ಗುರುಕುಲದಲ್ಲಿ ಸ್ಕಾಲರ್‌ಶಿಪ್ ಪ್ರವೇಶ ಪರೀಕ್ಷೆ ಆರಂಭ

| Published : Jan 22 2024, 02:16 AM IST

ಗುರುಕುಲದಲ್ಲಿ ಸ್ಕಾಲರ್‌ಶಿಪ್ ಪ್ರವೇಶ ಪರೀಕ್ಷೆ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

8 ಸಾವಿರ ವಿದ್ಯಾರ್ಥಿಗಳು ನೋಂದಣಿ, ಮೊದಲ ದಿನ 2103 ವಿದ್ಯಾರ್ಥಿಗಳು ಹಾಜರು. 3 ದಿನ ನಡೆಯಲಿರುವ ಪರೀಕ್ಷೆಗಳು. ಪರೀಕ್ಷಾ ಕೇಂದ್ರಕ್ಕೆ ಡಾ.ಬಸವಲಿಂಗ ಪಟ್ಟದ್ದೇವರು ಭೇಟಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕನ್ನಡಪ್ರಭ ವಾರ್ತೆ ಭಾಲ್ಕಿ

ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಭಾನುವಾರ ನಡೆದ ಗೋಲ್ಡನ್ ಸ್ಕಾಲರ್‌ಶಿಪ್ ಪ್ರವೇಶ ಪರೀಕ್ಷೆಯಲ್ಲಿ ಸುಮಾರು 2103 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ಪ್ರವೇಶ ಪರೀಕ್ಷೆಗೆ ಇದುವರೆಗೂ 8 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದು, ಇನ್ನೂ ಈ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಮೂರು ದಿವಸ ಪರೀಕ್ಷೆ ನಡೆಯಲಿದ್ದು, ಮೊದಲ ದಿನದ ಪರೀಕ್ಷೆಗೆ 2200 ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದರು. ಅದರಲ್ಲಿ 2103 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಬಡ ಮತ್ತು ಪ್ರತಿಭಾನ್ವಿತ ಮಕ್ಕಳಿಗೆ ಉಚಿತ ಶಿಕ್ಷಣ ಕಲ್ಪಿಸುವ ಉದ್ದೇಶದಿಂದ ಡಾ.ಬಸವಲಿಂಗ ಪಟ್ಟದ್ದೇವರು ಮತ್ತು ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ ವತಿಯಿಂದ ಕಳೆದ 6 ವರ್ಷಗಳಿಂದ ಸ್ಕಾಲರ್‌ಶಿಪ್ ಪ್ರವೇಶ ಪರೀಕ್ಷೆ ನಡೆಸಲಾಗುತ್ತಿದೆ.

ಪ್ರಸ್ತುತ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಪ್ರವೇಶ ಪರೀಕ್ಷೆ ಬರೆಯಬಹುದಾಗಿದ್ದು, ಉತ್ತಮ ಅಂಕ ಪಡೆಯುವ 100 ವಿದ್ಯಾರ್ಥಿಗಳಿಗೆ ಉಚಿತ ಎರಡು ವರ್ಷ ಪಿಯು ಶಿಕ್ಷಣ ಸಿಗಲಿದೆ. ಗರಿಷ್ಠ ಅಂಕ ಪಡೆಯುವ 25 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಕೋಚಿಂಗ್ ಮತ್ತು ವಸತಿ ಸೌಲಭ್ಯ ಒಳಗೊಂಡಿದೆ. ನಂತರದ 75 ವಿದ್ಯಾರ್ಥಿಗಳಿಗೆ ವಸತಿ ರಹಿತ ಶಿಕ್ಷಣ, ಕೋಚಿಂಗ್ ಸಿಗಲಿದೆ.ಪರೀಕ್ಷೆಗಾಗಿ ಅಚ್ಚುಕಟ್ಟು ವ್ಯವಸ್ಥೆ

ಪ್ರವೇಶ ಪರೀಕ್ಷೆಯನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ಮೊದಲ ದಿನ ನಡೆದ ಪ್ರವೇಶ ಪರೀಕ್ಷೆಯನ್ನು ವಿದ್ಯಾರ್ಥಿಗಳು ಸುವ್ಯವಸ್ಥಿತವಾಗಿ ಬರೆದರು. ಆಡಳಿತಾಧಿಕಾರಿ ಮೋಹನ ರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ ಸೇರಿದಂತೆ ಸಿಬ್ಬಂದಿ ವರ್ಗದವರು ಪರೀಕ್ಷೆ ಯಶಸ್ವಿಯಾಗಿ ನಡೆಯುವಂತೆ ನೋಡಿಕೊಂಡರು.21 ಜಿಲ್ಲೆ ಮಕ್ಕಳು ಪರೀಕ್ಷೆಗೆ ಹಾಜರು

ಬೀದರ್ ಜಿಲ್ಲೆ, ರಾಜ್ಯ ಸೇರಿ ನೆರೆಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳು ಸೇರಿದಂತೆ ಒಟ್ಟು 21 ಜಿಲ್ಲೆಯ ಮಕ್ಕಳು ಪ್ರವೇಶ ಪರೀಕ್ಷೆ ಬರೆದಿದ್ದು ವಿಶೇಷ. 96 ಕೊಠಡಿಗಳಲ್ಲಿ 2103 ಮಕ್ಕಳು ಪರೀಕ್ಷೆ ಬರೆದರು.

ಪರೀಕ್ಷಾ ಕೊಠಡಿಗೆ ಶ್ರೀಗಳ ಭೇಟಿ:

ಡಾ.ಬಸವಲಿಂಗ ಪಟ್ಟದ್ದೇವರು ಪರೀಕ್ಷೆ ನಡೆಯುವ ಕೊಠಡಿಗಳಿಗೆ ಭೇಟಿ ನೀಡಿ, ಖುದ್ದಾಗಿ ಪರಿಶೀಲಿಸಿ ಎಲ್ಲ ವಿದ್ಯಾರ್ಥಿಗಳಿಗೆ ಆಶೀರ್ವದಿಸಿ ಪರೀಕ್ಷೆಗೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಜಿಲ್ಲಾ ಭಾರತೀಯ ಬಸವ ಬಳಗದ ಅಧ್ಯಕ್ಷ ಸಂಜೀವಕುಮಾರ ಜುಮ್ಮಾ, ಧನರಾಜ ಬಂಬುಳಗೆ, ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ, ಅನಿಲ ಹಾಲಕೂಡೆ ಇದ್ದರು.

ಮೌಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ: ಪಟ್ಟದ್ದೇವರು

ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ ಎಂದು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ನ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು. ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಭಾನುವಾರ ನಡೆದ ಪಾಲಕರ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ನಮ್ಮಲ್ಲಿ ಕೇವಲ ಅಂಕ ಗಳಿಕೆ ಶಿಕ್ಷಣಕ್ಕೆ ಆದ್ಯತೆ ನೀಡುವುದಿಲ್ಲ. ಬದಲಾಗಿ ಭವಿಷ್ಯ ರೂಪಿಸುವ ಶಿಕ್ಷಣಕ್ಕೆ ಒತ್ತು ನೀಡುತ್ತೇವೆ. ಉತ್ತಮ ಶಿಕ್ಷಣ, ಸಂಸ್ಕಾರ ಮತ್ತು ಪ್ರಸಾದಕ್ಕೆ ಹೆಚ್ಚಿನ ಆದ್ಯತೆ ಇರುತ್ತದೆ. ನಮ್ಮಲ್ಲಿಯ ಸಿಬ್ಬಂದಿ ವರ್ಗದವರು ಸಮರ್ಪಣೆ ಭಾವದಿಂದ ದುಡಿಯುತ್ತಿದ್ದಾರೆ. ಆ ಕಾರಣಕ್ಕಾಗಿಯೇ ನಮ್ಮಲ್ಲಿನ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿ ಕೊಳ್ಳುತ್ತಿದ್ದಾರೆ ಎಂದರು. ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಮಹಾಲಿಂಗ ಸ್ವಾಮೀಜಿ ಇದ್ದರು.