ಗುರುಕುಲ ಪರಂಪರೆಯ ಶಿಕ್ಷಣ ಅತ್ಯಗತ್ಯ: ಎಚ್‌.ಡಿ. ಕುಮಾರಸ್ವಾಮಿ

| Published : Dec 10 2023, 01:30 AM IST

ಸಾರಾಂಶ

ಗುರುಕುಲ ಪರಂಪರೆಯ ಶಿಕ್ಷಣ ಇಂದಿನ ಅಗತ್ಯ: ಕುಮಾರಸ್ವಾಮಿ, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ಕ್ರೀಡೋತ್ಸವದಲ್ಲಿ ಭಾಗಿಯಾದ ಜೆಡಿಎಸ್ಸ್‌ ಮುಖಂಡ

ಕನ್ನಡಪ್ರಭ ವಾರ್ತೆ ಬಂಟ್ವಾಳ

ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ, ಗುರುಕುಲ ಪರಂಪರೆಯನ್ನು ನೆನಪಿಸುವ ಶಿಕ್ಷಣ ರಾಜ್ಯದ ಎಲ್ಲ ಕಡೆಗಳಲ್ಲೂ ಕಾರ್ಯರೂಪಕ್ಕೆ ಬರಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ಮುಖಂಡ ಎಚ್‌.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಅವರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್‌ ಆಶ್ರಯದಲ್ಲಿ ಶನಿವಾರ ಕಲ್ಲಡ್ಕ ಹನುಮಾನ್‌ ನಗರದಲ್ಲಿ ನಡೆದ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನನ್ನ ಜೀವನದ ಅಪೂರ್ವ ಸಂದರ್ಭ. ಸಮಾಜದ ಎಲ್ಲ ವರ್ಗದ ಮಕ್ಕಳಿಗೆ ಇಲ್ಲಿ ಅತ್ಯುತ್ತಮ ಶಿಕ್ಷಣ ನೀಡಲಾಗುತ್ತದೆ. ಈ ಮೂಲಕ ಡಾ.ಪ್ರಭಾಕರ ಭಟ್ಟರು ಸಮಾಜಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡುತ್ತಿದ್ದಾರೆ. ದೇಶದ ಕೀರ್ತಿಯನ್ನು ಇನ್ನಷ್ಟು ಎತ್ತರಿಸುವ ದಿಶೆಯಲ್ಲಿ ಇಲ್ಲಿ ನೀಡುತ್ತಿರುವ ರಾಷ್ಟ್ರಭಕ್ತಿಯ ಶಿಕ್ಷಣ ಶ್ಲಾಘನಾರ್ಹ ಎಂದರು.ನನ್ನ ಕಣ್ತೆರೆಸಿದೆ: ಈ ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ಮಕ್ಕಳ ಪೋಷಕರು ನೀಡುತ್ತಿರುವ ಪ್ರೋತ್ಸಾಹ ಅನನ್ಯವಾದ್ದು. ಇಲ್ಲಿ ಕಲಿತ ಎಲ್ಲ ಮಕ್ಕಳೂ ಉತ್ತಮ ವಿದ್ಯಾಭ್ಯಾಸ ಪಡೆದು ಶಿಸ್ತಿನ ಬದುಕು ರೂಪಿಸುತ್ತಾರೆ. ಜ್ಞಾನ, ಬುದ್ಧಿ, ವಿಕಸನದ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತಿದೆ. ಇಲ್ಲಿನ ಎಲ್ಲ ಚಟುವಟಿಕೆ ನನ್ನ ಕಣ್ತೆರೆಸಿದೆ. ಇಲ್ಲಿನ ಕ್ರೀಡೋತ್ಸವ ನೋಡಿ ನಾನು ಕೂಡ ಉತ್ತರಾಧಿ ಮಠದ ಪರಿಸರದಲ್ಲಿ ಕಳೆದ ಬಾಲ್ಯ ಜೀವನವನ್ನು ನೆನಪಿಸುವಂತೆ ಮಾಡಿದೆ ಎಂದು ಕುಮಾರಸ್ವಾಮಿ ಹೇಳಿದರು.

ಮಾನವೀಯ ಗುಣ ಹೊಂದಿ: ಪ್ರತಿಯೊಬ್ಬರೂ ಮಾನವೀಯ ಗುಣ ಹೊಂದಬೇಕು, ಪ್ರಸ್ತುತ ದಿನಗಳಲ್ಲಿ ಬಾಂಧವ್ಯದ ಕೊರತೆ ಕಾಣುತ್ತಿರುವ ಈ ದಿನಗಳಲ್ಲಿ ಹಳೆ ಬಾಂಧವ್ಯವನ್ನು ಮುಂದುವರಿಸುವ ಅವಶ್ಯಕತೆ ಇದೆ. ಸರ್ಕಾರಗಳನ್ನು ಕಣ್ತೆರೆಸುವ ಶಿಕ್ಷಣ ಇಲ್ಲಿ ನೀಡಲಾಗುತ್ತದೆ ಎಂದರು.

ಕೇಂದ್ರ ಮಾಜಿ ಸಚಿವ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌, ವಿಧಾನ ಪರಿಷತ್‌ ಸದಸ್ಯ ಭೋಜೇಗೌಡ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ರಾಜೇಶ್‌ ನಾಯ್ಕ್‌, ಭಾಗೀರಥಿ ಮುರುಳ್ಯ, ವೇದವ್ಯಾಸ್‌ ಕಾಮತ್‌, ಗುರುರಾಜ ಗಂಟಿಹೊಳಿ, ಸುರೇಶ್‌ ಶೆಟ್ಟಿ ಗುರ್ಮೆ, ಉಮಾನಾಥ ಕೋಟ್ಯಾನ್‌, ಮಹಾನಗರ ಪಾಲಿಕೆ ಮೇಯರ್‌ ಸುಧೀರ್‌ ಶೆಟ್ಟಿ, ಮಾಜಿ ಸಚಿವರಾದ ನಾಗರಾಜ್‌ ಶೆಟ್ಟಿ, ಕೃಷ್ಣ ಪಾಲೇಮಾರ್‌, ಸೇಡಂನ ಶ್ರೀಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಅಧ್ಯಕ್ಷ ಶ್ರೀ ಸದಾಶಿವ ಸ್ವಾಮಿ, ರಕ್ಷಣಾ ಸಚಿವಾಲಯದ ರಾಷ್ಟ್ರೀಯ ಭದ್ರತಾ ಸಲಹೆಗಾರ ಕರ್ನಲ್‌ ಅಶೋಕ್‌ ಕಿಣಿ, ಇಸ್ರೋ ವಿಜ್ಞಾನಿ ನಾಗೇಂದ್ರ, ಉದ್ಯಮಿ ಸುಖಾನಂದ ಶೆಟ್ಟಿ, ಪತ್ರಕರ್ತ ಜಿತೇಂದ್ರ ಕುಂದೇಶ್ವರ ಮತ್ತಿತರರಿದ್ದರು.

ಶಾಸ್ತ್ರದ ಜತೆ ಆತ್ಮರಕ್ಷಣೆ ವಿದ್ಯೆ: ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ. ಪ್ರಭಾಕರ ಭಟ್‌ ಕಲ್ಲಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಶಾಲೆಯಲ್ಲಿ ಶಾಸ್ತ್ರದ ಜತೆ ಶಸ್ತ್ರವನ್ನೂ ಕಲಿಸಿಕೊಡಲಾಗುತ್ತದೆ. ಅಂದರೆ ನಮ್ಮನ್ನು ರಕ್ಷಿಸುವ (ಆತ್ಮರಕ್ಷಣೆ) ಚಿಂತನೆಯನ್ನು ಹೇಳಿಕೊಡಲಾಗುತ್ತದೆ. ಇಲ್ಲಿ ಕಲಿತ ಮಕ್ಕಳು ರಾಷ್ಟ್ರ ಜಾಗೃತಿಯನ್ನು ಬೆಳೆಸಿಕೊಂಡು ತೆರಳಬೇಕು ಎಂಬುದು ನಮ್ಮ ಅಪೇಕ್ಷೆ ಎಂದರು.

ಡಾ. ಪ್ರಭಾಕರ ಭಟ್ಟರನ್ನು ಹಿಂದೆ ಟೀಕಿಸಿದ್ದೆ

ಕಲ್ಲಡ್ಕ ಡಾ.ಪ್ರಭಾಕರ ಭಟ್‌ ಬಗ್ಗೆ ನಾನು ಬೇರೆ ಏನೋ ತಿಳಿದುಕೊಂಡಿದ್ದೆ. ಇಲ್ಲಿಗೆ ಬರುವುದಕ್ಕೂ ಮೊದಲು ಅವರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಹಾಗಾಗಿ ಹಿಂದಿನಂತೆ ಟೀಕಿಸುವುದಿಲ್ಲ. ಕೆಲವೊಮ್ಮೆ ನನಗೆ ಸಿಗುವ ಮಾಹಿತಿಗಳು ತಪ್ಪು ಅಭಿಪ್ರಾಯಕ್ಕೆ ಕಾರಣವಾಗುತ್ತವೆ. ಸೌಹಾರ್ದತೆ ಬದುಕಿಗೆ ಇಲ್ಲಿನ ಮಾದರಿ ಶಿಕ್ಷಣದ ಅಗತ್ಯವಿದೆ ಎಂದು ಕುಮಾರಸ್ವಾಮಿ ಪ್ರತಿಪಾದಿಸಿದರು.

ವಿದ್ಯಾಕೇಂದ್ರ ಸುತ್ತಾಡಿದ ಎಚ್‌ಡಿಕೆ: ಸಂಜೆ ಬೇಗನೆ ಆಗಮಿಸಿದ ಕುಮಾರಸ್ವಾಮಿ ಅವರು ಶ್ರೀರಾಮ ವಿದ್ಯಾಕೇಂದ್ರ ಸುತ್ತಾಡಿ ಗುರುಕುಲ ಮಾದರಿ ಪರಿಸರವನ್ನು ವೀಕ್ಷಿಸಿದರು.

ವಿದ್ಯಾ ಕೇಂದ್ರದ ಮುಖ್ಯಸ್ಥ ಡಾ.ಪ್ರಭಾಕರ ಭಟ್‌ ಕಲ್ಲಡ್ಕ ಅವರೊಂದಿಗೆ ಕುಶಲೋಪರಿ ಮಾತುಕತೆ ನಡೆಸಿದರು. ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಸ್ವತಿ ವಂದನೆಯಲ್ಲಿ ಪಾಲ್ಗೊಂಡ ಕುಮಾರಸ್ವಾಮಿ ಬಳಿಕ ಸಭಾಂಗಣದಲ್ಲಿ, ಇತ್ತೀಚೆಗೆ ಹುತಾತ್ಮ ಕ್ಯಾಪ್ಟನ್‌ ಪ್ರಾಂಜಲ್‌ಗೆ ಪುಷ್ಪ ನಮನ ಗೌರವ ಸಲ್ಲಿಸಿದರು.