ಜಿ.ಎಸ್. ಪಾಟೀಲರಿಗೆ ಎಚ್.ಕೆ. ಪಾಟೀಲರು ಸಚಿವ ಸ್ಥಾನ ಬಿಟ್ಟುಕೊಡಲಿ: ಅರ್ಜುನ‌ ಕೊಪ್ಪಳ‌

| Published : Nov 05 2025, 12:45 AM IST

ಜಿ.ಎಸ್. ಪಾಟೀಲರಿಗೆ ಎಚ್.ಕೆ. ಪಾಟೀಲರು ಸಚಿವ ಸ್ಥಾನ ಬಿಟ್ಟುಕೊಡಲಿ: ಅರ್ಜುನ‌ ಕೊಪ್ಪಳ‌
Share this Article
  • FB
  • TW
  • Linkdin
  • Email

ಸಾರಾಂಶ

ಪುರಸಭೆ ಆಶ್ರಯ ಆಯ್ಕೆ ಸಮಿತಿ ಸದಸ್ಯ ಅರ್ಜುನ‌ ಕೊಪ್ಪಳ‌ ಮಾತನಾಡಿ, ಶಾಸಕ ಜಿ.ಎಸ್. ಪಾಟೀಲರು 3 ಬಾರಿ ಶಾಸಕರಾಗಿ, ತಮಗೆ ನೀಡಿದ ಹುದ್ದೆ, ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದರು.

ರೋಣ: ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ರೋಣ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ಸಿಗಬೇಕು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ಮನಸ್ಸು ಮಾಡಬೇಕು. ಅಗತ್ಯಬಿದ್ದರೆ ತಾವು ತ್ಯಾಗಿಗಳಾಗಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಆಗ್ರಹಿಸಿದರು.

ಮಂಗಳವಾರ ಇಲ್ಲಿ ನಡೆದ ಸಭೆಯಲ್ಲಿ ಪುರಸಭೆ ಆಶ್ರಯ ಆಯ್ಕೆ ಸಮಿತಿ ಸದಸ್ಯ ಅರ್ಜುನ‌ ಕೊಪ್ಪಳ‌ ಮಾತನಾಡಿ, ಶಾಸಕ ಜಿ.ಎಸ್. ಪಾಟೀಲರು 3 ಬಾರಿ ಶಾಸಕರಾಗಿ, ತಮಗೆ ನೀಡಿದ ಹುದ್ದೆ, ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಮುತ್ಸದ್ಧಿ ರಾಜಕಾರಣಿ, ಅಜಾತಶತ್ರು. ಸದಾ ಬಡವರ, ದೀನ ದಲಿತರ, ಶೋಷಿತರ ಪರ ಧ್ವನಿಯಾಗಿ, ಅಭಿವೃದ್ಧಿ ಪರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡಿರುವ ಇವರಿಗೆ ಈಗಲಾದರೂ ಸಚಿವ ಸ್ಥಾನ ಸಿಗಲಿ ಎಂದರು.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗಟ್ಟಿಯಾಗಿ ಕಟ್ಟಿದ್ದಾರೆ. ಅಪಾರ ಅಭಿಮಾನಿಗಳ ಬಳಗ ಹೊಂದಿ ಪಕ್ಷಕ್ಕಾಗಿ ಅವಿರತ ದುಡಿಯುತ್ತಿದ್ದಾರೆ. ಹಿರಿಯರಾದ ಜಿ.ಎಸ್. ಪಾಟೀಲ ಅವರು ಈ ಬಾರಿ ಸಚಿವರಾಗಲು ಹೈಕಮಾಂಡ್ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರು ಮನಸ್ಸು ಮಾಡಬೇಕು. ಜಿಲ್ಲೆಗೆ ಒಂದೇ ಸಚಿವ ಸ್ಥಾನ ಎಂದು ಹೈಕಮಾಂಡ್ ನಿರ್ಧರಿಸಿದ್ದೇ ಆದಲ್ಲಿ ಈ ಬಾರಿ ಸಚಿವ ಎಚ್.ಕೆ. ಪಾಟೀಲ ಅವರು ಪೈಪೋಟಿ ಮಾಡದೇ ಜಿ.ಎಸ್. ಪಾಟೀಲರಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಜಿ.ಎಸ್. ಪಾಟೀಲ, ಎಚ್.ಕೆ. ಪಾಟೀಲರು ನಮ್ಮ ನಾಯಕರೆ‌ ಆಗಿದ್ದಾರೆ. ಜಿಲ್ಲೆಗೆ 2 ಸ್ಥಾನವಿದ್ದಲ್ಲಿ, ಎಚ್.ಕೆ. ಪಾಟೀಲರು, ಜಿ.ಎಸ್. ಪಾಟೀಲ‌ ಸಚಿವರಾದರೆ ನಮಗೆ ಮತ್ತಷ್ಟು ಸಂತಸವಾಗುವುದು ಎಂದರು.

ಮುಖಂಡ ಅಬ್ದುಲಸಾಬ್ ಹೊಸಮನಿ ಮಾತನಾಡಿ, ಶಾಸಕ ಜಿ.ಎಸ್. ಪಾಟೀಲರಲ್ಲಿ ಸಚಿವರಾಗುವ ಎಲ್ಲ ಅರ್ಹತೆಗಳಿವೆ. ಅವರು ಅಧಿಕಾರಕ್ಕೆ ಆಸೆ ಪಡದೆ ಕೇವಲ ಜನರ ಶ್ರೇಯೋಭಿವೃದ್ಧಿಗೆ, ಸಮಾಜಮುಖಿ‌ ಕಾರ್ಯಗಳಲ್ಲಿ ತೊಡಗಿರುವ ಮಹಾನಾಯಕ ಎಂದರು.

ಸಭೆಯಲ್ಲಿ ಮುಖಂಡರಾದ ಮುತ್ತಪ್ಪ ಕೊಪ್ಪದ, ರೇವಣೆಪ್ಪ ಗದಗಿನ, ರಾಮಪ್ಪ ಕುರಿ, ಅಶೋಕ ಕೊಪ್ಪದ, ಬಾವರಾಜ ಮುಗಳಿ, ಅಂದಪ್ಪ ಗಡಗಿ, ಹುಚ್ಚಿರಪ್ಪ ಗದಗಿನ, ಶಶಿಧರ ಕೊಪ್ಪದ, ಕರೀಂಸಾಬ ಬಸರಿಗಿಡದ, ಶಿದ್ದಪ್ಪ ಕೊಪ್ಪದ, ವೀರಭಧ್ರಪ್ಪ ಕೊಪ್ಪದ, ಶರಣಪ್ಪ ಕೊಪ್ಪದ, ಬಸವರಾಜ ಕುಂಬಾರ, ಅಶೋಕ ಗಡಗಿ, ಮಲ್ಲಿಕಾರ್ಜುನ ಮುಗಳಿ, ಬಸಪ್ಪ ಕೊಪ್ಪದ ಮುಂತಾದವರಿದ್ದರು.