ಅಂತರ್ಜಾತಿ ವಿವಾಹವಾದವರಿಗೆ ಸರ್ಕಾರದಿಂದ ಸಿಗುವ ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸಿ ಎರಡ್ಮೂರು ವರ್ಷ ಕಳೆದರೂ ಹಣ ಕೈ ಸೇರದಿರುವುದು ದಂಪತಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ರಾಘು ಕಾಕರಮಠ

ಅಂಕೋಲಾ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಿ ಸಾಮಾಜಿಕ ಸಾಮರಸ್ಯಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ಪ್ರೋತ್ಸಾಹಧನ ಯೋಜನೆಯೇ ಈಗ ಫಲಾನುಭವಿಗಳ ಪಾಲಿಗೆ ಕಾಯುವಿಕೆಯ ಯೋಜನೆಯಾಗಿ ಪರಿಣಮಿಸಿದೆಯೇ ಎಂಬ ಪ್ರಶ್ನೆ ಮೂಡಿದೆ.

ಅಂತರ್ಜಾತಿ ವಿವಾಹವಾದವರಿಗೆ ಸರ್ಕಾರದಿಂದ ಸಿಗುವ ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸಿ ಎರಡ್ಮೂರು ವರ್ಷ ಕಳೆದರೂ ಹಣ ಕೈ ಸೇರದಿರುವುದು ದಂಪತಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಅಗತ್ಯ ದಾಖಲೆಗಳನ್ನು ನೀಡಿ, ಇಲಾಖೆಯ ಅನುದಾನಕ್ಕಾಗಿ ಕಾಯುತ್ತಿರುವ ದಂಪತಿಗಳು ಇದೀಗ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯತ್ತ ಪದೇ ಪದೇ ಅಲೆಯುವಂತಾಗಿದೆ.

ಅಂತರ್ಜಾತಿ ವಿವಾಹಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿವಾಹಿತ ವಧು- ವರರಿಗೆ ಸರ್ಕಾರ ಪ್ರೋತ್ಸಾಹಧನ ನೀಡುತ್ತಿದೆ. ಈ ಯೋಜನೆಯಡಿ ಅರ್ಹ ದಂಪತಿಗಳು ಸಮಾಜ ಕಲ್ಯಾಣ ಇಲಾಖೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುತ್ತಾರೆ. ಆದರೆ, ಅರ್ಜಿ ಸಲ್ಲಿಸಿದ ಬಳಿಕವೂ ಸಕಾಲದಲ್ಲಿ ಹಣ ಬಿಡುಗಡೆಯಾಗದಿರುವುದರಿಂದ ಸರ್ಕಾರದ ಪ್ರೋತ್ಸಾಹ ಯಾವಾಗ ಕೈ ಸೇರುತ್ತದೆ? ಎಂಬ ನಿರೀಕ್ಷೆಯಲ್ಲೇ ದಿನದೂಡಬೇಕಾಗಿದೆ.ಇಲಾಖೆಯ ಸುತ್ತಾಟ: ಹಿಂದೆ ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಅದೇ ವರ್ಷದಲ್ಲಿ ಹಣ ಬಿಡುಗಡೆಯಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದ್ದು, ಅರ್ಜಿ ಸಲ್ಲಿಸಿ ಎರಡು- ಮೂರು ವರ್ಷ ಕಳೆದರೂ ಅನುದಾನ ದೊರೆಯದಿರುವ ಪ್ರಕರಣಗಳು ಕಂಡುಬರುತ್ತಿವೆ. ಮದುವೆಯಾಗಿ ಹೊಸ ಬದುಕು ಆರಂಭಿಸಿರುವ ದಂಪತಿಗಳು ಸರ್ಕಾರದ ಪ್ರೋತ್ಸಾಹಧನಕ್ಕಾಗಿ ಕಾಯಬೇಕಾಗಿದೆ. ಹಣ ಬಿಡುಗಡೆಯಾಗದ ಹಿನ್ನೆಲೆ ಅರ್ಜಿಯ ಸ್ಥಿತಿಗತಿ ತಿಳಿದುಕೊಳ್ಳಲು ಇಲಾಖೆಯ ಕಚೇರಿಗೆ ತೆರಳಿ ವಿಚಾರಿಸುವುದು ಅನಿವಾರ್ಯವಾಗಿದೆ.ಅನುದಾನ ಕೊರತೆಯೇ?: ಈ ಹಿಂದೆ ಅರ್ಜಿ ಸಲ್ಲಿಸಿದವರಿಗೆ ನಿಗದಿತ ಅವಧಿಯಲ್ಲೇ ಪ್ರೋತ್ಸಾಹಧನ ದೊರೆಯುತ್ತಿತ್ತು. ಆದರೆ, ಇದೀಗ ಎರಡ್ಮೂರು ವರ್ಷಗಳಾದರೂ ಹಣ ಬಿಡುಗಡೆಯಾಗದಿರುವುದರಿಂದ ಅರ್ಜಿ ಸಲ್ಲಿಸಿರುವ ದಂಪತಿಗಳಲ್ಲಿ ಅಸಮಾಧಾನ ಹೆಚ್ಚಾಗಿದೆ. ಸರ್ಕಾರ ಅಂತರ್ಜಾತಿ ವಿವಾಹವನ್ನು ಉತ್ತೇಜಿಸುವುದಾಗಿ ಹೇಳುತ್ತಿರುವಾಗ, ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಸಕಾಲದಲ್ಲಿ ಹಣ ಬಿಡುಗಡೆ ಮಾಡಬೇಕು ಎಂಬುದು ಫಲಾನುಭವಿಗಳ ಒತ್ತಾಯವಾಗಿದೆ.

ಎಷ್ಟು ಪ್ರೋತ್ಸಾಹಧನ?: ಪರಿಶಿಷ್ಟ ಜಾತಿಯ ಅಥವಾ ಪರಿಶಿಷ್ಟ ಪಂಗಡದ ವ್ಯಕ್ತಿಯನ್ನು ಇತರ ಜಾತಿಯ ವ್ಯಕ್ತಿ ವಿವಾಹವಾದ ಸಂದರ್ಭದಲ್ಲಿ ಅರ್ಹ ದಂಪತಿಗಳಿಗೆ ಸರ್ಕಾರ ಪ್ರೋತ್ಸಾಹಧನ ನೀಡುತ್ತದೆ. ಪರಿಶಿಷ್ಟ ಜಾತಿಯ ವರನಾದಲ್ಲಿ ₹2.50 ಲಕ್ಷ ಹಾಗೂ ಪರಿಶಿಷ್ಟ ಜಾತಿಯ ವಧುವಾದಲ್ಲಿ ₹3.50 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತದೆ.

ಇಲಾಖೆಗೆ ವರದಿ: ಅಂತರ್ಜಾತಿ ವಿವಾಹದ ಪ್ರೋತ್ಸಾಹಧನಕ್ಕೆ ಅನುದಾನ ಬಿಡುಗಡೆಯಾದಾಗ ಸ್ವೀಕೃತವಾದ ಅರ್ಜಿಗಳ ಮೊದಲ ಆದ್ಯತೆ ಮೇರೆಗೆ ಹಣ ನೀಡಲಾಗುತ್ತಿದೆ. ಅನುದಾನ ಬಿಡುಗಡೆಗೊಳಿಸುವಂತೆ ಇಲಾಖೆಗೆ ವರದಿ ಸಲ್ಲಿಸಿ ಮನವಿ ಮಾಡಲಾಗಿದೆ. ಅಂತರ್ಜಾತಿ ವಿವಾಹವನ್ನು ಉತ್ತೇಜಿಸುವ ಉದ್ದೇಶದಿಂದ ಬೀದಿನಾಟಕ, ಕಾರ್ಯಾಗಾರ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಭಾರತಿ ಆಚಾರಿ ತಿಳಿಸಿದರು.6 ಅರ್ಜಿ ಸ್ವೀಕಾರ: ಅಂಕೋಲಾ ತಾಲೂಕಿನಲ್ಲಿ 2024- 25ರಲ್ಲಿ ಪ್ರೋತ್ಸಾಹಧನಕ್ಕಾಗಿನ 6 ಅರ್ಜಿ ಸ್ವೀಕಾರವಾಗಿದ್ದವು. ಅದರಲ್ಲಿ ನಾಲ್ವರು ಫಲಾನುಭವಿಗಳಿಗೆ ಹಣ ಮಂಜೂರಾಗಿದ್ದು, 2 ಬಾಕಿ ಇದೆ. ಇನ್ನು 2025- 26ರಲ್ಲಿ 1 ಹಾಗೂ 2026- 27ರಲ್ಲಿ 3 ಫನಾಭವಿಗಳು ಅಜಿ ಸಲ್ಲಿಸಿದ್ದರು. ಹೀಗೆ ಒಟ್ಟು 6 ಫಲಾನುಭವಿಗಳಿಗೆ ಹಣ ಬಂದಿಲ್ಲ.