ಸಾರಾಂಶ
ಹಗರಿಬೊಮ್ಮನಹಳ್ಳಿ: ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನಿಸಿದ ಗೃಹಸಚಿವ ಅಮಿತ್ ಶಾ ಅವರನ್ನು ಸಂಸದ, ಸಚಿವ ಸ್ಥಾನದಿಂದ ವಜಾಗೊಳಿಸಿ, ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಅಂಬೇಡ್ಕರ್ ಸೇವಾ ಸಮಿತಿ, ದಲಿತ ಸಂಘಟನೆಗಳು ತಾಲೂಕಿನ 40ಕ್ಕೂ ಹೆಚ್ಚು ಸಂಘಟನೆಗಳು ಪಟ್ಟಣವನ್ನು ಬಂದ್ ಮಾಡುವ ಮೂಲಕ ಪ್ರತಿಭಟಿಸಿ ತಹಶೀಲ್ದಾರಗೆ ಮನವಿ ಸಲ್ಲಿಸಿದರು.
ತಾಲೂಕು ಅಂಬೇಡ್ಕರ್ ಸಂಘದ ಅಧ್ಯಕ್ಷ ಗದ್ದಿಕೇರಿ ದೊಡ್ಡಬಸಪ್ಪ ಮಾತನಾಡಿ, ಅಮಿತ್ ಶಾ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವುದರ ಜೊತೆಗೆ, ಮನುಸ್ಮೃತಿ, ಮನುವಾದ ಹೇರುವ ಷಡ್ಯಂತ್ರವನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಸಂವಿಧಾನ ಇಲ್ಲದೇ ಬದುಕುವುದು ಕಷ್ಟಸಾಧ್ಯ. ಅಂಬೇಡ್ಕರ್ ಸಿದ್ಧಾಂತ ಸಂವಿಧಾನದ ಆಶಯಗಳನ್ನು ಉಳಿಸಿಕೊಳ್ಳುವ ಅಗತ್ಯವಿದೆ. ಅಮಿತ್ ಶಾ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇಲ್ಲವೇ ರಾಷ್ಟ್ರಪತಿಗಳು ಮಧ್ಯಪ್ರವೇಶ ಮಾಡಿ ಸಂಪುಟದಿಂದ ವಜಾಗೊಳಿಸಿ, ಅವರನ್ನು ಗಡಿಪಾರು ಮಾಡಬೇಕು. ಅಂಬೇಡ್ಕರ್ ಬಗ್ಗೆ ಬಿಜೆಪಿಗೆ, ಅಮಿತ್‌ಗೆ ಎಷ್ಟು ದ್ವೇಷ ಇದೆ ಎಂಬುದು ಇದರಿಂದ ಸಾಬೀತುಪಡಿಸಿದಂತಿದೆ. ಅಂಬೇಡ್ಕರ್ ಚಿಂತನಗೆಳನ್ನು, ಬರಹಗಳನ್ನು ರಾಜಕಾರಣಿಗಳು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿರುವುದು ನಿಜಕ್ಕೂ ಬೇಸರ ಸಂಗತಿಯಾಗಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿಯೂ ಅಂಬೇಡ್ಕರ್ ಅವರಿಗೆ ಅಪಮಾನ ನಿರಂತರವಾಗಿ ಆಗುತ್ತಿದೆ. ಅಂಬೇಡ್ಕರ್ ಬಗ್ಗೆ ಬಿಜೆಪಿಯವರಿಗೆ ಭಯ ಆವರಿಸಿದೆ. ಅಂಬೇಡ್ಕರ್ ಅವರ ಸ್ಮರಣೆ ಬದಲು ತಾತ್ಸಾರ ಮನೋಭಾವದಿಂದ ನೋಡುತ್ತಿರುವುದು ಬೇಸರ ತರಿಸಿದೆ ಎಂದರು.ರಾಜ್ಯರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಮಾತನಾಡಿದರು. ಸಂಘಟನೆಯ ಮಹೇಶ್ ಮಾದೂರು ಅಂಬೇಡ್ಕರ್ ಎಂಬುವ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ಪ್ರತಿಭಟನೆಗೆ ಜೀವ ತುಂಬಿದರು.
ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ಕೆಎಸ್‌ಆರ್‌ಟಿಸಿ ಸಾರಿಗೆ ಸಂಪೂರ್ಣ ಬಂದ್ ಮಾಡಿದ್ದರಿಂದ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಲಾಗಿತ್ತು.ಈ ಸಂದರ್ಭದಲ್ಲಿ ಸಾಹಿತಿ ಹುರುಕಡ್ಲಿ ಶಿವಕುಮಾರ, ಸಿಪಿಐಎಂನ ಜಗನ್ನಾಥ್, ಮಾಳಮ್ಮ, ಮುಖಂಡರಾದ ಇರ್ಫಾನ್, ಇಮಾಮ್, ಫಕ್ಕೀರಸಾಬ್, ನೆಲ್ಲು ಇಸ್ಮಾಯಿಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿ ಗೋಣಿಬಸಪ್ಪ, ಪತ್ರೇಶ್ ಹಿರೇಮಠ, ಪರುಶುರಾಮ, ಬಾಚಿಗೊಂಡನಹಳ್ಳಿ ಎ.ಮಹೇಶ್, ಕೋಗಳಿ ಮಲ್ಲೇಶ್, ಅಂಬಳಿ ರಮೇಶ, ಆನಂದೇವನಹಳ್ಳಿ ಪ್ರಭಾಕರ, ಮೋರಿಗೇರಿ ರಮೇಶ್, ವಿಷ್ಣು, ದೊಡ್ಡಬಸಪ್ಪ, ಯಮನೂರಪ್ಪ, ಹನುಮಂತ, ಕಾಳಿ ಬಸವರಾಜ, ಲೋಕಪ್ಪ, ಮೇಘರಾಜ, ಅರ್ಜುನ, ಯಡ್ರಾಮನಹಳ್ಳಿ ಮರಿಯಪ್ಪ, ಬಿ.ಸುರೇಂದ್ರಪ್ಪ, ಸರ್ಧಾರ್ ಹುಲಿಗೆಮ್ಮ, ಶಂಶದ್‌ಬೇಗಂ, ರೈತಸಂಘದ ಕೊಟಿಗಿ ಮಲ್ಲಿಕಾರ್ಜುನ, ಸಿದ್ದನಗೌಡ, ಶರಣಪ್ಪ, ರವಿಕುಮಾರ, ಬಸವನಗೌಡ, ಹೆಚ್.ಆರ್.ರಾಜು, ಕಿತ್ನೂರು ದುರುಗಪ್ಪ ಇತರರಿದ್ದರು.