ಸಾರಾಂಶ
ಬಾಗಲಕೋಟೆ : ಕೊರಿಯರ್‌ನಲ್ಲಿ ಬಂದ ಹೇರ್ ಡ್ರೈಯರ್ ಸ್ಫೋಟಗೊಂಡು ಮೃತ ಯೋಧನ ಪತ್ನಿಯ ಎರಡು ಮುಂಗೈಗಳಿಗೆ ತೀವ್ರ ಗಾಯಗಳಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಬುಧವಾರ ನಡೆದಿದೆ. ಆದರೆ ಈ ಕೊರಿಯರ್ ಅನ್ನು ಯಾರು ಆರ್ಡರ್ ಮಾಡಿದ್ದರು, ಯಾಕೆ ಬ್ಲಾಸ್ಟ್ ಆಯಿತು ಎನ್ನುವ ಕುರಿತು ತನಿಖೆ ನಡೆಯುತ್ತಿದೆ.
ಬಸಮ್ಮ ಯರನಾಳ ಅವರು ಹೇರ್‌ಡ್ರೈಯರ್ ಸ್ಫೋಟಗೊಂಡು ಗಾಯಗೊಂಡ ಮಹಿಳೆ. ಮೃತ ಯೋಧನ ಪತ್ನಿಯಾಗಿದ್ದಾರೆ. ನೆರೆಮನೆಯ ಶಶಿಕಲಾ ಎಂಬುವರ ಹೆಸರು, ನಂಬರ್ ಹೊಂದಿದ್ದ ಡಿಟಿಡಿಸಿ ಪಾರ್ಸಲ್ ಬಂದಿತ್ತು. ಶಶಿಕಲಾ ಬೇರೆ ಊರಲ್ಲಿದ್ದ ಕಾರಣ ಬಸಮ್ಮ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ನಂತರ ಬಸಮ್ಮಗೆ ಶಶಿಕಲಾ ಕೋರಿಯರ್ ಪಡೆದು ಓಪನ್ ಮಾಡಲು ಹೇಳಿದ್ದಾರೆ. ಅದರಂತೆ ಓಪನ್ ಮಾಡಿದಾಗ ಹೇರ್ ಡ್ರೈಯರ್ ಇತ್ತು. ಈ ವೇಳೆ ಪಕ್ಕದ ಮನೆಯವರು ಆನ್ ಮಾಡಿ ತೋರಿಸಿ ಅಂದಿದ್ದಕ್ಕೆ, ಸ್ವಿಚ್ ಹಾಕಿ ಆನ್ ಮಾಡಿದ್ದೇ ತಡ ಹೇರ್‌ಡ್ರೈಯರ್ ಭಾರೀ ಸದ್ದಿನೊಂದಿಗೆ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಅವರ ಮುಂಗೈ ರಕ್ತಸಿಕ್ತವಾಗಿದೆ. ತಕ್ಷಣ ಬಸಮ್ಮಳನ್ನು ಇಳಕಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಇಳಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೇರ್‌ಡ್ರೈಯರ್ ಅನ್ನು ಶಶಿಕಲಾ ಅವರು ತಾವು ಆರ್ಡರ್ ಮಾಡಿಲ್ಲ ಎಂದು ವಿಚಾರಣೆ ವೇಳೆ ತಿಳಿಸಿದ್ದು, ಹಾಗಿದ್ದರೆ ಯಾರು ಮತ್ತು ಯಾಕಾಗಿ ಕೊರಿಯರ್ ಮಾಡಿದ್ದರು ಎನ್ನುವ ಕುರಿತು ಪರಿಶೀಲನೆ ನಡೆಯುತ್ತಿದೆ. ಅಲ್ಲದೆ, ಸ್ಫೋಟಕ್ಕೆ ತಾಂತ್ರಿಕ ಸಮಸ್ಯೆ ಕಾರಣವೇ ಅಥವಾ ಬೇರೇನಾದರೂ ಉದ್ದೇಶವಿದೆಯೇ ಎಂಬ ಕುರಿತೂ ತನಿಖೆ ನಡೆಯುತ್ತಿದೆ.