ಸಾರಾಂಶ
ತಾಲೂಕಿನ ಸಂಪಿಗೆ ಹೊಸಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹಂಪಲಾಪುರದ ಎಚ್.ಎನ್. ಷಣ್ಮುಖಸ್ವಾಮಿ, ಉಪಾಧ್ಯಕ್ಷರಾಗಿ ಸೀತಾಲಕ್ಷ್ಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಸಂಪಿಗೆ ಹೊಸಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹಂಪಲಾಪುರದ ಎಚ್.ಎನ್. ಷಣ್ಮುಖಸ್ವಾಮಿ, ಉಪಾಧ್ಯಕ್ಷರಾಗಿ ಸೀತಾಲಕ್ಷ್ಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಶ್ರೀಧರ್ ರವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ನಟರಾಜು ರಾಜೀನಾಮೆ ನೀಡಿದ್ದರಿಂದಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ತೆರವಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಎಚ್.ಎನ್.ಷಣ್ಮುಖ ಸ್ವಾಮಿ, ಉಪಾಧ್ಯಕ್ಷ ಸ್ಥಾನಕ್ಕೆ ಸೀತಾಲಕ್ಷ್ಮಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿಗಳಾಗಿದ್ದ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ರವರು ಈರ್ವರ ಹೆಸರನ್ನು ಪ್ರಕಟಿಸಿದರು. ಒಟ್ಟು 12 ನಿರ್ದೇಶಕರು ಇರುವ ಈ ಸಹಕಾರ ಸಂಘದ ಚುನಾವಣೆಯಲ್ಲಿ 8 ಮಂದಿ ನಿರ್ದೇಶಕರು ಮಾತ್ರ ಭಾಗವಹಿಸಿದ್ದರು. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ನಿರ್ದೇಶಕರಾದ ಶ್ರೀಧರ್, ನಟರಾಜು, ಸದಾಶಿವಯ್ಯ, ಮಹಾಲಿಂಗಯ್ಯ, ಎಸ್.ಶಿವಣ್ಣ, ಪರ್ವಿನ್ ಬಾನು, ಸೇರಿದಂತೆ ಹಲವಾರು ಮಂದಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಎಚ್.ಎನ್.ಷಣ್ಮುಖಸ್ವಾಮಿ ತಮ್ಮ ಸಂಘದಲ್ಲಿ ಸಾಲಗಾರರು ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ ಒಟ್ಟು ಸುಮಾರು 1700 ಕ್ಕೂ ಹೆಚ್ಚು ಮಂದಿ ಸದಸ್ಯರು ಇದ್ದಾರೆ. ಸಂಘದಿಂದ ಸಾಲ ಪಡೆದಿರುವವರು ಪ್ರಾಮಾಣಿಕವಾಗಿ ತಾವು ಪಡೆದ ಸಾಲ ಮತ್ತು ಬಡ್ಡಿಯನ್ನು ಹಿಂತಿರುಗಿಸುತ್ತಿದ್ದಾರೆ. ಹಾಗಾಗಿ ತಮ್ಮ ಸಂಸ್ಥೆ ಲಾಭದಲ್ಲಿದೆ ಎಂದು ಹೇಳಿದರು. ಸಂಘದ ಸಿಇಓ ಎಚ್.ಎನ್. ಆನಪ್ಪಗೌಡ ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿಗಳಿಗೆ ನೆರವು ನೀಡಿದರು.