ಆಲಿಕಲ್ಲು ಮಳೆಗೆ ಜಿಲ್ಲೆಯಲ್ಲಿ 12,722.46 ಹೆಕ್ಟರ್‌ ಹಾನಿ

| Published : Apr 14 2025, 01:20 AM IST

ಸಾರಾಂಶ

ಆಲಿಕಲ್ಲು ಮಳೆಯಿಂದ ನಮ್ಮ ಕಾರಟಗಿ ತಾಲೂಕಿನಲ್ಲಿ ಹೆಚ್ಚು ಭತ್ತದ ಬೆಳೆ ನಾಶವಾಗಿದೆ. ಪ್ರಮುಖವಾಗಿ 12 ಗ್ರಾಮಗಳಲ್ಲಿ ಹೆಚ್ಚಿನ ಹಾನಿಯಾಗಿದೆ

ಕೊಪ್ಪಳ: ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯಿಂದ ಕೊಪ್ಪಳ ಜಿಲ್ಲೆಯಲ್ಲಿ 12,722.46 ಹೆಕ್ಟರ್‌ ಭತ್ತದ ಬೆಳೆ ಹಾನಿಯಾಗಿದೆ. ಈ ಪೈಕಿ ಕಾರಟಗಿ ತಾಲೂಕಿನಲ್ಲಿ 4.895.33 ಹೆಕ್ಟರ್‌ ಬೆಳೆ ಹಾನಿಯಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್‌. ತಂಗಡಗಿ ಹೇಳಿದರು.

ಆಲಿಕಲ್ಲು ಮಳೆಯಿಂದಾಗಿ ಬೆಳೆ ಹಾನಿಗೊಳಗಾದ ಕನಕಗಿರಿ ಹಾಗೂ ಕಾರಟಗಿ ತಾಲೂಕಿನ ಪ್ರದೇಶಗಳಿಗೆ ಸಚಿವರು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು.

ಆಲಿಕಲ್ಲು ಮಳೆಯಿಂದ ನಮ್ಮ ಕಾರಟಗಿ ತಾಲೂಕಿನಲ್ಲಿ ಹೆಚ್ಚು ಭತ್ತದ ಬೆಳೆ ನಾಶವಾಗಿದೆ. ಪ್ರಮುಖವಾಗಿ 12 ಗ್ರಾಮಗಳಲ್ಲಿ ಹೆಚ್ಚಿನ ಹಾನಿಯಾಗಿದೆ. ಉಳಿದಂತೆ ಮಳೆ, ಗಾಳಿಯಿಂದ ದೊಡ್ಡ ಪ್ರಮಾಣದ ಬೆಳೆ ನಷ್ಟವಾಗಿದೆ. ಕಾರಟಗಿ, ಕೂಕನೂರು, ಕನಕಗಿರಿ ಗಂಗಾವತಿ ಸೇರಿದಂತೆ ಕೊಪ್ಪಳ ಜಿಲ್ಲೆಯಲ್ಲಿ 12,722.46 ಹೆಕ್ಟರ್‌ ಭತ್ತದ ಬೆಳೆ ಹಾನಿಯಾಗಿದೆ. ಈ ಪೈಕಿ ಕಾರಟಗಿ ತಾಲೂಕಿನಲ್ಲಿ 4.895.33 ಹೆಕ್ಟರ್‌ ಬೆಳೆ ಹಾನಿಯಾಗಿದೆ ಎಂದರು.

ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಪ್ರತಿ ಎಕರೆಗೆ ₹17 ಸಾವಿರ ಪರಿಹಾರ ಬರಲಿದೆ. ಆಲಿಕಲ್ಲು ಮಳೆಯಿಂದ ಆಗಿರುವ ಬೆಳೆ ಹಾನಿ ಸಂಬಂಧ ನಾನು ಸಚಿವರಾದ ಬೋಸರಾಜು, ಡಾ. ಶರಣಪ್ರಕಾಶ್‌ ಪಾಟೀಲ ಸೇರಿ ಮೂವರು ಮಂತ್ರಿಗಳು ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ.ಅಂತೆಯೇ ಕಂದಾಯ ಸಚಿವ ಕೃಷ್ಣ ಬೈರೇಗೌಡರ ಗಮನಕ್ಕೂ ತಂದಿದ್ದೇವೆ. ಅಂದೇ ರಾಯಚೂರು ಮತ್ತು ಕೊಪ್ಪಳ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ಕೆಲವು ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.

ಖದ್ದು ನಾನೇ ತಹಸೀಲ್ದಾರ್‌ಗಳ ಜತೆ ಮಾತನಾಡಿದ್ದೇನೆ. ಮಾರನೇ ದಿನವೇ ತಹಸೀಲ್ದಾರ್‌, ಗ್ರಾಮಲೆಕ್ಕಿಗರು, ಕೃಷಿ ಇಲಾಖೆ ಅಧಿಕಾರಿಗಳು ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪರಿಹಾರದ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ. ಬೆಳೆಹಾನಿ ಸಮೀಕ್ಷೆ ವರದಿ ಬರಲಿ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಏ. 17ರಂದು ವಿಶೇಷ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಅಂದು ಸಭೆ ಮುಗಿದ ಬಳಿಕ ನಾವು ಮೂವರು ಮಂತ್ರಿಗಳು ಹಾಗೂ ಈ ಭಾಗದ ಶಾಸಕರು ಬೆಳೆ ಹಾನಿ ಸಂಬಂಧ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮಾತನಾಡುತ್ತೇವೆ. ಅವಕಾಶ ಸಿಕ್ಕರೆ ಸಚಿವ ಸಂಪುಟ ಸಭೆಗೂ ಮುನ್ನ ದಿನ ಮುಖ್ಯಮಂತ್ರಿ ಅವರನ್ನು ಭೇಟಿಯಾಗುತ್ತೇವೆ ಎಂದು ಹೇಳಿದರು.

ಕಂದಾಯ ಕಾಯ್ದೆಯ ಅನ್ವಯ ಭೂ ಮಾಲೀಕರ ಖಾತೆಗೆ ಬೆಳೆ ಪರಿಹಾರ ಜಮೆಯಾಗಲಿದೆ. ಭೂಮಿ ಗುತ್ತಿಗೆದಾರರ ಖಾತೆಗೆ ಪರಿಹಾರದ ಹಣ ಹಾಕಲು ಕಾನೂನಿನಲ್ಲಿ ಅವಕಾಶವಿಲ್ಲ. ಗುತ್ತಿಗೆದಾರರು ಬೆಳೆ ಬೆಳೆಯಲು ಕಷ್ಟಪಟ್ಟು ಸಾಕಷ್ಟು ಖರ್ಚು ಮಾಡಿರುತ್ತಾರೆ. ಹೀಗಾಗಿ ಭೂ ಮಾಲೀಕರು ಗುತ್ತಿಗೆದಾರರಿಗೆ ಸಹಕರಿಸಬೇಕು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಇಂದು ಅಧಿಕಾರಿಗಳ ಸಭೆ:ಬೆಳೆ ಹಾನಿ ಸಂಬಂಧ ಚರ್ಚಿಸಲು ಸೋಮವಾರ ಮಧ್ಯಾಹ್ನ 12.30ಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ಕರೆಯಲಾಗಿದೆ. ಜಿಲ್ಲಾಧಿಕಾರಿ, ತಹಸೀಲ್ದಾರ್‌ಗಳು, ಕೃಷಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಈ ಸಭೆಯಲ್ಲಿ ಇರುತ್ತಾರೆ. ಮಳೆ ಅವಾಂತರದಿಂದ ಜಿಲ್ಲೆಯಲ್ಲಿ ಭಯಂಕರ ವಾತಾವರಣ ಸೃಷ್ಟಿಯಾಗಿದೆ. ಕೆಲವು ಭಾಗಗಳಲ್ಲಿ ಶೇ.100ರಷ್ಟು ಬೆಳೆ ಹಾನಿಯಾಗಿದೆ. ಅತಿಹೆಚ್ಚು ಹಾನಿಯಾಗಿರುವ 12 ಗ್ರಾಮಗಳಲ್ಲಿ ಸುಮಾರು 3 ಸಾವಿರ ರೈತರು ಬೆಳೆ ವಿಮೆ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಹೀಗಾಗಿ ಲೀಡ್‌ ಬ್ಯಾಂಕ್‌ ಅಧಿಕಾರಿಗಳು ಹಾಗೂ ಸಂಬಂಧಿತ ವಿಮಾ ಕಂಪನಿ ಅಧಿಕಾರಿಗಳನ್ನು ಸಭೆಗೆ ಕರೆಯಲಾಗಿದೆ. ನಾನೂ ಈ ಭಾಗದಲ್ಲಿ ಮೂರು ಬಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ವಾಸ್ತವ ಸತ್ಯದ ಅರಿವು ಇದೆ. ಹೀಗಾಗಿ ಬೆಳೆ ಹಾನಿ ಬಗ್ಗೆ ಚರ್ಚಿಸಿ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ರೈತರಿಗೆ ಪೂರ್ಣ ಪ್ರಮಾಣದ ನಷ್ಟ ಕಟ್ಟಿಕೊಡಲು ಯಾರಿಂದಲೂ ಸಾಧ್ಯವಿಲ್ಲ. ರೈತರು ಕಷ್ಟದಲ್ಲಿರುವುದರಿಂದ ಗರಿಷ್ಠ ಮಟ್ಟದ ಪರಿಹಾರ ಕೊಡಿಸಲು ಸರ್ವ ಪ್ರಯತ್ನ ಮಾಡುವುದಾಗಿ ಸಚಿವರು ಹೇಳಿದರು.

ಮಾಜಿ ಶಾಸಕರು ಕೇಂದ್ರದ ಬಳಿ ಹೋಗಲಿ: ಈಗಾಗಲೇ ಅತಿಹೆಚ್ಚು ಬೆಳೆ ಹಾನಿಯಾಗಿರುವ ಜಾಗ ಗುರುತಿಸಲು ಸೂಚಿಸಿದ್ದೇನೆ. ಇನ್ನು ಮಾಜಿ ಶಾಸಕರ ಅವರ ಅವಧಿಯಲ್ಲಿ ಎಷ್ಟು ಸಮಯದಲ್ಲಿ ಪರಿಹಾರ ಕೊಡಿಸಿದ್ದಾರೆ ಎಂದು ತೆಗೆದು ನೋಡಲಿ. ಈ ಜಿಲ್ಲೆಯಲ್ಲಿ ನಾನು ಯಾರೂ ಮಾಡದ ಕೆಲಸ ಮಾಡಿದ್ದೇನೆ. ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಬೆಳೆಹಾನಿ ಪರಿಹಾರ ನಿಯಮ ಮಾಡಿರುವುದು ಕೇಂದ್ರ ಸರ್ಕಾರ. ಮಾಜಿ ಶಾಸಕರು ಬುಕ್‌ ತೆಗೆದುಕೊಂಡು ಕೇಂದ್ರ ಸರ್ಕಾರದ ಬಳಿ ಹೋಗಲಿ ಮಾಜಿ ಶಾಸಕ ಬಸವರಾಜ್ ದಡೇಸಗೂರು ಹೆಸರು ಹೇಳದೆ ಛೇಡಿಸಿದರು.

ತುಂಗಾಭದ್ರ ಡ್ಯಾಂ ಗೇಟ್‌ ಬಗ್ಗೆ ಹಿಂದೆಯೇ ಹೇಳಿದ್ದೇನೆ. ಡ್ಯಾಂನ ನಿಯಂತ್ರಣ ನಮ್ಮ ಬಳಿ ಇಲ್ಲ.ಅದಕ್ಕೆ ಬೋರ್ಡ್‌ ಇದೆ. ಕರ್ನಾಟಕದ ಪಾಲಿನ ಹಣ ಕೊಡಲು ನಾವು ಈಗಲೂ ಸಿದ್ಧರಿದ್ದೇವೆ ಎಂದು ಸಚಿವ ಶಿವರಾಜ ಎಸ್‌.ತಂಗಡಗಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕೊಪ್ಪಳ ಕೆಆರ್‌ಡಿಎಲ್‌ ಅವ್ಯವಹಾರ ಸಂಬಂಧ ತನಿಖೆ ಆದೇಶಿಸಲಾಗಿದೆ. ವ್ಯವಸ್ಥಾಪಕ ನಿರ್ದೇಶಕರ ಜತೆಗೂ ಮಾತನಾಡಿದ್ದೇನೆ.ಈಗಾಗಲೇ ಪ್ರಕರಣ ದಾಖಲಾಗಿದೆ. ಇದರಲ್ಲಿ ಯಾರೇ ಇದ್ದರೂ ಕ್ರಮ ಆಗಲಿದೆ. ₹17 ಕೋಟಿ ಮತ್ತು ₹25 ಕೋಟಿ ಮೊತ್ತದ ಜಿಎಸ್‌ಟಿ ಸಂಬಂಧ ಮಾಹಿತಿ ಪಡೆದಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.