಮ ಫಲಿಸಿದಂತಾಗಲಿದೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳ ಹಿಂದೆ ನಿಲ್ಲಬೇಕು ಎಂದು ಸಲಹೆ ನೀಡಿದರು. ಯಾರು ಯಾರು ತಮ್ಮ ಪಾಲಕರೊಂದಿಗೆ ಆಂಗ್ಲ ಭಾಷೆಯಲ್ಲಿ ಮಾತನಾಡುತ್ತೀರಿ ಎಂದು ವಿದ್ಯಾರ್ಥಿಗಳಿಗೆ ಪ್ರಶ್ನಿಸಿದ ಚುಂಚಶ್ರೀಗಳು, ಮನೆಯಲ್ಲಿ ಸದಾ ಮಾತೃಭಾಷೆ ಕನ್ನಡ ಪ್ರಚಲಿತದಲ್ಲಿರಲಿ. ಆದರೆ ವ್ಯಾಪಾರ, ವ್ಯವಹಾರ ಹಾಗೂ ಶೈಕ್ಷಣಿಕ ವ್ಯವಸ್ಥೆಯ ಪ್ರಗತಿ ಸಲುವಾಗಿ ಆಂಗ್ಲ ಭಾಷೆ ಕಲಿಕೆ ಇರಲಿ. ಜೊತೆಗೆ ಪಾಲಕರಿಗೆ ಆಂಗ್ಲ ಭಾಷಾ ತಿಳಿದಿದ್ದರೆ ತಮ್ಮ ಮಕ್ಕಳ ಶೈಕ್ಷಣಿಕ ವಿಚಾರಗಳಿಗೆ ಸಹಕಾರಿಯಾಗಲಿದೆ ಎಂದರು.

ನಂತರ ಚುಂಚಶ್ರೀಗಳು ವಿದ್ಯಾರ್ಥಿಗಳ ಮಧ್ಯೆ ನಿಂತು ಓಂಕಾರ ಹಾಗೂ ಕೆಲ ಶ್ಲೋಕಗಳನ್ನು ಹೇಳಿಕೊಟ್ಟರು. ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಕಬ್ಬಳಿ ಶಾಖಾ ಮಠದ ಶಿವಪುತ್ರನಾಥ ಸ್ವಾಮೀಜಿ, ಶಾಸಕ ಸಿ. ಎನ್. ಬಾಲಕೃಷ್ಣ, ಮಾಜಿ ಎಂಎಲ್ಸಿ ಎಂ. ಎ. ಗೋಪಾಲಸ್ವಾಮಿ, ಹಿರಿಯ ಸಾಹಿತಿ ತಮ್ಮಣ್ಣಗೌಡ, ಮುಖ್ಯ ಶಿಕ್ಷಕ ಟಿ.ತಿಮ್ಮೇಗೌಡ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.