ಮಾಳದಲ್ಲಿರುವ ಗುರುಕುಲ ವಿದ್ಯಾ ವರ್ಧಕ ಸಂಘದ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ 26ರಿಂದ 28ರವರೆಗೆ ನಡೆಯಲಿದೆ
ಕಾರ್ಕಳ: ಮಾಳದಲ್ಲಿರುವ ಗುರುಕುಲ ವಿದ್ಯಾ ವರ್ಧಕ ಸಂಘದ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ 26ರಿಂದ 28ರವರೆಗೆ ನಡೆಯಲಿದೆ ಎಂದು ಗುರುಕುಲದ ಪ್ರಭಾಕರ ಜೋಶಿ ಅವರು ಹೇಳಿದರು.
ಅವರು ಕಾರ್ಕಳ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಎರಡು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿರುವ ಈ ಶಿಕ್ಷಣ ಸಂಸ್ಥೆಯಲ್ಲಿ ಪಾಠಗಳ ಜೊತೆಗೆ ಯೋಗ, ಭಗವದ್ಗೀತೆ, ಅಬಾಕಸ್, ವೇದಗಣಿತ, ಚಿತ್ರಕಲೆ ಸೇರಿದಂತೆ ವಿವಿಧ ಪಠ್ಯಪೂರಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಪ್ರಸ್ತುತ ಸುಮಾರು 100 ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕಳೆದ ಎಂಟು ವರ್ಷಗಳಿಂದ ಅನುದಾನಿತ ಅಧ್ಯಾಪಕರಿಲ್ಲದಿದ್ದರೂ ಹಳೆ ವಿದ್ಯಾರ್ಥಿಗಳು ಹಾಗೂ ವಿದ್ಯಾಭಿಮಾನಿಗಳ ಸಹಕಾರದಿಂದ ಶಾಲೆ ಯಶಸ್ವಿಯಾಗಿ ನಡೆಯುತ್ತಿದೆ ಎಂದು ತಿಳಿಸಿದರು.ಅಮೃತ ಮಹೋತ್ಸವದ ಸ್ಮರಣಾರ್ಥವಾಗಿ 75 ವರ್ಷಗಳ ಗುರುಕುಲದ ಪಯಣವನ್ನು ದಾಖಲಿಸುವ “ಗುರುಕುಲಾಮೃತ” ಎಂಬ ಸ್ಮರಣ ಸಂಚಿಕೆಯನ್ನು ಪ್ರಕಟಿಸಲಾಗುವುದು ಎಂದರು.
ಸಂಸ್ಥೆಯ ಗೌರವಾಧ್ಯಕ್ಷ ನಾಗಭೂಷಣ ಜೋಶಿ, ಮಾತನಾಡಿ ಡಿ. 26 ರಂದು ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಾ. ಎಂ ವೀರಪ್ಪ ಮೊಯ್ಲಿ, ಪಂ. ಅಧ್ಯಕ್ಷ ಉಮೇಶ್ ಪೂಜಾರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ ಲೊಕೇಶ್, ಶಿಕ್ಷಣಾಧಿಕಾರಿ ಎಸ್ ಅರ್ ಗಿರಿಜಮ್ಮ, ಸೇರಿದಂತೆ ಅನೇಕ ಅತಿಥಿಗಳು ಭಾಗವಹಿಸಲಿರುವರು ಎಂದರು.ಸುದ್ದಿಗೋಷ್ಠಿಯಲ್ಲಿ ಗುರುಕುಲ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗಜಾನನ ಮರಾಠೆ, ನಾಗಭೂಷಣ ಮರಾಠೆ, ಸಂಚಾಲಕ ಸುಧಾಕರ ಡೋಂಗ್ರೆ, ಮುಖ್ಯೋಪಾಧ್ಯಾಯಿನಿ ಪೂರ್ಣಿಮಾ ಶೆಣೈ, ರತ್ನಾಕರ ಮರಾಠೆ ಸೇರಿದಂತೆ ಇತರರು ಉಪಸ್ಥಿತರಿದ್ದರು.