ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ ಸೆ. ೫ ಮತ್ತು ೬ರಂದು ಶಾಸ್ತ್ರೀಯ ನೃತ್ಯಗಳ ರಾಷ್ಟ್ರೀಯ ಹಬ್ಬ ಗುರುದೇವೋತ್ಸವ ಕಾರ್ಯಕ್ರಮವನ್ನು ನಗರದ ವಿವೇಕಾನಂದ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕಿ ಡಾ.ಪಿ.ಎಂ.ಚೇತನ ರಾಧಾಕೃಷ್ಣ ಹೇಳಿದರು.ಸೆ.೫ರಂದು ಸಂಜೆ ೪ ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಡಾ.ಕುಮಾರ್ ವಹಿಸುವರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಶುಭ ಹಾರೈಸುವರು. ಎಸ್‌ಎಲ್‌ವಿ ಬುಕ್ ಪ್ರೈವೇಟ್ ಲಿಮಿಟೆಡ್‌ನ ದಿವಾಕರ್‌ದಾಸ, ನಗರಸಭಾ ಸದಸ್ಯ ಎಂ.ಎನ್.ಶ್ರೀಧರ್ ಅತಿಥಿಗಳಾಗಿ ಭಾಗವಹಿಸುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದಿನ ಕಾರ್ಯಕ್ರಮದಲ್ಲಿ ಕರ್ನಾಟಕ ಜನಪದ ಅಕಾಡೆಮಿ ಸದಸ್ಯ ಗೊರವಾಲೆ ಚಂದ್ರಶೇಖರ್ ಅವರಿಗೆ ಗುರುದೇವ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ವೇದಿಕೆ ಕಾರ್ಯಕ್ರಮದ ಬಳಿಕ ಗುರುದೇವ ಅಕಾಡೆಮಿ ಕಿರಿಯ ಕಲಾವಿದರಿಂದ ಸಮೂಹ ಭರತನಾಟ್ಯ, ಬೆಂಗಳೂರಿನ ರೆಬಿನಾ ನಿತೀಶ್, ವಿದುಷಿ ಪಂಚಮಿ ನೆರೋಳು , ಪುತ್ತೂರಿನ ವಿದುಷಿ ನಿಶಿತ ಅವರಿಂದ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ, ಗುರುದೇವ ಅಕಾಡೆಮಿ ನಡೆಸಿದ ನೃತ್ಯಧಾರ-೨ ಕಲಾವಿದರಿಂದ ಸಮೂಹ ನೃತ್ಯ, ಬೆಂಗಳೂರಿನ ನೃತ್ಯಾಂಕುರ ವಿದ್ಯಾಪೀಠದ ಲೀಲಾ ಶಿಷ್ಯವೃಂದ ಹಾಗೂ ಶಿವಮೊಗ್ಗ ಚಿತ್ಕಲಾ ನೃತ್ಯ ವಿದ್ಯಾಲಯದ ಮಾಲ್ಹಸ ಶಿಷ್ಯ ವೃಂದದಿಂದ ಸಮೂಹ ಭರತನಾಟ್ಯ ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.ಸೆ.೬ರಂದು ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಅಧ್ಯಕ್ಷತೆಯನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಅಧ್ಯಕ್ಷತೆ ವಹಿಸುವರು. ಹಿಂದೂಸ್ತಾನಿ ಕಲಾವಿದ ಡಾ.ಮಣಿಕ್ ಬೆಂಗೇರಿ ಶುಭ ಹಾರೈಸುವರು. ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಜಿ.ಡಿ.ದಿನೇಶ್‌ಕುಮಾರ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಎಲ್.ಲೋಕೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್ ಅತಿಥಿಗಳಾಗಿ ಭಾಗವಹಿಸುವರು. ಅಂದು ಬೆಂಗಳೂರಿನ ಅನನ್ಯ ಕಲ್ಚರಲ್ ಅಕಾಡೆಮಿ ಸಂಸ್ಥಾಪಕ ಡಾ.ಆರ್.ವಿ.ರಾಘವೇಂದ್ರ ಅವರಿಗೆ ಗುರುದೇವ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ವೇದಿಕೆ ಕಾರ್ಯಕ್ರಮದ ಬಳಿಕ ಗುರುದೇವ ಲಲಿತಕಲಾ ಅಕಾಡೆಮಿಯ ಕಿರಿಯ ಕಲಾವಿದರಿಂದ ಸಮೂಹ ಭರತನಾಟ್ಯ, ಬೆಂಗಳೂರಿನ ಡಾ.ಸಹನಾ ಶಿಷ್ಯವೃಂದದವರಿಂದ ಸಮೂಹ ಭರತನಾಟ್ಯ, ಗುರುದೇವ ಅಕಾಡೆಮಿಯ ಗುರು ಡಾ.ಚೇತನಾ ರಾಧಾಕೃಷ್ಣ ಹಾಗೂ ಹಿರಿಯ ಶಿಷ್ಯವೃಂದದವರಿಂದ ಭರತನಾಟ್ಯ ಮಾರ್ಗ ಪ್ರದರ್ಶನಗೊಳ್ಳಲಿದೆ ಎಂದು ನುಡಿದರು.ಗೋಷ್ಠಿಯಲ್ಲಿ ಪಿ.ಎಂ.ರಾಧಾಕೃಷ್ಣ, ರಾಜನ್ ಉಪಸ್ಥಿತರಿದ್ದರು.