ಹಗರಿಬೊಮ್ಮನಹಳ್ಳಿ: ಅಧಿಕಾರಿಗಳೊಂದಿಗೆ ಶಾಮೀಲಾಗಿರುವ ಅಧ್ಯಕ್ಷರು, ಹೊಸ ಯೋಜನೆಗಳಿಲ್ಲದ, ವಿಶೇಷ ಅಭಿವೃದ್ಧಿಗಳಿಲ್ಲದ ಬಜೆಟ್‌ನ್ನು ಸಾಮಾನ್ಯ ಸಭೆಯಲ್ಲಿ ದಿಢೀರ್ ಪ್ರಸ್ತಾಪಿಸಿದರೆ ಚರ್ಚಿಸುವುದು ಹೇಗೆ ಎಂದು ಜೋಗಿ ಹನಮಂತಪ್ಪ ಆಕ್ಷೇಪ ವ್ಯಕ್ತಪಡಿಸಿದರು.

ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಮರಿರಾಮಣ್ಣ ಬಜೆಟ್ ಮಂಡಿಸುತ್ತಿದ್ದ ಹಾಗೆಯೇ ವ್ಯಕ್ತವಾದ ಆಕ್ಷೇಪಗಳಿಗೆ ಧ್ವನಿಗೂಡಿಸಿದ ಸದಸ್ಯ ದೀಪಕ್ ಕಠಾರೆ, ಸದಸ್ಯರೊಂದಿಗೆ ಚರ್ಚಿಸದೇ ೨೦೨೬-೨೭ರ ಕಾಮಗಾರಿಗಳ ಕ್ರಿಯಾಯೋಜನೆಗಳನ್ನು ರೂಪಿಸುವ ಅಗತ್ಯವೇನಿತ್ತು? ಅನುಮೋದನೆ ಪಡೆಯದೇ ತರಾತುರಿಯಿಂದ ಬಜೆಟ್ ಮಂಡಿಸುವ ಹಿಂದೆ ಸದಸ್ಯರ ಹಕ್ಕುಗಳನ್ನು ಅತಂತ್ರಗೊಳಿಸುವ ದುರುದ್ದೇಶವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯ ಗಣೇಶ್ ಮಾತನಾಡಿ, ಬಹುತೇಕ ಕಲ್ಯಾಣ ಯೋಜನೆಗಳ ಉದ್ದೇಶಕ್ಕೆ ಬರುವ ಅನುದಾನ ಮತ್ತು ರೂಪಿಸುವ ಕ್ರಿಯಾಯೋಜನೆಗಳ ಕುರಿತು ಪುರಸಭೆಯ ಯೋಜನಾಧಿಕಾರಿ ಬಸವರಾಜ್ ಸದಸ್ಯರಿಗೆ ಮಾಹಿತಿ ಒದಗಿಸದೇ ಬೇಕಾಬಿಟ್ಟಿಯಾಗಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.

ಗಣೇಶ್ ಅವರ ಆರೋಪಗಳ ಕುರಿತಂತೆ ಒದಗಿರುವ ಅನುದಾನ ಮತ್ತು ಯೋಜನೆಗಳ ಜಾರಿ ಕುರಿತು ಎಲ್ಲ ಸದಸ್ಯರಿಗೆ ಮಾಹಿತಿ ಪ್ರತಿ ನೀಡುವಂತೆ ಮರಿರಾಮಣ್ಣ ಯೋಜನಾಧಿಕಾರಿಗಳಿಗೆ ಸೂಚಿಸಿದರು. ಯೋಜನಾಧಿಕಾರಿಗಳ ವರ್ತನೆ ಕುರಿತಂತೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರಾದ ಬುಕೆಟ್‌ಗಾರ್ ಗಂಗಣ್ಣ ಮತ್ತು ನಾಗರಾಜ್ ಜನ್ನು ಒಂದು ಹಂತದಲ್ಲಿ ಅಧಿಕಾರಿಗಳನ್ನು ಸಮರ್ಥಿಸಿಕೊಳ್ಳದಂತೆ ಅಧ್ಯಕ್ಷರಿಗೆ ಎಚ್ಚರಿಸಿದರು.

ತಂಗಿಯೊಂದಿಗೆ ತೀವ್ರ ಬಡತನದಿಂದ ಜೀವನ ನಡೆಸುತ್ತಿರುವ ಸೀತಾರಾಮಶೆಟ್ಟಿ ಅವರಿಗೆ ವ್ಯಾಪಾರ ನಡೆಸಲು ₹೪೦ ಸಾವಿರ ಸಹಾಯಧನ ಒದಗಿಸಿ ಒಂದು ಗೂಡಂಗಡಿ ಸ್ಥಾಪಿಸಲು ಮತ್ತು ಸವಿತಾ ಸಮಾಜದ ಸಂಜೀವಕುಮಾರ್ ಅವರಿಗೆ ಕ್ಷೌರಿಕ ವೃತ್ತಿಯ ಪರಿಕರ ಖರೀದಿಗೆ ಸಹಾಯಧನ ಒದಗಿಸಲು ಸದಸ್ಯ ಜೋಗಿ ಹನಮಂತಪ್ಪ ಅಧ್ಯಕ್ಷರಲ್ಲಿ ಮನವಿ ಮಾಡಿಕೊಂಡರು.


ಬಜೆಟ್ ಮಂಡಿಸಿ ಮಾತನಾಡಿದ ಅಧ್ಯಕ್ಷ ಮರಿರಾಮಣ್ಣ, ೨೦೨೬-೨೭ನೇ ಸಾಲಿನಲ್ಲಿ ಒಟ್ಟು ₹೩೯.೧೬ ಲಕ್ಷ ಉಳಿತಾಯದ ಬಜೆಟ್ ಮಂಡಿಸಲಾಗಿದೆ. ₹೪೦.೫೨ ಕೋಟಿ ಆದಾಯ ಸಂಗ್ರಹವಾಗುವ ನಿರೀಕ್ಷೆ ಇದ್ದು, ₹೪೦.೧೩ ಕೋಟಿ ವೆಚ್ಚವನ್ನು ಅಂದಾಜಿಸಲಾಗಿದೆ ಎಂದು ಪ್ರಕಟಿಸಿದರು.

ರಾಜೀನಾಮೆ ಸುಳಿವು: ಕಳೆದ ೧೭ ತಿಂಗಳಿನಿಂದ ಅಧ್ಯಕ್ಷನಾಗಿ ಉತ್ತಮ ಆಡಳಿತ ಒದಗಿಸಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ನಮ್ಮ ಪಕ್ಷದವರು ಸೇರಿದಂತೆ ವಿಪಕ್ಷದ ಸದಸ್ಯರು ಕೂಡ ನನಗೆ ಬೆಂಬಲಿಸಿ ಸಹಕರಿಸಿದ್ದೀರಿ. ಅಧಿಕಾರ ಯಾರಿಗೂ ಶಾಶ್ವತವಲ್ಲ. ನನಗೆ ನೀಡಿದ ಸಹಕಾರವನ್ನೇ ಮುಂದೆ ಆಯ್ಕೆಯಾಗುವ ಅಧ್ಯಕ್ಷರಿಗೂ ನೀಡಿ ಪಟ್ಟಣದ ಅಭಿವೃದ್ಧಿಗೆ ಎಲ್ಲ ಸದಸ್ಯರು ಸ್ಪಂದಿಸಬೇಕು ಎಂದು ಹೇಳುವ ಮೂಲಕ ೧೭ತಿಂಗಳ ತಮ್ಮ ಕಾಲಾವಧಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಸುಳಿವು ನೀಡಿದರು.

ಸಭೆಯ ಮೊದಲು ದೇವರ ದಾಸೀಮಯ್ಯ ಜಯಂತಿ ಆಚರಿಸಲಾಯಿತು. ಪುರಸಭೆಯ ಮುಖ್ಯಾಧಿಕಾರಿ ಕೆ.ಎಂ.ಮುಗಳಿ ಸೇರಿದಂತೆ ಎಲ್ಲ ಸದಸ್ಯರು ಸಾಮಾನ್ಯ ಸಭೆಯಲ್ಲಿ ಉಪಸ್ಥಿತರಿದ್ದರು.