ಸಾರಾಂಶ
ಹಾನಗಲ್ಲ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಗುರುನಾಥ ಗವಾಣಿಕರ, ಖಜಾಂಚಿಯಾಗಿ ಬಸವರಾಜ ದಿಡಗೂರ, ರಾಜ್ಯ ಪರಿಷತ್ ಸದಸ್ಯರಾಗಿ ಪರಮೇಶ್ವರ ಗಾಡಿಹುಚ್ಚನವರ ಆಯ್ಕೆಯಾಗಿದ್ದಾರೆ.ಶನಿವಾರ ನಡೆದ ಚುನಾವಣೆಯಲ್ಲಿ ಒಟ್ಟು ೩೪ ಸದಸ್ಯರಲ್ಲಿ ೩೩ ಸದಸ್ಯರು ಮತದಾನ ಮಾಡಿದ್ದಾರೆ. ಒಬ್ಬರು ಮಾತ್ರ ಗೈರು ಹಾಜರಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಖಜಾನೆ ಇಲಾಖೆಯ ಗುರುನಾಥ ಗವಾಣಿಕರ (೨೪ ಮತಗಳು) ಮತ್ತು ಶಿಕ್ಷಣ ಇಲಾಖೆಯ ಎಸ್.ಕೆ. ದೊಡ್ಡಮನಿ (೦೯ ಮತಗಳು) ನಡುವೆ ಪೈಪೋಟಿ ಏರ್ಪಟ್ಟಿತ್ತು. ಖಜಾಂಚಿ ಸ್ಥಾನಕ್ಕೆ ಆರೋಗ್ಯ ಇಲಾಖೆಯ ಬಸವರಾಜ ದಿಡಗೂರ (೨೧ ಮತಗಳು) ಮತ್ತು ಶಿಕ್ಷಣ ಇಲಾಖೆಯ ಎನ್.ವಿ. ಅಗಸನಹಳ್ಳಿ (೧೧ ಮತಗಳು) ಇವರ ಮಧ್ಯೆ ಹಾಗೂ ರಾಜ್ಯ ಪರಿಷತ್ತಿನ ಒಂದು ಸ್ಥಾನಕ್ಕೆ ಪರಮೇಶ ಗಾಡಿಹುಚ್ಚಣ್ಣನವರ (೧೮ ಮತಗಳು), ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಎಸ್. ಆನಂದ (೧೪ ಮತಗಳು) ನಡುವೆ ಪೈಪೋಟಿ ನಡೆದಿತ್ತು.ಬೆಳಗ್ಗೆ ೯ ಗಂಟೆಗೆ ಇಲ್ಲಿನ ಸರಕಾರಿ ನೌಕರರ ಸಂಘದಲ್ಲಿ ಮತದಾನ ನಡೆಯಿತು. ಸಂಜೆ ೪ ಗಂಟೆಗೆ ಮತ ಎಣಿಕೆ ಆರಂಭವಾಗಿ ಫಲಿತಾಂಶ ಘೋಷಣೆಯಾಯಿತು. ಚುನಾವಣಾಧಿಕಾರಿಯಾಗಿ ಎಂ.ಎಸ್. ಗುಂಡಪಲ್ಲಿ, ಸಹಾಯಕ ಚುನಾವಣಾಧಿಕಾರಿಯಾಗಿ ಶಂಭುಲಿಂಗ ಮಹೇಂದ್ರಕರ ಕಾರ್ಯ ನಿರ್ವಹಿಸಿದರು. ಸಂಘದ ಇನ್ನುಳಿದ ಪದಾಧಿಕಾರಿಗಳ ಆಯ್ಕೆಯನ್ನು ನೂತನ ಅಧ್ಯಕ್ಷರು ಮಾಡುವ ಅಧಿಕಾರ ಪಡೆದಿದ್ದಾರೆ.ಹಾನಗಲ್ಲ ತಾಲೂಕಿನಲ್ಲಿ ೮ ವರ್ಷ ಸರಕಾರಿ ನೌಕರರಿಗೆ ಸಲ್ಲಿಸಿದ ಸೇವೆ ಮತ್ತು ಈ ಹಿಂದಿನ ೫ ವರ್ಷದ ಅವಧಿಗೆ ನಿರ್ದೇಶಕನಾಗಿ, ೨ ವರ್ಷ ರಾಜ್ಯ ಪರಿಷತ್ತಿನ ಸದಸ್ಯನಾಗಿ ಸಂಘ ಮತ್ತು ನೌಕರರ ಪರ ಹೋರಾಟಕ್ಕೆ ಜಯ ಸಿಕ್ಕಿದೆ. ಎಲ್ಲರನ್ನು ಒಗ್ಗೂಡಿಸಿಕೊಂಡು ಸಂಘದ ಶ್ರೇಯಸ್ಸಿಗೆ ಶ್ರಮಿಸುತ್ತೇನೆ ಎಂದು ಅಧ್ಯಕ್ಷ ಗುರುನಾಥ ಗವಾಣಿಕರ ಹೇಳಿದರು.