ಮತ್ತೆ ನಾಗರಿಕ ವಿಮಾನ ಸಂಚಾರಕ್ಕೆ ಎಚ್‌ಎಎಲ್‌: ಕೇಂದ್ರ ಸರ್ಕಾರ ಹಸಿರು ನಿಶಾನೆ

| Published : Nov 27 2024, 01:31 AM IST

ಮತ್ತೆ ನಾಗರಿಕ ವಿಮಾನ ಸಂಚಾರಕ್ಕೆ ಎಚ್‌ಎಎಲ್‌: ಕೇಂದ್ರ ಸರ್ಕಾರ ಹಸಿರು ನಿಶಾನೆ
Share this Article
  • FB
  • TW
  • Linkdin
  • Email

ಸಾರಾಂಶ

ಎಚ್‌ಎಎಲ್‌ ವಿಮಾನ ನಿಲ್ದಾಣವನ್ನು ಮತ್ತೆ ಸಾರ್ವಜನಿಕರ ಸೇವೆಗೆ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ವಿಮಾನ ನಿಲ್ದಾಣವನ್ನು ನವೀಕರಿಸುವ ಕಾರ್ಯ ನಡೆಯಲಿದೆ. 2033ಕ್ಕೆ ಸೇವೆಗೆ ಲಭ್ಯ ಆಗುವ ಸಾಧ್ಯತೆ ಇದೆ.

ನವದೆಹಲಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಜೊತೆಗೆ ಬೆಂಗಳೂರಿನಲ್ಲಿ ಇನ್ನೊಂದು ವಿಮಾನ ನಿಲ್ಧಾಣದ ಆರಂಭಕ್ಕೆ ಕರ್ನಾಟಕ ಸರ್ಕಾರ ಬೆಂಗಳೂರಿನ ಹೊರವಲಯದಲ್ಲಲಿ ಜಾಗ ಹುಡುಕುತ್ತಿರುವ ಹೊತ್ತಿನಲ್ಲೇ, ಎಚ್‌ಎಎಲ್‌ ವಿಮಾನ ನಿಲ್ದಾಣವನ್ನು ಮರಳಿ ನಾಗರಿಕ ವಿಮಾನಯಾನ ಸೇವೆಗೆ ತೆರೆಯಲು ಕೇಂದ್ರ ನಾಗರಿಕ ವಿಮಾನ ನಿಲ್ದಾಣದ ಪ್ರಾಧಿಕಾರ ಹಸಿರು ನಿಶಾನೆ ತೋರಿದೆ.

ಹಾಲಿ ಇರುವ ನಿಯಮಗಳ ಅನ್ವಯ ಒಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 150 ಕಿ.ಮೀ ವ್ಯಾಪ್ತಿಯಲ್ಲಿ ಇನ್ನೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಿಸುವಂತಿಲ್ಲ. ಈ ಕುರಿತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗಿನ ಒಪ್ಪಂದ 2033ಕ್ಕೆ ಮುಗಿಯಲಿದೆ.

ಹೀಗಾಗಿ ಅಷ್ಟರೊಳಗೆ ಬೆಂಗಳೂರಿನ ಹೃದಯ ಭಾಗದಲ್ಲಿರುವ ಎಚ್‌ಎಎಲ್‌ ವಿಮಾನ ನಿಲ್ದಾಣವನ್ನು ಹಾಲಿ ಇರುವ 21,885 ಚದರ ಮೀಟರ್‌ನಿಂದ 32,000 ಚದರ ಮೀಟರ್‌ಗೆ ವಿಸ್ತರಿಸಿ ಬಳಕೆಗೆ ಸಿದ್ಧ ಮಾಡುವ ಪ್ರಸ್ತಾಪಕ್ಕೆ ನಾಗರಿಕ ವಿಮಾನಯಾನ ಪ್ರಾಧಿಕಾರ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಏನೇನು ಬದಲಾವಣೆ?:

ಎಚ್‌ಎಎಲ್‌ ವಿಮಾನ ನಿಲ್ದಾಣದ ನವೀಕರಣದ ಮಾಸ್ಟರ್‌ ಪ್ಲಾನ್‌ ಅನ್ವಯ, ಮೊದಲ ಹಂತದಲ್ಲಿ ವಿಮಾನ ನಿಲ್ದಾಣದ ಪ್ರದೇಶವನ್ನು 21,885 ಚದರ ಮೀಟರ್‌ನಿಂದ 32,000 ಚದರ ಮೀಟರ್‌ಗೆ ವಿಸ್ತರಿಸಲಾಗುವುದು. ಹಳೆಯ ಟರ್ಮಿನಲ್ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಿಸಲಾಗುವುದು. ಇದಲ್ಲದೆ, ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣ ಇರಲಿದ್ದು, 500 ಕಾರುಗಳನ್ನು ನಿಲುಗಡೆ ಮಾಡಬಹುದಾಗಿದೆ. ಟರ್ಮಿನಲ್ ಮುಂಭಾಗದ ದ್ವಿಪಥ ರಸ್ತೆಯನ್ನು ಚತುಷ್ಪಥವಾಗಿ ವಿಸ್ತರಿಸಲಾಗುತ್ತದೆ. ನವೀಕೃತ ನಿಲ್ದಾಣ ವಾರ್ಷಿಕ 40 ಲಕ್ಷ ಜನರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಲಿದೆ.

ಈಗಲೂ ಹೈಕ್ಲಾಸ್‌ ರನ್‌ವೇ:

ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿರುವ ರನ್‌ವೇ ಈಗಾಗಲೇ ಉನ್ನತ ಗುಣಮಟ್ಟದಲ್ಲಿದೆ. 3,306 ಮೀಟರ್ (3.3 ಕಿ.ಮಿ.) ಉದ್ದ ಮತ್ತು 61 ಮೀಟರ್ ಅಗಲವನ್ನು ಹೊಂದಿದ್ದು, ಆಯಾಮದ ಪ್ರಕಾರ ಇದು ದೇಶದ ಅತ್ಯುತ್ತಮ ರನ್‌ವೇಗಳಲ್ಲಿ ಒಂದಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

1941ರಲ್ಲಿ ಆರಂಭವಾದ ಎಚ್‌ಎಎಲ್‌ ವಿಮಾನ ನಿಲ್ದಾನವು 5 ವರ್ಷಗಳ ಬಳಿಕ ನಾಗರಿಕ ಸೇವೆಗೆ ಮುಕ್ತವಾಗಿತ್ತು. ವರ್ಷ ಕಳೆದಂತೆ ಜನದಟ್ಟಣೆ ಹೆಚ್ಚಾದ ಕಾರಣ ದೇವನಹಳ್ಳಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣ ಕಾರ್ಯಾಚರಣೆಗೆ ಸಿದ್ದಗೊಂಡಿತು. ಬಳಿಕ 2008ರ ಮೇ 24ರಂದು ಎಚ್‌ಎಎಲ್‌ನ ಸಂಪೂರ್ಣ ಹಾರಾಟವನ್ನು ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ವರ್ಗಾಯಿಸಲಾಯಿತು.

ಅಂದಿನಿಂದ ಕೇವಲ ರಕ್ಷಣಾ ಪಡೆಗಳು, ವಿಐಪಿಗಳು ಮತ್ತು ವಿವಿಐಪಿಗಳು ಮತ್ತು ಖಾಸಗಿ ಸಂಸ್ಥೆಗಳು ಎಚ್‌ಎಎಲ್‌ ಬಳಸುತ್ತಿವೆ. ಇತ್ತೀಚಿನ ದಿನದಲ್ಲಿ ಸರಾಸರಿ 12 ಸಣ್ಣ ವಿಮಾನಗಳು ಪ್ರತಿದಿನ ಎಚ್‌ಎಎಲ್ ವಿಮಾನ ನಿಲ್ದಾಣವನ್ನು ಬಳಸುತ್ತಿವೆ. ಈ ವಿಮಾನ ನಿಲ್ದಾಣದಲ್ಲಿ 30 ಪಾರ್ಕಿಂಗ್ ಸ್ಥಳಗಳನ್ನು ಹೊಂದಿದ್ದು, ದಿನದ 24 ಗಂಟೆಯೂ ತೆರೆದಿರುತ್ತದೆ. 2008ರ ಮೇ ತಿಂಗಳಿನಲ್ಲಿ ಪ್ರಯಾಣಿಕರ ಸಂಚಾರಕ್ಕೆ ಕೊನೆಯಾಗುವ ಮುನ್ನೂ 10 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಎಚ್‌ಎಎಲ್‌ ವಿಮಾನ ನಿಲ್ದಾಣ ನಿರ್ವಹಿಸಿದೆ.