ಸಮಾಜಮುಖಿ ಕಾರ್ಯಗಳಿಗೆ ಕೈಜೋಡಿಸಿದ ಗುರುಸಿದ್ಧ ಶ್ರೀ: ಡಾ.ಪ್ರಭಾಕರ ಕೋರೆ

| Published : Nov 13 2024, 12:08 AM IST

ಸಮಾಜಮುಖಿ ಕಾರ್ಯಗಳಿಗೆ ಕೈಜೋಡಿಸಿದ ಗುರುಸಿದ್ಧ ಶ್ರೀ: ಡಾ.ಪ್ರಭಾಕರ ಕೋರೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆಎಲ್ಇ ಸಂಸ್ಥೆಗೆ ಕಾರಂಜಿಮಠ ನೀಡಿದ ದೇಣಿಗೆ ಸದಾಕಾಲ ಸ್ಮರಿಸಿಕೊಳ್ಳುವಂತದ್ದು . ಹಲವಾರು ಸಂಸ್ಥೆಗಳಿಗೆ ದೇಣಿಗೆ ನೀಡಿದ ಕಾರಂಜಿಮಠ ದಾನಮ್ಮದೇವಿ ದೇವಸ್ಥಾನ ಸೇರಿದಂತೆ ಬಹಳಷ್ಟು ಕಡೆ ಬೆಳವಣಿಗೆಗೆ ಅನುಕೂಲ ಮಾಡಿದೆ. ಆದರೆ, ಎಲ್ಲಿಯೂ ಹೇಳಿಕೊಂಡಿಲ್ಲ. ಶ್ರೀಗಳದ್ದು ಯಾವಾಗಲೂ ನೀಡುವ ಕೈ. ತಾವು ಮಾಡಿದ ಕಾರ್ಯಗಳಿಗೆ ಪ್ರಚಾರ ಬಯಸಿದವರಲ್ಲ ಎಂದು ಕೆಎಲ್‌ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕೆಎಲ್ಇ ಸಂಸ್ಥೆಗೆ ಕಾರಂಜಿಮಠ ನೀಡಿದ ದೇಣಿಗೆ ಸದಾಕಾಲ ಸ್ಮರಿಸಿಕೊಳ್ಳುವಂತದ್ದು . ಹಲವಾರು ಸಂಸ್ಥೆಗಳಿಗೆ ದೇಣಿಗೆ ನೀಡಿದ ಕಾರಂಜಿಮಠ ದಾನಮ್ಮದೇವಿ ದೇವಸ್ಥಾನ ಸೇರಿದಂತೆ ಬಹಳಷ್ಟು ಕಡೆ ಬೆಳವಣಿಗೆಗೆ ಅನುಕೂಲ ಮಾಡಿದೆ. ಆದರೆ, ಎಲ್ಲಿಯೂ ಹೇಳಿಕೊಂಡಿಲ್ಲ. ಶ್ರೀಗಳದ್ದು ಯಾವಾಗಲೂ ನೀಡುವ ಕೈ. ತಾವು ಮಾಡಿದ ಕಾರ್ಯಗಳಿಗೆ ಪ್ರಚಾರ ಬಯಸಿದವರಲ್ಲ ಎಂದು ಕೆಎಲ್‌ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.

ನಗರದ ಕಾರಂಜಿ ಮಠದ ಗುರುಸಿದ್ಧ ಶ್ರೀಗಳ 75ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಗದಗ ತೋಂಟದಾರ್ಯಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಎಲ್ಲರ ಕಷ್ಟ ಸುಖಗಳಿಗೆ ಸ್ಪಂದಿಸುತ್ತ, ಎಲ್ಲ ಜಾತಿ ಧರ್ಮದವರನ್ನು ಸಮಾನವಾಗಿ ಕಂಡ ಅಪರೂಪದ ಸ್ವಾಮಿಗಳೆಂದರೆ ಅದು ಬೆಳಗಾವಿ ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ಎಂದು ಬಣ್ಣಿಸಿದರು.

ಹುಕ್ಕೇರಿಯ ಗುರು ಶಾಂತೇಶ್ವರ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ಗುರುಸಿದ್ಧ ಶ್ರೀಗಳು ಮಾನವ ಧರ್ಮ ತತ್ವ ಬಿತ್ತಿದ ಅಪರೂಪದ ಸ್ವಾಮಿಗಳು. ಕಾರಂಜಿಯಂತೆ ಎಲ್ಲರನ್ನು ಒಂದುಗೂಡಿಸಿ ಎಲ್ಲರೊಳಗೆ ಒಂದಾದವರು ಎಂದು ಹೇಳಿದರು.

ಮಾಜಿ ಶಾಸಕ ಫಿರೋಜ್ ಸೇಠ್ ಮಾತನಾಡಿ, ತಮ್ಮ ಮನೆತನ ಮತ್ತು ಕಾರಂಜಿ ಮಠದ ಶತಮಾನದಷ್ಟು ಹಳೆಯ ಸಂಬಂಧ ಮತ್ತು ತಾವು ಹಾಗೂ ಕಾರಂಜಿ ಮಠದ ಶ್ರೀಗಳ ಬಾಲ್ಯದ ಒಡನಾಟ ಹಾಗೂ ಹಜ್ ಯಾತ್ರೆಗೆ ಹೊರಡುವಾಗ ನನ್ನನ್ನು ಮಠಕ್ಕೆ ಕರೆಸಿಕೊಂಡು ಸತ್ಕರಿಸಿ ಇಸ್ಲಾಂ ಧರ್ಮದ ಟೋಪಿ ಮತ್ತು ರುದ್ರಾಕ್ಷಿಯ ಜಪಮಾಲೆ ನೀಡಿ ಆಶೀರ್ವದಿಸಿದ್ದನ್ನು ನೆನಪಿಸಿಕೊಂಡು ಒಂದು ಕ್ಷಣ ಗದ್ಗದಿತರಾದರು. ಜಾತಿ ಧರ್ಮ ಮೀರಿದ ಮಠ ಇದಾಗಿದೆ ಎಂದು ಬಣ್ಣಿಸಿದರು.

ಸಂಸದ ಜಗದೀಶ ಶೆಟ್ಟರ್ ಅವರು ಮಾತನಾಡಿ, ಗುರುಸಿದ್ದ ಸ್ವಾಮಿಗಳು ಬಸವ ತತ್ವದ ಅನುಸಾರ ಸಾಮಾಜಿಕ ಕಾರ್ಯವನ್ನು ಮಾಡಿ ಅದ್ವಿತೀಯ ಸ್ವಾಮಿಗಳೆನಿಸಿಕೊಂಡರು ಎಂದು ಹೇಳಿದರು.

ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಿಗಿಮಠ ಮತ್ತು ಎ.ಕೆ. ಪಾಟೀಲ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಅಮೃತ ಮಹೋತ್ಸವದ ನೆನಪಿನ ಸಂಚಿಕೆ ಅನುಭಾವ ಕಾರಂಜಿ ಲೋಕಾರ್ಪಣೆಗೊಳಿಸಲಾಯಿತು.

ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ.ಅಲ್ಲಮಪ್ರಭು ಸ್ವಾಮೀಜಿ, ನಿಲಜಿಯ ಅಲೌಕಿಕ ಧ್ಯಾನ ಮಂದಿರದ ಶಿವಾನಂದ ಗುರೂಜಿ, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ರಾಘವೇಂದ್ರ ಕಾಗವಾಡ, ಗಂಗಾ ಮಾತಾಜಿ, ಕಾರಂಜಿ ಮಠದ ಡಾ.ಶಿವಯೋಗಿ ದೇವರು, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಾಸಕ ಅಭಯ ಪಾಟೀಲ್, ಮಾಜಿ ಶಾಸಕರಾದ ರಮೇಶ ಕುಡಚಿ, ಸಂಜಯ ಪಾಟೀಲ, ಅನಿಲ ಬೆನಕೆ, ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ರತ್ನಪ್ರಭಾ ಬೆಲ್ಲದ, ಸರಳಾ ಹೇರೇಕರ, ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ, ಶಂಕರಗೌಡ ಪಾಟೀಲ , ಡಾ.ರವಿ ಪಾಟೀಲ, ಪ್ರಕಾಶ ಗಿರಿಮಲ್ಲನವರ, ಸಾಹಿತಿ ಡಾ.ಬಸವರಾಜ ಜಗಜಂಪಿ ಇತರರು ಇದ್ದರು. ಗುರುಸಿದ್ಧ ಸ್ವಾಮೀಜಿಯನ್ನು ಕಾರಂಜಿಮಠದಿಂದ ವೇದಿಕೆ ಅಲಂಕೃತ ರಥದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು.