ಗುರುಗುಂಟಾ ಅಮರೇಶ್ವರ ಜಾತ್ರೆ: ಜಾನುವಾರು ವಹಿವಾಟು ದುಬಾರಿ

| Published : Mar 29 2024, 12:45 AM IST

ಸಾರಾಂಶ

ಜಾತ್ರೆಯಲ್ಲಿ ವಿವಿಧ ತಳಿಗಳ ಹಸು ನೋಡಲು ಆಗಮಿಸಿದ್ದ ಜನತೆ. ಕೃಷಿಪರಿಕರಗಳ ಮಾರಾಟವೂ ಜೋರು. ಲಿಂಗಸುಗೂರು ತಾಲೂಕಿನ ಗುರುಗುಂಟಾ ಅಮರೇಶ್ವರದ ಜಾನುವಾರು ಜಾತ್ರೆಯಲ್ಲಿ ರೈತರು ಮಾರಾಟಕ್ಕೆ ವಿವಿಧ ತಳಿಗಳ ಎತ್ತುಗಳನ್ನು ತಂದಿದ್ದರು.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ರೈತ ಜಾತ್ರೆ ಎಂದೇ ಪ್ರಸಿದ್ಧಿ ಪಡೆದ ಜಿಲ್ಲೆಯ ಗುರುಗುಂಟಾ ಅಮರೇಶ್ವರ ಜಾತ್ರೆಯಲ್ಲಿ ರೈತರ ಎತ್ತುಗಳಿಗೆ ಭಾರಿ ಬೇಡಿಕೆ ಇದ್ದು, ಜಾನುವಾರುಗಳು ವಹಿವಾಟು ದುಬಾರಿ ಲೆಕ್ಕದಲ್ಲಿ ನಡೆಯುತ್ತಿದೆ.

ಎತ್ತುಗಳಲ್ಲಿ ನಾನಾ ತಳಿಗಳಿವೆ ಪ್ರಮುಖವಾಗಿ ಜವಾರಿ, ಸೀಮೆ, ಕಿಲಾರಿ, ಮೈಸೂರು ಕಿಲಾರಿ, ಮಾಳಪಡಿ, ಜಮಖಂಡಿ ಸೇರಿದಂತೆ ಇವೆ. ಕಲ್ಲು ಅಡವಿ, ಕೆಂಪು ಮಣ್ಣಿನ ರೈತರು ಜವಾರಿ ತಳಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕೊಳ್ಳುತ್ತಾರೆ. ಇನ್ನೂ ಎರೆನಾಡಿನ ರೈತರು ದೊಡ್ಡ ಗಾತ್ರದ ಎತ್ತುಗಳ ಅಗತ್ಯ ಇರುತ್ತದೆ.

ಎತ್ತುಗಳನ್ನು ಕೊಂಡುಕೊಳ್ಳುವಾಗ ರೈತರು ಪ್ರಮುಖವಾಗಿ ಹಲ್ಲು, ಕೋಡು, ಕಾಲು, ಸುಳಿ-ಸೂತ್ರ ನೋಡುತ್ತಾರೆ. ಎಂತಹುದ್ದೆ ಎತ್ತುಗಳಾದರೂ ಜೋಡಿ ಚೆನ್ನಾಗಿದ್ದರೆ ಲಕ್ಷಕ್ಕಿಂತ ಕಡಿಮೆ ಇಲ್ಲದ ಬೆಲೆ ಮಾರಾಟವಾಗುತ್ತಿದೆ. ಕಲ್ಲು ಎಳೆದು ಬಹುಮಾನ ಪಡೆದ ಎತ್ತುಗಳ ನೋಡಲು ಜಾತ್ರೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ಲಿಂಗಸುಗೂರು ತಾಲೂಕಿನ ವಂದಲಿ ಹೊಸೂರಿನ ಶಿವಪ್ಪ ಗುಂತಗೋಳರವರ ಎತ್ತುಗಳು ಜನಾಕರ್ಷಣೆ ಪಡೆದಿದ್ದು, 5 ಲಕ್ಷದವರೆಗೂ ಬೇಡಿಕೆ ಸಲ್ಲಿಸಿದ್ದರು. ಆದರೆ ರೈತರು ಮಾರಾಟಕ್ಕೆ ಒಪ್ಪಿಲ್ಲ.

ಜಾನುವಾರುಗಳ ಜಾತ್ರೆಯಲ್ಲಿ ಕರ್ನಾಟಕ, ಆಂಧ್ರ, ಮಹಾರಾಷ್ಟ್ರದ ಜೊತೆಗೆ ವಿಜಯಪುರ, ಬಾಗಲಕೋಟೆ, ಜಮಖಂಡಿ, ದಾವಣಗೆರೆ ಸೇರಿದಂತೆ ಪ್ರಮುಖ ಪ್ರದೇಶಗಳಿಂದ ಎತ್ತುಗಳ ಖರೀದಿದಾರರು, ದಲ್ಲಾಳಿಗಳು ಆಗಮಿಸಿದ್ದರಿಂದ ಜಾತ್ರೆಯಲ್ಲಿ ಎತ್ತುಗಳ ಮಾರಾಟ ಜೋರಾಗಿ ನಡೆದಿದೆ.

ಬಿಸಿಲು ಬಸವಳಿದ ಜನರು:

ಜಾತ್ರೆಯಲ್ಲಿ ಎತ್ತುಗಳ ಮಾರಾಟ, ಖರೀದಿ ಜೋರಾಗಿ ನಡೆಯುತ್ತಿದೆ. ಆದರೆ ಭಾರಿ ಬಿಸಿಲು ಜಾತ್ರೆಗೆ ಬಂದ ದನ-ಕರುಗಳು ಹೈರಾಣಾಗಿದ್ದರೆ, ರೈತರು ತೀವ್ರ ಬಸವಳಿದಿದ್ದಾರೆ. ಕೆಲವರು ಶಾಮಿಯಾನ, ಪ್ಲಾಸ್ಟಿಕ್ ಚೀಲದ ಮೂಲಕ ನೆರಳು ಮಾಡಿಕೊಂಡು ಕುಳಿತಿದ್ದು, ಭಾರಿ ಬಿಸಿಲು ಜಾತ್ರೆಗೆ ಬಂದ ಜನರ ಜೀವ ಹಿಂಡುತ್ತಿದೆ.

ಜಾತ್ರೆಯಲ್ಲಿ ಜನ-ಜಾನುವಾರಗಳಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇದೆ. ಎತ್ತುಗಳು ಇದ್ದ ಸ್ಥಳಗಳಿಗೆ ಟ್ಯಾಂಕರ್‌ಗಳಿಂದ ನೀರು ಪೂರೈಕೆ ಮಾಡಲಾಗುತ್ತದೆ. ಜೊತೆಗೆ ನಾಲ್ಕಾರು ಕಡೆ ತೊಟ್ಟಿ ನಿರ್ಮಿಸಿ ನೀರು ಪೂರೈಕೆ ಮಾಡುತ್ತಿದ್ದಾರೆ.

ಇನ್ನೂ ಕೃಷಿಪರಿಕರಗಳ ಮಾರಾಟ ಜೋರಾಗಿ ನಡೆದಿದೆ. ಒಕ್ಕಲುತನ ಸಾಮಾನುಗಳ ಮಳಿಗೆಗಳು ಅಪಾರ ಸಂಖ್ಯೆಯಲ್ಲಿ ಹಾಕಲಾಗಿದೆ. ಜಾನುವಾರುಗಳಿಗೆ ಅಲಂಕಾರಿಕ ವಸ್ತುಗಳು ಸೇರಿದಂತೆ ಚಕ್ಕಡಿ, ಗಳೆದ ಸಾಮಾನು, ಬಿತ್ತುವ, ರಾಶಿ ಮಾಡುವ ಸಲಕರಣೆಗಳು, ಕುಂಟೆ-ರಂಟೆ, ನೇಗಿಲು, ಕುಡಗೋಲು, ಗುದ್ದಲಿ, ಪಕಾಶಿ, ಆರೆ, ಸುತ್ತಿಗೆ, ಸಲಾಕೆ, ಬಿದುರಿನಬುಟ್ಟಿ, ಕುಡ, ಬಳೆ, ಬಾಣ್ಣಿ, ಹಗ್ಗ, ಚಿಕ್ಕ, ಹಣೆಗೆಜ್ಜೆ, ಕೊರಳುಗೆಜ್ಜೆ, ಗಂಟೆ, ಗಲಿಫ್ ಒಕ್ಕಲುತನಕ್ಕೆ ಸಂಬಂಧಿಸಿದ ಎಲ್ಲಾ ಸಾಮಾನುಗಳ ಜಾತ್ರೆಯಲ್ಲಿ ದೊರೆಯುತ್ತವೆ. ಬರಗಾಲ ಇದ್ದರೂ ಉತ್ತಮ ಮಾರಾಟ ಇದೆ ಎಂದು ಎತ್ತುಗಳ ಅಲಂಕಾರಿಕ ವಸ್ತುಗಳ ತಯಾರಿಸಿ ಮಾರಾಟ ಮಾಡುವ ವಿಲಾಸ ಗುರುಗುಂಟಿ ತಿಳಿಸಿದರು.