ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ ಜಾತ್ರೆಯ ಮೂರನೇ ದಿನವಾದ ಬುಧವಾರ ಸಿಬಿಎಸ್‌ಸಿ ಶಾಲಾ ಆವರಣದಲ್ಲಿ ವಿವಿಧ ಭಾರ ಎತ್ತುವ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿವಿಧೆಡೆಗಳಿಂದ ಆಗಮಸಿದ್ದ ಪೈಲ್ವಾನರು ಭಾರ ಎತ್ತುವ ಮೂಲಕ ನೆರೆದ ಜನರನ್ನು ಮೂಕವಿಸ್ಮಿತರನ್ನಾಗಿಸಿತು.೧ ಕ್ವಿಂಟಾಲ್‌ಕ್ಕಿಂತಲೂ ಹೆಚ್ಚಿನ ಭಾರವಾದ ಗುಂಡುಕಲ್ಲು, ೮೦ ಕೆಜಿಯಿಂದ ೧೪೫ ಕೆಜಿಯ ಸಂಗ್ರಾಣಿ ಕಲ್ಲು, ಮೂರು ಕ್ವಿಂಟಾಲ್ ಉಸುಕಿನ ಚೀಲ, ಹಲ್ಲಿನಿಂದ ಕಬ್ಬಿಣದ ಹಾರೆಗಳನ್ನು ಒಗೆಯುವದು, ಜೋಳದ ಚೀಲ ತೆಕ್ಕಿ ಬಡಿದು ಎತ್ತುವದು ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಪೈಲ್ವಾನ್‌ರು ತಮ್ಮ ಕಸರತ್ತನ್ನು ಪ್ರದರ್ಶಿಸಿದರು. ಬೆಳಗ್ಗೆ ೧೧ಗಂಟೆಗೆ ಆರಂಭವಾದ ಸ್ಪರ್ಧೆಗಳು ಸಂಜೆ ನಾಲ್ಕು ಗಂಟೆಯವರೆಗೆ ಜರುಗಿದವು. ಭಾರ ಎತ್ತುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ, ಬೆಳ್ಳಿ ಕಡಗ, ನಗದು ಹಣ ನೀಡಿ ಗೌರವಿಸಲಾಯಿತು. ಕಳೆದ ವರ್ಷ ಹರನಾಳ ಗ್ರಾಮದ ಪೈಲ್ವಾನ್ ಆನಂದ ಗುಣಕಿ ೨.೧೫ ಕೆಜಿ ಗುಂಡುಕಲ್ಲು ಎತ್ತುವ ಪೈಲ್ವಾನ್‌ಗೆ ೫೦ ತೊಲಿಯ ಬೆಳ್ಳಿ ಗದೆಯನ್ನು ನೀಡಿದ್ದರು. ಆದರೆ, ಯಾರು ಗುಂಡುಕಲ್ಲನ್ನು ಎತ್ತದಿರುವುದರಿಂದ ಬೆಳ್ಳಿ ಗದೆ ಉತ್ಸವ ಸಮಿತಿಯಲ್ಲಿ ಉಳಿದಿತ್ತು. ಈ ಬಾರಿಯ ಜಾತ್ರೆಯಲ್ಲಿಯೂ ಗುಂಡುಕಲ್ಲನ್ನು ಯಾರು ಎತ್ತದೇ ಇರುವದರಿಂದಾಗಿ ಮತ್ತೆ ಬೆಳ್ಳಿ ಗದೆ ಸಮಿತಿಯ ಬಳಿಯೇ ಉಳಿದುಕೊಂಡಿತು.ಜತ್ತ ತಾಲೂಕಿನ ಆಸಂಗಿ ಗ್ರಾಮದ ಅಫಜಲ ಮುಜಾವರ ೯೫ ಕೆಜಿ ಸಂಗ್ರಾಣಿ ಕಲ್ಲು ಸಾಗು ಹಾಕುವ ಮೂಲಕ ಹನ್ನೊಂದನೇ ವರ್ಷವು ಬೆಳ್ಳಿ ಕಡಗ ತಮ್ಮದಾಗಿಸಿಕೊಂಡರು. ಬೀಳಗಿ ತಾಲೂಕಿನ ಬಿಸನಾಳ ಗ್ರಾಮದ ೨೦ ವರ್ಷದ ಕಿರಣಿ ಅರಕೇರಿ ೮೫ ಕೆಜಿಯ ಸಂಗ್ರಾಣಿ ಕಲ್ಲನ್ನುಸಾಗ ಹಾಕುವ ಸ್ಪರ್ಧೆಯಲ್ಲಿ ಗಮನ ಸೆಳೆದರು. ಮುತ್ತಗಿಯ ಪರಶುರಾಮ ಹೂಗಾರ ಅವರು ೮೦ಕೆಜಿ ಸಂಗ್ರಾಣಿ ಕಲ್ಲನ್ನು ಮೀಸೆಗೆ ಕಟ್ಟಿಕೊಂಡು ಒಂದು ಸುತ್ತು ಹಾಕಿ ಗಮನ ಸೆಳೆದರು. ಸಿದ್ಧನಾಥ ಗ್ರಾಮದ ೮೦ ವರ್ಷದ ದಿಗಂಬರ ಕೊಳಮಲಿ ೨೦ ಕೆಜಿ ಕಲ್ಲನ್ನು ಮೀಸೆಗೆ ಕಟ್ಟಿಕೊಂಡು ಎತ್ತಿ ಗಮನ ಸೆಳೆದರು. ದೇವರಹಿಪ್ಪರಗಿ ಪೈಲ್ವಾನರು ಹಲ್ಲಿನಿಂದ ಕಬ್ಬಿಣದ ಹಾರೆಗಳನ್ನು ಹಿಂದಕ್ಕೆ ಒಗೆದರು. ೨ ಕ್ವಿಂಟಾಲ್ ಜೋಳದ ಚೀಲವನ್ನು ತೆಕ್ಕಿ ಬಡಿದು ಎತ್ತುವದು ಸೇರಿ ಹಲವು ಸ್ಪರ್ಧೆಗಳು ನೋಡುಗರನ್ನು ರೋಮಾಂಚನ ಗೊಳಿಸಿದವು. ವಿಜೇತರುಃ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಅಫಜಲ್ ಮುಜಾವರ ಪ್ರಥಮ, ಕಿರಣ ಅರಕೇರಿ ದ್ವಿತೀಯ, ರಿಯಾಜ ಜಮಾದಾರ ತೃತೀಯ ಸ್ಥಾನ, ಸಂಗ್ರಾಣಿ ಕಲ್ಲು ವತ್ತಿ ಎತ್ತುವ ಸ್ಪರ್ಧೆಯಲ್ಲಿ ಗುಳೇದಗುಡ್ಡದ ವಿಠ್ಠಲ ಮನಿಕಟ್ಟಿ ಪ್ರಥಮ, ಗೋಕಾಕ ತಾಲೂಕಿನ ಮಳ್ಳವಂಕಿಯ ಶಿವಾನಂದ ಜಾಡನವರ ದ್ವಿತೀಯ, ನಾಗೂರಿನ ಮುತ್ತಪ್ಪ ಕಡ್ಲಿಮಟ್ಟಿ ತೃತೀಯ ಸ್ಥಾನ, ಗುಂಡು ಎತ್ತುವ ಸ್ಪರ್ಧೆಯಲ್ಲಿ ನಾಗಠಾಣದ ಬೀರಪ್ಪ ಪೂಜಾರಿ ಪ್ರಥಮ, ಗುನ್ನಾಪೂರಿನ ಶಿವಲಿಂಗಪ್ಪ ಶಿವೂರ ದ್ವಿತೀಯ, ಯಾಳವಾರದ ಮಾಳಿಂಗರಾಯ ಕೊಂಡಗುಳಿ ಹಾಗೂ ಅಂಬರೀಶ ಬಮ್ಮನಜೋಗಿ ತೃತೀಯ ಸ್ಥಾನ ಪಡೆದರು. ಈ ಸಂದರ್ಭದಲ್ಲಿ ಸಿದ್ದಲಿಂಗ ಸ್ವಾಮೀಜಿ, ಈರಣ್ಣ ಪಟ್ಟಣಶೆಟ್ಟಿ, ರವಿ ರಾಠೋಡ, ಜಗದೇವಿ ಗುಂಡಳ್ಳಿ, ಅಶೋಕ ಹಾರಿವಾಳ, ಮುಖಂಡರಾದ ಸಂಗಣ್ಣ ಕಲ್ಲೂರ, ಎಂ.ಜಿ.ಆದಿಗೊಂಡ, ಅನಿಲ ಅಗರವಾಲ, ಸಂಗಮೇಶ ಓಲೇಕಾರ, ಸುರೇಶಗೌಡ ಪಾಟೀಲ, ಶೇಖರ ಗೊಳಸಂಗಿ, ಮೀರಾಸಾಬ ಕೊರಬು, ಶಂಕರಗೌಡ ಬಿರಾದಾರ, ಸಂಗಯ್ಯ ಒಡೆಯರ, ಸುಭಾಸ ಗಾಯಕವಾಡ, ಜಟ್ಟಿಂಗರಾಯ ಮಾಲಗಾರ, ಮಹಾಂತೇಶ ಹಂಜಗಿ, ಮುತ್ತು ಗುಂಡಳ್ಳಿ, ಮಲ್ಲಿಕಾರ್ಜುನ ಗುಂದಗಿ, ರವಿ ಪಟ್ಟಣಶೆಟ್ಟಿ, ದಯಾನಂದ ಜಾಲಗೇರಿ, ವಿಶ್ವನಾಥ ಹಾರಿವಾಳ, ನಂದೀಶ ಪಾಟೀಲ, ಸಿದ್ರಾಮ ಪಾತ್ರೋಟಿ, ರಮೇಶ ಮಸಬಿನಾಳ, ಮಹೇಶ ಹಿರೇಕುರಬರ, ಮಂಜು ಜಾಲಗೇರಿ, ಮಲ್ಲು ಪಟ್ಟಣಶೆಟ್ಟಿ ಸೇರಿದಂತೆ ಇತರರು ಇದ್ದರು.