ಎಚ್‌.ಎಲ್‌.ನಾಗೇಗೌಡರ ಸಮಗ್ರ ಕೃತಿಗಳು ಮರು ಪ್ರಕಟಣೆ

| Published : Sep 23 2025, 01:03 AM IST

ಸಾರಾಂಶ

ರಾಮನಗರ: ನಾಡೋಜ ಎಚ್.ಎಲ್.ನಾಗೇಗೌಡ ಅವರ ಸಮಗ್ರ ಕೃತಿಗಳನ್ನು ಹಂತ ಹಂತವಾಗಿ ಪುನರ್ ಪ್ರಕಟಿಸುವ ಯೋಜನೆ ರೂಪಿಸಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಕಾರ್ಯಾಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ತಿಳಿಸಿದರು.

ರಾಮನಗರ: ನಾಡೋಜ ಎಚ್.ಎಲ್.ನಾಗೇಗೌಡ ಅವರ ಸಮಗ್ರ ಕೃತಿಗಳನ್ನು ಹಂತ ಹಂತವಾಗಿ ಪುನರ್ ಪ್ರಕಟಿಸುವ ಯೋಜನೆ ರೂಪಿಸಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಕಾರ್ಯಾಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ತಿಳಿಸಿದರು.

ನಗರದ ಹೊರವಲಯದ ಜಾನಪದ ಲೋಕದಲ್ಲಿ ದಸರಾ ಆಚರಣೆ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ನಾಗೇಗೌಡರ ಕೃತಿಗಳ ಪೈಕಿ ಬೆಟ್ಟದಿಂದ ಬಟ್ಟಲಿಗೆ ಕೃತಿಯನ್ನು ಮರು ಮುದ್ರಣಗೊಂಡು ಬಿಡುಗಡೆ ಆಗಿದೆ ಎಂದರು.

ಎಚ್.ಎಲ್.ನಾಗೇಗೌಡರ ಅಪರೂಪದ ಕೃತಿಗಳು ಓದುಗರಿಗೆ ಸಿಗುತ್ತಿಲ್ಲ. ಹೀಗಾಗಿ ಓದುಗರ ಅಪೇಕ್ಷೆಯ ಹಿನ್ನೆಲೆಯಲ್ಲಿ ಅವರ ಕೃತಿಗಳ ಪುನರ್ ಮುದ್ರಣದ ಅವಶ್ಯಕತೆ ಮನಗಂಡು ಅವರ ಸಮಗ್ರ ಕೃತಿಗಳನ್ನು ಪ್ರಕಟಿಸುವ ಯೋಜನೆ ರೂಪಿಸಿದ್ದೇವೆ. ಇದಕ್ಕಾಗಿ ಅವರ ಕುಟುಂಬದವರಿಂದ ಅನುಮತಿ ಪಡೆದುಕೊಂಡಿದ್ದೇವೆ ಎಂದು ಹೇಳಿದರು.

ಚಿತ್ರ ಕುಟೀರ ಮರು ನಿರ್ಮಾಣ:

ನಾಗೇಗೌಡರ ಜೀವನ ಮತ್ತು ಸಾಧನೆಗಳನ್ನು ಚಿತ್ರ ಮತ್ತು ವಸ್ತುಗಳ ಸಮೇತ ಪರಿಚಯಿಸುವ ಚಿತ್ರ ಕುಟೀರ ಶಿಥಿಲಾವಸ್ಥೆಯಲ್ಲಿದೆ. ಅದನ್ನು 35 ಲಕ್ಷ ರುಪಾಯಿ ವೆಚ್ಚದಲ್ಲಿ ಮರು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಈ ಆರ್ಥಿಕ ವರ್ಷದ ಅಂತ್ಯಕ್ಕೆ ಸಿದ್ಧಗೊಳ್ಳುವ ನಿರೀಕ್ಷೆಯಿದೆ. ಜಾನಪದ ಲೋಕದ ಪ್ರಕಟಣೆಗಳ ಪ್ರದರ್ಶನ, ಮಾರಾಟ, ಜನಪದ ಮತ್ತು ಬುಡಕಟ್ಟು ಸಂಸ್ಕೃತಿಯನ್ನು ಬಿಂಬಿಸುವ ಕರಕುಶಲ ವಸ್ತುಗಳ ಮಾರಾಟ ಮತ್ತು ಪ್ರದರ್ಶನವನ್ನು ದೃಷ್ಟಿಯಲ್ಲಿಟ್ಟುಕೊಂಡು ಒಂದು ಪ್ರತ್ಯೇಕ ಮಳಿಗೆ ತೆರೆಯಲು ಚಿಂತನೆ ನಡೆಸಲಾಗಿದೆ.

ಜಾನಪದ ಲೋಕದ ಮುಂಭಾಗದಲ್ಲಿರುವ ಅಂಗಡಿ ಮಳಿಗೆಗಳ ಪೈಕಿ ಎರಡು ಅಂಗಡಿಗಳನ್ನು ಖಾಲಿ ಮಾಡಿ ಅಲ್ಲಿ ಪುಸ್ತಕ ಮತ್ತು ಕರಕುಶಲ ಮಾರಾಟ ಕೇಂದ್ರ ತೆರೆಯಲು ನವೀಕರಣ ಕಾರ್ಯ ಪ್ರಾರಂಭಗೊಂಡಿದೆ ಎಂದು ಹೇಳಿದರು.

ಡಿಪ್ಲೊಮಾ ತರಗತಿಗಳು ಪ್ರಾರಂಭ:

ಜಾನಪದ ಲೋಕದಲ್ಲಿ 1999ರಿಂದಲೂ ಜಾನಪದ ಮಹಾವಿದ್ಯಾಲಯದ ಅಡಿಯಲ್ಲಿ ಜನಪದ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಬದುಕನ್ನು ಕುರಿತ ಶಿಕ್ಷಣ ನೀಡುತ್ತಾ ಬರಲಾಗುತ್ತಿದೆ. ಜಾನಪದ ಡಿಪ್ಲೊಮಾ ತರಗತಿಗಳು ಪ್ರಾರಂಭವಾಗಿ 26 ವರ್ಷಗಳು ತುಂಬಿದೆ. ಈ ನಿಟ್ಟಿನಲ್ಲಿ ಪ್ರತಿ ಭಾನುವಾರ ಅರ್ಧದಿನ ಪಾಠ, ಉಳಿದ ಅರ್ಧದಿನ ಪ್ರಾಯೋಗಿಕ ತರಗತಿಗಳನ್ನು ನಡೆಸಲಾಗುತ್ತಿದೆ.

ಕಳೆದ ಎರಡು ವರ್ಷದಿಂದ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ಜಾನಪದ ಮತ್ತು ಪ್ರದರ್ಶಕ ಕಲೆಗಳ ಡಿಪ್ಲೊಮಾ ಕೋರ್ಸ್ ನಡೆಸುತ್ತಿದ್ದು, ಶೈಕ್ಷಣಿಕ ವರ್ಷಕ್ಕೆ ವಿಶ್ವವಿದ್ಯಾಲಯದ ನಿಯಮಾನುಸಾರ ಒಟ್ಟು 70 ವಿದ್ಯಾರ್ಥಿಗಳ ಕಲಿಕೆಗೆ ಅವಕಾಶ ನೀಡಲಾಗಿದೆ ಎಂದರು.

ಈ ಕೋರ್ಸ್‌ಗೆ ಶಾಲಾ ಶಿಕ್ಷಕರು, ಪಿಎಚ್ ಡಿ ಸಂಶೋಧನಾರ್ಥಿಗಳು, ಎಂ.ಎ., ಪ್ರದರ್ಶನ ಕಲಾ ವಿದ್ಯಾರ್ಥಿಗಳು ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಕೂಡ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಪ್ರವೇಶ ಪಡೆದಿದ್ದಾರೆ. ಈ ವಿದ್ಯಾರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಪ್ರೊ.ಹಿ.ಚಿ.ಬೋರಲಿಂಗಯ್ಯ ತಿಳಿಸಿದರು.

ಸರ್ಕಾರದ ಅನುದಾನ ಸಾಲುತ್ತಿಲ್ಲ:

ರಾಜ್ಯ ಸರ್ಕಾರ ಜಾನಪದ ಲೋಕಕ್ಕೆ ನೀಡುತ್ತಿರುವ ಅನುದಾನ ಯಾವುದಕ್ಕೂ ಸಾಲುತ್ತಿಲ್ಲ. ಜಾನಪದ ಲೋಕದ ನಿರ್ವಹಣೆ, ತಿಂಗಳ ಅತಿಥಿಯಂತಹ ಕಾರ್ಯಕ್ರಮಗಳ ಖರ್ಚು, ಸಿಬ್ಬಂದಿಗಳ ವೇತನ, ವಿದ್ಯುತ್ ಬಿಲ್ ಪಾವತಿ ಸೇರಿದಂತೆ ಇತರೆ ಖರ್ಚು ವೆಚ್ಚಗಳಿಗಾಗಿ 1.35 ಕೋಟಿ ರುಪಾಯಿ ಆಗುತ್ತಿದೆ. ಹೆಚ್ಚಿನ ಅನುದಾನ ಕೋರಿದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಜಾನಪದ ಲೋಕಕ್ಕೆ 2 ಕೋಟಿ ವಿಶೇಷ ಅನುದಾನ ಘೋಷಣೆ ಮಾಡಿದ್ದರು. ಇದರಲ್ಲಿ 1 ಕೋಟಿ ರುಪಾಯಿ ಮಾತ್ರ ಬಂದಿದ್ದು, ಉಳಿಕೆ 1 ಕೋಟಿ ಇನ್ನೂ ಬಿಡುಗಡೆಯಾಗಿಲ್ಲ. ನಾಗೇಗೌಡರ ಕೃತಿಗಳ ಮರು ಮುದ್ರಣಕ್ಕೂ ಹೆಚ್ಚಿನ ಹಣ ಖರ್ಚಾಗಲಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಅನುದಾನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್‌, ಕ್ಯೂರೇಟರ್ ರವಿ, ಸರಸವಾಣಿ ಹಾಜರಿದ್ದರು.

ಬಾಕ್ಸ್‌..............

ಜಾನಪದ ಲೋಕದಲ್ಲಿ ದಸರಾ ಬೊಂಬೆಗಳ ಪ್ರದರ್ಶನ

ರಾಮನಗರ: ನಗರದ ಹೊರ ವಲಯದ ಜಾನಪದ ಲೋಕದಲ್ಲಿ ನವರಾತ್ರಿ ದಸರಾ ಹಬ್ಬದ ಅಂಗವಾಗಿ ದಸರಾ ಬೊಂಬೆಗಳ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಆಯೋಜಿಸಿರುವ ದಸರಾ ಬೊಂಬೆಗಳು ಇಂದಿನಿಂದ ಒಂದು ತಿಂಗಳ ಕಾಲ ಪ್ರದರ್ಶನವಿರಲಿದೆ.

ಪರಿಷತ್ತಿನ ಕಾರ್ಯಾಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಮಾತನಾಡಿ, ಜಾನಪದ ಲೋಕದಲ್ಲಿ ಕಳೆದ 28 ವರ್ಷಗಳಿಂದಲೂ ಗೊಂಬೆ ಕೂರಿಸಲಾಗುತ್ತಿದೆ. ಇದರ ಅಂಗವಾಗಿ ನವರಾತ್ರಿಯ 9 ದಿನಗಳಲ್ಲದೇ ಒಂದು ತಿಂಗಳ ಕಾಲ ಬೊಂಬೆ ಪ್ರದರ್ಶನ ಜಾನಪದ ಲೋಕದಲ್ಲಿ ಇರಲಿದೆ ಎಂದರು.

ಈ ಪ್ರದರ್ಶನದಲ್ಲಿ ವಿಶ್ವದ ವಿವಿಧ ದೇಶಗಳ ವೇಷ-ಭೂಷಣದ ಆಕೃತಿಗಳು ಕಾಣಸಿಗಲಿವೆ. ಇಲ್ಲಿ ಪಟ್ಟದ ಗೊಂಬೆಗಳು, ಶಿವ, ಪಾರ್ವತಿ, ವಿಷ್ಣು, ಲಕ್ಷ್ಮಿ, ಸರಸ್ವತಿ, ಗೋವರ್ಧನ ಗಿರಿ ಎತ್ತಿದ ಕೃಷ್ಣ, ವಿಷ್ಣು ಪರಿವಾರ, ರಾ‍ವಣನ ದರ್ಬಾರ್, ದೇವಸ್ಥಾನದ ಮುಂದೆ ಕುಣಿತ, ಮೈಸೂರು ಅರಮನೆ... ಹೀಗೆ ಹತ್ತು ಹಲವು ವಿಶೇಷ ಬೊಂಬೆಗಳು ಅನಾವರಣಗೊಳ್ಳಲಿವೆ ಎಂದು ತಿಳಿಸಿದರು.

ಬಾಕ್ಸ್‌.............

ಅ.2ರಂದು ಬನ್ನಿಪೂಜೆ:

ವಿಜಯದಶಮಿಯಂದು ಬನ್ನಿ ಪೂಜೆ ಆಚರಿಸಲಾಗುತ್ತಿದೆ. ಈ ಬನ್ನಿ ಎಲೆಯನ್ನು ಕಿರಿಯರು - ಹಿರಿಯರು ಪರಸ್ಪರ ಹಂಚಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಜಾನಪದ ಲೋಕದಲ್ಲಿ ವಿಜಯದಶಮಿಯಂದು ಅಂದರೆ ಅ.2ರಂದು ಆರತಿ ಮತ್ತು ದೇವರ ಮೆರವಣಿಗೆಯೊಂದಿಗೆ ಬನ್ನಿಮರದ ಪೂಜಾ ಕಾರ್ಯಕ್ರಮ ನೆರವೇರಲಿವೆ ಎಂದು ಬೋರಲಿಂಗಯ್ಯ ಹೇಳಿದರು.

(ಎರಡೂ ಫೋಟೊ ಬಳಸಿ)

22ಕೆಆರ್ ಎಂಎನ್ 3,4.ಜೆಪಿಜಿ

3.ಜಾನಪದ ಲೋಕದಲ್ಲಿ ದಸರಾ ಬೊಂಬೆಗಳ ಪ್ರದರ್ಶನಕ್ಕೆ ಕರ್ನಾಟಕ ಜಾನಪದ ಪರಿಷತ್ ಕಾರ್ಯಾಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಚಾಲನೆ ನೀಡಿದರು.

4.ಜಾನಪದ ಲೋಕದಲ್ಲಿ ದಸರಾ ಬೊಂಬೆಗಳ ಪ್ರದರ್ಶನ.