ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ನಾಡಿನ ಖ್ಯಾತ ಛಾಯಾಚಿತ್ರಗ್ರಾಹಕ ಗುರುದತ್ ಕಾಮತ್ (58) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ. ಅವಿವಾಹಿತರಾಗಿದ್ದ ಅವರು ಅಸಂಖ್ಯಾತ ಅಭಿಮಾನಿಗಳನ್ನು ಅಗಲಿದ್ದಾರೆ.ಕೆಲವು ದಿನಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ.ದೇಶಾದ್ಯಂತ ನೂರಾರು ಫೋಟೋಗ್ರಫಿ ತರಬೇತಿ ಶಿಬಿರಗಳನ್ನು ನಡೆಸಿದ್ದ ಗುರುದತ್, ನಾಡಿನ ಸಾವಿರಾರು ಮಂದಿ ಛಾಯಾಗ್ರಾಹಕರಿಗೆ ಗುರುಗಳಾಗಿದ್ದರು. ಅವರ ಅನೇಕ ಮಂದಿ ಶಿಷ್ಯರು ರಾಷ್ಟ್ರ- ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗೆದ್ದಿದ್ದಾರೆ. ಗುರುದತ್ ನೂರಾರು ಛಾಯಾಚಿತ್ರ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಕೆಲಸ ಮಾಡಿದ್ದರು. ಉಡುಪಿಯಲ್ಲಿ ತಮ್ಮದೇ ಆದ ಅಕ್ವೇರಿಯಸ್ ಎಂಬ ಸ್ಟುಡಿಯೋ ನಡೆಸುತ್ತಿದ್ದರು.ಕ್ಯಾಮರಾಗಳು ಮತ್ತು ಛಾಯಾಚಿತ್ರೀಕರಣಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡುವ ಸಾಮಾರ್ಥ್ಯವಿದ್ದ ಅವರು ಅಂತಾರಾಷ್ಟ್ರೀಯ ಮಟ್ಟದ ಛಾಯಾಗ್ರಾಹಕರನ್ನು ಸಿದ್ಧಗೊಳಿಸಿದ್ದರೂ ಅವರೆಂದೂ ಫೋಟೋಗ್ರಫಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರಲಿಲ್ಲ, ಪ್ರಶಸ್ತಿ, ಸನ್ಮಾನಗಳನ್ನು ಇಷ್ಟಪಡುತ್ತಿರಲಿಲ್ಲ.ಶಿರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರ ಎರಡು ಪರ್ಯಾಯಗಳ ಅವಧಿಯಲ್ಲಿ ಕೃಷ್ಣಮಠದ ಅಧಿಕೃತ ಛಾಯಾಚಿತ್ರಗ್ರಾಹಕರಾಗಿದ್ದ ಗುರುದತ್, ಪ್ರತಿದಿನವೂ ಹೊಸತನದಿಂದ ಕೂಡಿದ ಫೋಟೋಗಳನ್ನು ಸೆರೆ ಹಿಡಿದು ಮಠದ ವೆಬ್‌ಸೈಟ್‌ನಲ್ಲಿ ಪ್ರಕಟಿದ್ದರು. ಶಿರೂರು ಶ್ರೀಗಳು ಪ್ರತಿದಿನ ಶ್ರೀ ಕೃಷ್ಣನ ಅಲಂಕಾರ ಮಾಡುವಲ್ಲಿ ಸಿದ್ಧಹಸ್ತರಾಗಿದ್ದರು. ಗುರುದತ್ ಪ್ರತಿದಿನ ಅಲಂಕೃತ ಕೃಷ್ಣನ ಛಾಯಾಚಿತ್ರಗಳನ್ನು ಅಷ್ಟೇ ಸುಂದರವಾಗಿ ಚಿತ್ರೀಕರಿಸಿ ಹೊರಜಗತ್ತಿಗೆ ತೋರಿಸುತಿದ್ದರು. ಗುರುದತ್ ಸೆರೆಹಿಡಿದ 365 ದಿನಗಳ ಕೃಷ್ಣನ ಅಲಂಕಾರದ ಛಾಯಾಚಿತ್ರಗಳ ಪುಸ್ತಕವನ್ನೂ ಶಿರೂರು ಶ್ರೀಗಳು ಪ್ರಕಟಿಸಿದ್ದರು.