ನಾಟಿ ಮಾಡಿ ಕೆಸರಲ್ಲೇ ಮಿಂದೆದ್ದ ಗುರುಕುಲ ಮಕ್ಕಳು!

| Published : Jul 20 2024, 12:50 AM IST

ನಾಟಿ ಮಾಡಿ ಕೆಸರಲ್ಲೇ ಮಿಂದೆದ್ದ ಗುರುಕುಲ ಮಕ್ಕಳು!
Share this Article
  • FB
  • TW
  • Linkdin
  • Email

ಸಾರಾಂಶ

ಮರೆಯಾಗುತ್ತಿರುವ ಕೃಷಿ ಆಸಕ್ತಿಯನ್ನು ನಮ್ಮ ವಿದ್ಯಾರ್ಥಿಗಳಲ್ಲಿ ಮೂಡಿಸಬೇಕು ಎನ್ನುವ ಉದ್ದೇಶದಿಂದ ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್‌ನ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಭತ್ತ ಬೆಳೆಯುವ ಸಮಗ್ರ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಕುಂದಾಪುರ

ಆಗೊಮ್ಮೆ, ಈಗೊಮ್ಮೆ ಸುರಿಯುವ ತುಂತುರು ಮಳೆ, ಅಕ್ಕ-ಪಕ್ಕದಲ್ಲೆಲ್ಲ ಕೆಸರು ತುಂಬಿದ ಗದ್ದೆಗಳು, ಮೊಳಕಾಲೆತ್ತರಕ್ಕೆ ಉಡುಪನ್ನು ಕಟ್ಟಿಕೊಂಡು ಗದ್ದೆಗಿಳಿದ ಮಕ್ಕಳಲ್ಲಿ ನಾವೇನು ಈ ಕ್ಷೇತ್ರಕ್ಕೆ ಹೊಸಬರಲ್ಲ ಎನ್ನುವ ಹುಮ್ಮಸ್ಸು. ಸ್ಥಳೀಯ ಮಹಿಳೆಯರೊಂದಿಗೆ ಕೈಜೋಡಿಸಿ ಕ್ಷಣಾರ್ಧದಲ್ಲಿ ಸಾಲು ಸಾಲು ನೇಜಿ ಗಿಡಗಳನ್ನು ಗದ್ದೆಯ ಕೆಸರಿನಲ್ಲಿ ಇಡುವ ಮಕ್ಕಳ ಕೈಚಳಕಕ್ಕೆ ಸ್ಥಳೀಯ ಕೃಷಿಕರಿಂದ ಮೆಚ್ಚುಗೆಯ ಮಹಾಪೂರ...

ಈ ದೃಶ್ಯಗಳಿಗೆ ಸಾಕ್ಷಿಯಾದದ್ದು, ಬಾಂಡ್ಯ ಗ್ರಾಮದ, ಕೆಳ ಬಾಂಡ್ಯದ ಕೃಷಿ ಗದ್ದೆಗಳಲ್ಲಿ. ಇಂದಿನ ಮಕ್ಕಳಲ್ಲಿ ಮರೆಯಾಗುತ್ತಿರುವ ಕೃಷಿ ಆಸಕ್ತಿಯನ್ನು ನಮ್ಮ ವಿದ್ಯಾರ್ಥಿಗಳಲ್ಲಿ ಮೂಡಿಸಬೇಕು ಎನ್ನುವ ಉದ್ದೇಶದಿಂದ ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್‌ನ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಭತ್ತ ಬೆಳೆಯುವ ಸಮಗ್ರ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಬುಧವಾರ ಗುರುಕುಲ ವಿದ್ಯಾಸಂಸ್ಥೆಯ ಬಸ್‌ಗಳಲ್ಲಿ ವಕ್ವಾಡಿಯಿಂದ ಶಿಕ್ಷಕರ ಜೊತೆ ಬೆಳಗ್ಗೆ ಬಾಂಡ್ಯಕ್ಕೆ ಬಂದಿಳಿದಿದ್ದ 120 ವಿದ್ಯಾರ್ಥಿಗಳು, ನೋಡ ನೋಡುತ್ತಲೇ ವಿಸ್ತಾರವಾದ ಗದ್ದೆಗಳಲ್ಲಿ ಇಳಿದು ನಾಟಿ ಕಾರ್ಯಕ್ಕೆ ತಯಾರಿ ನಡೆಸಿದ್ದರು. ಬಾಂಡ್ಯ ಎಜುಕೇಶನಲ್ ಟ್ರಸ್ಟಿನ ಜಂಟಿ ಕಾರ್ಯನಿರ್ವಾಹಕ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ಹಾಗೂ ಅನುಪಮ್ ಎಸ್. ಶೆಟ್ಟಿ, ತಮ್ಮ 4 ಎಕ್ರೆ ವಿಸ್ತೀರ್ಣದ ಗದ್ದೆಯಲ್ಲಿ ಕೃಷಿ ನಾಟಿ ಕಾರ್ಯಕ್ರಮದಲ್ಲಿ ನೇಜಿಯನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.ವಿದ್ಯಾರ್ಥಿಗಳಿಂದಲೇ ನಾಟಿ:

ಉದ್ಯೋಗ, ತಂತ್ರಜ್ಞಾನ, ನಿರಾಸಕ್ತಿ ಮುಂತಾದ ಕಾರಣಗಳಿಂದ ಕೃಷಿ ಕ್ಷೇತ್ರದಿಂದ ಯುವ ಸಮುದಾಯ ವಿಮುಖವಾಗುತ್ತಿರುವುದನ್ನು ಗಮನಿಸಿದ್ದ ಬಾಂಡ್ಯ ಎಜ್ಯುಕೇಶನ್ ಟ್ರಸ್ಟ್, ಕಳೆದ ಕೆಲ ವರ್ಷಗಳಿಂದ ತಮ್ಮದೇ ಶಾಲೆಯ ವಿದ್ಯಾರ್ಥಿಗಳ ಮೂಲಕ ಗ್ರಾಮೀಣ ಭಾಗದ ಕೃಷಿ ಗದ್ದೆಗಳಲ್ಲಿ ಭತ್ತದ ಗಿಡಗಳ ನಾಟಿ ಕಾರ್ಯದ ಕಸುಬನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಉಳಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಪ್ರತಿ ವರ್ಷದ ಆಟಿ ತಿಂಗಳು ಪ್ರಾರಂಭವಾಗುತ್ತಿದ್ದಂತೆಯೆ ಮಲೆನಾಡಿನ ಗ್ರಾಮೀಣ ಭಾಗವಾದ ಕೆಳ ಬಾಂಡ್ಯದಲ್ಲಿ ಗದ್ದೆಗಳನ್ನು ಹಸನು ಮಾಡಿ ವಿದ್ಯಾರ್ಥಿಗಳಿಂದಲೇ ನಾಟಿ ಕಾರ್ಯ ಮಾಡಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತದೆ. ಮುಹೂರ್ತವನ್ನು ನಿಗದಿ ಮಾಡಿದ ಬಳಿಕ ಸಂಸ್ಥೆಯ ಶಿಕ್ಷಕ ವೃಂದದ ಜೊತೆ ವಿದ್ಯಾರ್ಥಿಗಳನ್ನು ಕರೆತಂದು ಕೆಸರು ತುಂಬಿದ ಗದ್ದೆಗಳಲ್ಲಿಯೇ ಕೃಷಿ ಹಬ್ಬವನ್ನ ಸ್ಥಳೀಯ ಕೃಷಿಕರೊಂದಿಗೆ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಸ್ಥಳೀಯ ಅನುಭವಿ ಕೃಷಿಕರೇ ಇವರಿಗೆಲ್ಲ ಕೃಷಿ ಪಾಠ ಮಾಡುವ ಮೇಷ್ಟ್ರಗಳಾಗುತ್ತಾರೆ. ನೇಜಿಯನ್ನು ಹೊತ್ತು ತರುವುದು, ಗದ್ದೆಗಳನ್ನು ಹಸನು ಮಾಡುವುದು, ಅಂಚು ಕಡಿಯುವುದು, ನೇಜಿಯನ್ನು ಸಾಲಾಗಿ ನಾಟಿ ಮಾಡುವವರೆಗೂ ಮಕ್ಕಳಿಗೆ ಮಾರ್ಗದರ್ಶನ ದೊರೆಯುತ್ತದೆ.ಮಕ್ಕಳೊಂದಿಗೆ ಶಿಕ್ಷಕರು, ಸ್ಥಳೀಯರೂ ನಾಟಿ ಕಾರ್ಯದಲ್ಲಿ ಜೊತೆಯಾಗುತ್ತಾರೆ. ಈ ಸಂದರ್ಭದಲ್ಲಿ ಅವರೊಂದಿಗೆ ಪೈಪೋಟಿಗೆ ಇಳಿಯುವ ವಿದ್ಯಾರ್ಥಿಗಳು, ಅನುಭವಿ ಕೃಷಿಕರನ್ನು ಮೀರಿಸುವಂತೆ ಕ್ಷಣಾರ್ಧದಲ್ಲಿ ನಾಟಿ ಸಾಲುಗಳನ್ನು ಪೂರೈಸಿ ಸಂಭ್ರಮಿಸುವ ಪರಿಯೇ ವಿಶೇಷ.ಈ ಸಂದರ್ಭ ಮಾತನಾಡಿದ ಬಾಂಡ್ಯ ಎಜುಕೇಷನ್ ಟ್ರಸ್ಟ್ ಜಂಟಿ ಕಾರ್ಯನಿರ್ವಾಹಕ ಟ್ರಸ್ಟಿ ಅನುಪಮಾ ಎಸ್. ಶೆಟ್ಟಿ, ಗುರುಕುಲ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೂ ಸಮಾನವಾದ ಅವಕಾಶ ನೀಡಲಾಗುತ್ತಿದೆ. ಕೃಷಿ, ತೋಟಗಾರಿಕೆ ಸೇರಿದಂತೆ ಜೀವನಾನುಭವಗಳನ್ನು ತಜ್ಞರಿಂದ ಕಲಿಸಲಾಗುತ್ತಿದೆ ಎಂದರು.ಬಾಂಡ್ಯ ಎಜುಕೇಷನ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕ ಟ್ರಸ್ಟಿ ಸುಭಾಶ್ಚಂದ್ರ ಶೆಟ್ಟಿ, ಗುರುಕುಲ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲ ಸುನಿಲ್, ಶಿಕ್ಷಕ-ಶಿಕ್ಷಕಿಯರು ಹಾಗೂ ಸಿಬ್ಬಂದಿ ಇದ್ದರು.----ಕೆಸರು ಗದ್ದೆಯಲ್ಲೇ ಆಟದ ಸಂಭ್ರಮಜೀವನದಲ್ಲಿ ಮೊದಲ ಬಾರಿಗೆ ಕೃಷಿ ಗದ್ದೆಯಲ್ಲಿ ಭತ್ತದ ಗಿಡಗಳ ನಾಟಿ ಮಾಡುವುದನ್ನು ಕರಗತ ಮಾಡಿಕೊಂಡ ವಿದ್ಯಾರ್ಥಿಗಳಲ್ಲಿ, ಕೃಷಿ ಗದ್ದೆಗಳು ಜೀವನದ ಹೊಸ ಪಾಠಕ್ಕೆ ಆಡೊಂಬೊಲವಾಗಿತ್ತು. ಕೊಪ್ಪಳ, ಬೆಳಗಾವಿ, ಹಾವೇರಿ, ಬಾಗಲಕೋಟೆ, ಬೆಂಗಳೂರು, ಕಾರವಾರ ಸೇರಿದಂತೆ ನಾಡಿನ ಬೇರೆ ಬೇರೆ ಭಾಗಗಳಿಂದ ವಿದ್ಯಾರ್ಜನೆಗಾಗಿ ಗುರುಕುಲಕ್ಕೆ ಬಂದಿದ್ದ ವಿದ್ಯಾರ್ಥಿಗಳು ನಾಟಿ ಕೆಲಸದ ಬಳಿಕ ಕೆಸರು ತುಂಬಿದ ಗದ್ದೆಗಳಲ್ಲಿ ಆಟ ಆಡಿ ಸಂಭ್ರಮಿಸಿದರು.

----: ತಂತ್ರಜ್ಞಾನ ಹಾಗೂ ಆಧುನೀಕತೆಯ ಪರ್ವದಲ್ಲಿ ನಮ್ಮ ಹಿರಿಯರು ನಡೆಸಿಕೊಂಡು ಬರುತ್ತಿದ್ದ ಕೃಷಿ ಕಾಯಕದ ಪರಂಪರೆ ಮರೆಯಾಗಬಾರದು ಎನ್ನುವ ನೆಲೆಯಲ್ಲಿ ಸಾವಯವ ಮಾದರಿಯಲ್ಲಿ ಬೆಳೆಯುವ ಕೃಷಿ ಪದ್ಧತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಗುತ್ತಿದೆ.। ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯ, ಜಂಟಿ ಕಾರ್ಯ ನಿರ್ವಾಹಕ ಟ್ರಸ್ಟಿ ಬಾಂಡ್ಯ ಎಜ್ಯುಕೇಶನ್ ಟ್ರಸ್ಟ್