ಹಲಗೂರು ಲಯನ್ಸ್ ಸಂಸ್ಥೆ 50 ಸದಸ್ಯರನ್ನೊಳಗೊಂಡು 44 ವರ್ಷ ಪೂರೈಸಿ ನಿರಂತರ ಸಾರ್ವಜನಿಕರ ಸೇವೆ ಮೂಲಕ ಸಂಸ್ಥೆ ಅತ್ಯುನ್ನತ ಸ್ಥಾನದಲ್ಲಿದೆ. ನನಗೆ ನೀಡಿದ ಜವಾಬ್ದಾರಿಯನ್ನು ಶಿಸ್ತು ಬದ್ಧವಾಗಿ ನಡೆಸಿಕೊಂಡು ಎಲ್ಲರ ಸಹಕಾರ ಸಲಹೆ ಪಡೆದು ಸಂಸ್ಥೆಯನ್ನು ಉನ್ನತ ಮಟ್ಟದಲ್ಲಿ ಕೊಂಡೊಯ್ಯುತ್ತೇನೆ.
ಹಲಗೂರು:
ಹಲಗೂರು ಲಯನ್ಸ್ ಸಂಸ್ಥೆ 50 ಸದಸ್ಯರನ್ನೊಳಗೊಂಡು 44 ವರ್ಷ ಪೂರೈಸಿ ನಿರಂತರ ಸಾರ್ವಜನಿಕರ ಸೇವೆ ಮೂಲಕ ಸಂಸ್ಥೆ ಅತ್ಯುನ್ನತ ಸ್ಥಾನದಲ್ಲಿದೆ ಎಂದು ಸಂಸ್ಥೆ ಜಿಲ್ಲಾ ರಾಜ್ಯಪಾಲ ಕೆ.ಎಲ್.ರಾಜಶೇಖರ್ ಪ್ರಶಂಸೆ ವ್ಯಕ್ತಪಡಿಸಿದರು.ಹಲಗೂರು ಲಯನ್ ಸಂಸ್ಥೆ ಭವನದ ಆವರಣದಲ್ಲಿ 2026- 27ರ ಸಾಲಿನ ಅಧ್ಯಕ್ಷ ಲಯನ್ ಎನ್.ಎಸ್.ಗುಣೇಶ್, ಕಾರ್ಯದರ್ಶಿ ಡಾ.ಎ.ಎಸ್.ನಾಗೇಶ್ ಮತ್ತು ಖಜಾಂಜಿ ಎನ್.ಯೋಗೇಶ್ ನೇತೃತ್ವದ ನೂತನ ತಂಡದ ಪ್ರತಿಜ್ಞಾವಿಧಿ ಬೋಧನಾ ಸಮಾರಂಭದಲ್ಲಿ ಮಾತನಾಡಿದರು.
ನಿಮ್ಮ ಸಂಸ್ಥೆ ಸೇವೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿ ಇದ್ದೀರಿ. ಸಂಸ್ಥೆ ಇಷ್ಟು ಅಚ್ಚುಕಟ್ಟಾಗಿ ಎಲ್ಲಾ ಸದಸ್ಯರು ಒಗ್ಗೂಡಿ ಸಮಯವನ್ನು ಇದಕ್ಕಾಗಿ ಮೀಸಲಿಟ್ಟು ದಿನನಿತ್ಯ ಕಾರ್ಯಕ್ರಮ ಆಯೋಜಿಸಿ ಹಸಿವು ನಿವಾರಣೆ ಜೊತೆಗೆ ಆರೋಗ್ಯ ತಪಾಸಣೆ, ಪರಿಸರ ಜಾಗೃತಿ, ಹೃದಯಗೆ ಸಂಬಂಧಪಟ್ಟ ತಪಾಸಣೆ, ಕೀಲು ರೋಗ ತಪಾಸಣೆ ಸೇರಿದಂತೆ ಸುಮಾರು 505 ಕಾರ್ಯಕ್ರಮಗಳನ್ನು ಜಿ.ಎಸ್.ಮನೋಹರ ಅಧ್ಯಕ್ಷತೆ ತಂಡದಲ್ಲಿ ಆಯೋಜಿಸಿದ್ದೀರಿ ಎಂದು ಶ್ಲಾಘಿಸಿದರು.ನೂತನ ಅಧ್ಯಕ್ಷ ನ್.ಎಸ್.ಗುಣೇಶ್ ಅವರ ತಂಡಕ್ಕೂ ಸಹ ನೀವು ಪೂರ್ಣ ಸಹಕಾರ ನೀಡಿ ಅವರು ಇನ್ನು ಹೆಚ್ಚಿನ ಸೇವೆ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ನೂತನ ಅಧ್ಯಕ್ಷ ಗುಣೇಶ್ ಮಾತನಾಡಿ, ನನಗೆ ನೀಡಿದ ಜವಾಬ್ದಾರಿಯನ್ನು ಶಿಸ್ತು ಬದ್ಧವಾಗಿ ನಡೆಸಿಕೊಂಡು ಎಲ್ಲರ ಸಹಕಾರ ಸಲಹೆ ಪಡೆದು ಸಂಸ್ಥೆಯನ್ನು ಉನ್ನತ ಮಟ್ಟದಲ್ಲಿ ಕೊಂಡೊಯ್ಯುತ್ತೇನೆ ಎಂದರು.ಕಾರ್ಯಕ್ರಮವನ್ನು ಜಿಲ್ಲಾ ಮಾಜಿ ರಾಜ್ಯಪಾಲ ಡಾ.ಎನ್.ಕೃಷ್ಣೇಗೌಡ ಉದ್ಘಾಟಿಸಿದರು. ಇದೇ ವೇಳೆ ಅನ್ನಪೂರ್ಣ ಹಸಿವು ನಿವಾರಣೆ ಕಾರ್ಯಕ್ರಮದಲ್ಲಿ ಸಹಕರಿಸಿದ್ದ 15 ಜನರಿಗೆ ಸನ್ಮಾನಿಸಿ, ಗಣ್ಯರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ 2ನೇ ಜಿಲ್ಲಾ ಉಪ ರಾಜ್ಯಪಾಲ ಎಂ.ಸಿದ್ದೇಗೌಡ, ಸಂಸ್ಥೆ ಮಾಜಿ ಅಧ್ಯಕ್ಷ ಜಿ.ಎಸ್.ಮನೋಹರ, ಮಾಜಿ ಕಾರ್ಯದರ್ಶಿ ಎ.ಟಿ.ಶ್ರೀನಿವಾಸ್, ಮಾಜಿ ಖಜಾಂಜಿ ಸಿ ಪ್ರವೀಣ, ಎ.ಬಿ.ವಾಣಿಗುಣೇಶ್, ಡಾ. ಶಂಷುದ್ದೀನ್ ಸೇರಿದಂತೆ ಸಂಸ್ಥೆ ಎಲ್ಲಾ ಸದಸ್ಯರು ಹಾಗೂ ಇತರರು ಇದ್ದರು.