* ಪ್ರಾತಃಸ್ಮರಣೀಯರು

- ಶರಣ ಸಂಗಮ ಕಾರ್ಯಕ್ರಮದಲ್ಲಿ ಸಾಹಿತಿ ರಮೇಶ ಮಠಪತಿ ಪ್ರತಿಪಾದನೆ । ಸಾಧಕರಿಗೆ ಸನ್ಮಾನಕನ್ನಡಪ್ರಭ ವಾರ್ತೆ ಬೀದರ್

ಡಾ.ಫ.ಗು.ಹಳಕಟ್ಟಿ, ರೆವರೆಂಡ್ ಉತ್ತಂಗಿ ಚನ್ನಪ್ಪ ಹಾಗೂ ಹರ್ಡೆಕರ್ ಮಂಜಪ್ಪ 19-20ನೇ ಶತಮಾನದ ಲಿಂಗಾಯತ ರತ್ನತ್ರಯರು ಎಂದು ಸಾಹಿತಿ ರಮೇಶ ಮಠಪತಿ ಬಣ್ಣಿಸಿದರು.

ಲಿಂಗಾಯತ ಮಹಾ ಮಠದಿಂದ ನಗರದ ಬಸವಗಿರಿಯಲ್ಲಿ ಇತ್ತಿಚೇಗೆ ಆಯೋಜಿಸಿದ್ದ ಮಾಸಿಕ ಶರಣ ಸಂಗಮದಲ್ಲಿ ಲಿಂಗಾಯತ ರತ್ನತ್ರಯರು ಕುರಿತು ವಿಶೇಷ ಉಪನ್ಯಾಸ ನೀಡಿ, ಕಿತ್ತು ತಿನ್ನುವ ಬಡತನವನ್ನು ಅಪ್ಪಿಕೊಂಡು, ಎಷ್ಟೇ ಕಷ್ಟ-ನಷ್ಟಗಳು ಎದುರಾದರೂ ವಚನ ಧರ್ಮಕ್ಕಾಗಿ ತಮ್ಮನ್ನು ತಾವು ಗಂಧದ ಕೊರಡಿ ನಂತೆ ಸವೆದ ಮಹನೀಯರಿವರು ಎಂದು ಹೇಳಿದರು.

ಕಲ್ಯಾಣ ಕ್ರಾಂತಿಯ ನಂತರ ಎಂಟು ನೂರು ವರ್ಷಗಳವರೆಗೆ ಭೂಗತವಾಗಿದ್ದ ವಚನ ಸಾಹಿತ್ಯವನ್ನು ಹೆಕ್ಕಿ, ಸಂಗ್ರಹಿಸಿ, ಸಂಶೋಧನೆಗೈದು, ಪ್ರಕಟಿಸಿ, ಸಾಹಿತ್ಯ ಲೋಕಕ್ಕೆ ಸಮರ್ಪಿಸಿ ವಚನ ಪಿತಾಮಹ ಎನಿಸಿದವರು ಹಳಕಟ್ಟಿ ಎಂದರು.


ಸರ್ವಜ್ಞ ಕವಿಯ ವಚನಗಳ ಸಂಶೋಧನೆಗೈದು ಕನ್ನಡ ಸಾಹಿತ್ಯ ಲೋಕಕ್ಕೆ ಮಹದುಪಕಾರ ಮಾಡಿದ ಶ್ರೇಯಸ್ಸು ರೆವರೆಂಡ್ ಉತ್ತಂಗಿ ಚನ್ನಪ್ಪನವರಿಗೆ ಸಲ್ಲುತ್ತದೆ ಎಂದ ಅವರು ತ್ರಿಪದಿ ವಚನಗಳನ್ನು ಉಳಿಸಿ, ಸರ್ವಜ್ಞನಂತೆ ಜನಪ್ರಿಯರಾದರು. ತಿರುಳಗನ್ನಡ ತಿರುಕರೆನಿಸಿದರು. ಬಸವಾದಿ ಶರಣರ ವಿರೋಧಿಗಳು ಬಸವ ಧರ್ಮದ ಬಗ್ಗೆ ಇಲ್ಲ ಸಲ್ಲದ ಸಂಶಯಗಳನ್ನು ಎತ್ತಿದಾಗ, ಅವುಗಳಿಗೆ ಸಮರ್ಪಕ ಉತ್ತರ ನೀಡಿದರು ಎಂದರು.

ಹಳಕಟ್ಟಿ, ಉತ್ತಂಗಿ ಚನ್ನಪ್ಪ ಹಾಗೂ ಹರ್ಡೆಕರ್ ಮಂಜಪ್ಪ ಸದಾ ಸ್ಮರಣೀಯರು. ಅವರ ಆದರ್ಶ ಮಾನವ ಕುಲಕೋಟಿಗೆ ಮಾರ್ಗದರ್ಶಿಯಾಗಿದೆ ಎಂದು ತಿಳಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಶಂಭುಲಿಂಗ ಕಾಮಣ್ಣ ಮಾತನಾಡಿ, ಹರ್ಡೇಕರ್ ಮಂಜಪ್ಪನವರು ಶರಣ ತತ್ವಕ್ಕೆ ಸಂಬಂಧಿಸಿದ 82 ಕೃತಿಗಳನ್ನು ಕೊಟ್ಟಿದ್ದಾರೆ. ಬಸವೇಶ್ವರ ಸೇವಾ ದಳ ಹುಟ್ಟು ಹಾಕಿ, ಆ ಮೂಲಕ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧಿಜಿ ಅವರಿಗೆ ಬಸವಣ್ಣನವರನ್ನು ಪರಿಚಯಿಸಿದರು ಎಂದು ಹೇಳಿದರು.

ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀ ಸಾನ್ನಿಧ್ಯ ವಹಿಸಿ ಮಾತನಾಡಿ, ಸುಂದರ ಬದುಕಿನ ಸೂತ್ರಗಳಾದ ವಚನಗಳನ್ನು ಉಳಿಸಲು ಅಂದು ಶರಣರು ಪ್ರಾಣ ಕೊಟ್ಟರು. ವಚನಗಳಿಗಾಗಿ ದುಡಿದ ಅಂಥ ಮೂರು ಅಮೂಲ್ಯ ರತ್ನಗಳ ಚಿಂತನೆ ನಡೆದದ್ದು ಅರ್ಥಪೂರ್ಣ ಎಂದು ತಿಳಿಸಿದರು.

ಕಲಬುರಗಿ ಜಿ.ಪಂ ನಿವೃತ್ತ ಮುಖ್ಯ ಯೋಜನಾಧಿಕಾರಿ ಶರಣಬಸವ ಮಠಪತಿ, ಗುರುಮಠಕಲ್ ಸರ್ಕಾರಿ ಐಟಿಐ ನಿವೃತ್ತ ಪ್ರಾಚಾರ್ಯ ಕಲ್ಲಪ್ಪ ಡಿಗ್ಗಿ ಹಾಗೂ ನಿಡೋದಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯಶಿಕ್ಷಕಿ ರಾಜಮ್ಮ ಚಿಕ್ಕಪೇಟೆ ಅವರನ್ನು ಅಭಿನಂದಿಸಲಾಯಿತು.

ಶರಣಬಸವ ಮಠಪತಿ ಉದ್ಘಾಟಿಸಿದರು. ಮಹಾನಂದ ಶ್ರೀಕಾಂತ ಬೀಕ್ಲೆ ಅಧ್ಯಕ್ಷತೆ ವಹಿಸಿದ್ದರು. ನೀಲಮ್ಮನ ಬಳಗದ ಸದಸ್ಯೆಯರು ಪ್ರಾರ್ಥನೆಗೈದರು. ಶ್ರೇಯಸ್ ಪಾಟೀಲ ಗುರು ಪೂಜೆ ನೆರವೇರಿಸಿದರು. ಸಂಧ್ಯಾರಾಣಿ ಮುತ್ತಂಗೆ ಸ್ವಾಗತಿಸಿದರು. ವರ್ಷಾ ಸಂತೋಷ್ ಪಾಟೀಲ ಭಕ್ತಿ ದಾಸೋಹಗೈದರು.--ಚಿತ್ರ 25ಬಿಡಿಆರ್50ಬೀದರ್‌ನ ಬಸವಗಿರಿಯಲ್ಲಿ ನಡೆದ ಶರಣ ಸಂಗಮ ಕಾರ್ಯಕ್ರಮದಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತರಾದ ಶರಣಬಸವ ಮಠಪತಿ, ಕಲ್ಲಪ್ಪ ಡಿಗ್ಗಿ ಹಾಗೂ ರಾಜಮ್ಮ ಚಿಕ್ಕಪೇಟೆ ಅವರನ್ನು ಅಭಿನಂದಿಸಲಾಯಿತು.--