ಅಂಕೋಲಾದಲ್ಲಿ ಹಾಲಕ್ಕಿಗಳ ಸುಗ್ಗಿ ಸಂಭ್ರಮ

| Published : Mar 25 2024, 12:50 AM IST

ಸಾರಾಂಶ

ವಿಲಕ್ಷಣ ವೇಷಭೂಷಣಗಳೊಂದಿಗೆ, ಮುಖವಾಡ ಧರಿಸಿದ ಕರಡಿಗಳು ರೂಪಕಗಳು ಪರಿಚಿತರಿಂದ ಕಾಣಿಕೆಗಳನ್ನು ಸ್ವೀಕರಿಸಿ ಸಂದ್ರದಾಯಕ್ಕೆ ಸಾಕ್ಷಿಯಾದರು.

ಅಂಕೋಲಾ: ಹಾಲಕ್ಕಿಗಳ ಜಾನಪದ, ಸಾಂಸ್ಕೃತಿಕ ವೈಭವ ಪರಿಚಯಿಸುವ ಐತಿಹಾಸಿಕ ಸಾಂಪ್ರದಾಯಿಕ ಸುಗ್ಗಿ ಕುಣಿತವು ಸಂಭ್ರಮ, ಸಡಗರದಿಂದ ಇಲ್ಲಿನ ಪ್ರಮುಖ ಬೀದಿಗಳಲ್ಲಿ ಭಾನುವಾರ ಸಂಜೆ ಅನಾವರಣಗೊಂಡಿತು.

ಇಲ್ಲಿಯ ಕಡಲ ಕಿನಾರೆಯಲಿ ಭಾಸ್ಕರ ಅಸ್ತಂಗತನಾಗುತ್ತಿದ್ದಂತೆ, ಹಾಲಕ್ಕಿಗಳ ಸುಗ್ಗಿಯ ಕಲರವದೊಂದಿಗೆ, ಹೋ ಹೋ ಚೋ... ಎಂಬ ಕುಣಿತದ ದಾಟಿಯೊಂದಿಗೆ ಬಣ್ಣ ಬಣ್ಣದ ತುರಾಯಿ ಕಟ್ಟಿಕೊಂಡು, ಆಕರ್ಷಣಿಯವಾಗಿ ಕುಣಿದು ಗಮನ ಸೆಳೆದರು.

ವಿಲಕ್ಷಣ ವೇಷಭೂಷಣಗಳೊಂದಿಗೆ, ಮುಖವಾಡ ಧರಿಸಿದ ಕರಡಿಗಳು ರೂಪಕಗಳು ಪರಿಚಿತರಿಂದ ಕಾಣಿಕೆಗಳನ್ನು ಸ್ವೀಕರಿಸಿ ಸಂದ್ರದಾಯಕ್ಕೆ ಸಾಕ್ಷಿಯಾದರು.

ತಾಲೂಕು ಆಡಳಿತ ಮತ್ತು ಪೊಲೀಸ್‌ ಇಲಾಖೆಯವರು ಊರ ಗೌಡರಾದ ಷಣ್ಮುಖ ಗೌಡ ಅವರಿಂದ ತಾಮ್ರ ಫಲಕದ ಗೌರವ ಪಡೆದು ಗೌರವಿಸಿದರು. ಗಮನ ಸೆಳೆದ ರೂಪಕ

ಅಂಕೋಲಾದಲ್ಲಿ ನಡೆದ ಹೋಳಿ ಸಂಭ್ರಮದ ಮೆರವಣಿಗೆಯಲ್ಲಿ ಶಕ್ತಿ ಯೋಜನೆಯಿಂದ ಬಸ್‌ನಲ್ಲಿ ಜನದಟ್ಟಣೆ, ನಾಗಾ ಸಾಧುಗಳು, ಗೃಹಲಕ್ಷ್ಮಿಯರ ದರ್ಬಾರ, ಡೆಡ್ಲಿ ಗೋಬಿ, ಬೃಹತ್‌ ಬಾವಲಿ, ಕಾಳಿಂಗ ಮರ್ದನ, ಮರಕಾಲು ಕುಣಿತ ಹೀಗೆ ಅನೇಕ ರೂಪಕಗಳು ಗಮನ ಸೆಳೆದವು.ಒಂದೇ ದಿನ ಮೂರು ಸುಗ್ಗಿ ಮೇಳದ ಸಂಭ್ರಮ

ಕಾರವಾರ: ಜಾನಪದ ತವರೂರು ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲಕ್ಕಿ ಒಕ್ಕಲಿಗರ ಮೂರು ಸುಗ್ಗಿ ಮೇಳಗಳು ಬೇಳೂರು, ಶಿರ್ವೆ, ನಿವಳಿ ಸೇರಿ ದೇವಳಮಕ್ಕಿ ಗ್ರಾಮದ್ಯಾದಂತ ಸಾಂಪ್ರದಾಯಿಕ ಕುಣಿತ ಪ್ರದರ್ಶಿಸಿದರು.

ಸುಗ್ಗಿಯ ವೇಷಭೂಷಣಗಳನ್ನು ಧರಿಸಿದ ಕೋಲು ಮೇಳದ ಕಲಾವಿದರ ಕೈಯಲ್ಲಿ ಕೋಲುಗಳನ್ನು ಹಿಡಿದು ಹಿಮ್ಮೇಳದ ವಾದ್ಯದ ಗತ್ತಿಗನುಗುಣವಾಗಿ ಪದಗಳನ್ನು ಹಾಡುಗಾರರು ಹಾಡಿದರು. ಹಾಡಿದ ಪದಗಳನ್ನು ಪುನಾರಾವರ್ತನೆಗೊಳಿಸುತ್ತಾ ಕಲಾವಿದರು ಕುಣಿದರು. ಹಿಮ್ಮೇಳದ ತಾಳ, ಲಯಕ್ಕನುಗುಣವಾಗಿ ಕುಣಿಯುವವರ ಕುಣಿತ ಹಾಗೂ ಅಂಗಾಗ ವಿನ್ಯಾಸ ಭಂಗಿಯೂ ಬದಲಾಯಿತು. ಕುಂಚದ ಮೇಳದವರು ನವಿಲುಗರಿಯಿಂದ ತಯಾರಿಸಿದ್ದ ಕುಂಚವನ್ನು ಎಡಗೈಯಲ್ಲಿ ಹಿಡಿದು ಬಲಗೈಲಿ ಹಿಡಿದಿರುವ ಕೋಲಿನಿಂದ ಕುಂಚದ ಬುಡಕ್ಕೆ ಮೆಲ್ಲನೆ ಲಯಬದ್ದವಾಗಿ ಕುಟ್ಟಿದರು. ವಾದ್ಯಮೇಳದ ಲಯ ಗತಿಗಳಿಗನುಗುಣವಾಗಿ ಚೋಹೋಚೋ, ಸೋಹೋಚೋ, ಓಹೋಸಾ, ದಯ್ಯೋ ದಯ್ಯೋ ಎಂದು ಮುಂತಾಗಿ ಹಲ್ಲೂ ಹಾಕುತ್ತಾ ವಿವಿಧ ಭಂಗಿಯಲ್ಲಿ ಕುಣಿದು ಸಂಭ್ರಮಿಸಿದರು.

ಸುಗ್ಗಿಹಬ್ಬ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಆಚರಣೆಯಲ್ಲಿರುವ ಪ್ರಕ್ರಿಯೆ. ಹಾಗೇ ನೋಡಿದರೆ ತಾಲೂಕಿನ ಅನೇಕ ಗ್ರಾಮಗಳ ದೇವತೆಗಳ ಜಾತ್ರೆಗಳು ಸುಗ್ಗಿ ಸಂಭ್ರಮದ ಜತೆಗೆ ತಳುಕು ಹಾಕಿಕೊಂಡಿದೆ. ಹೋಳಿ ಹಬ್ಬಕ್ಕೂ ಸುಗ್ಗಿಹಬ್ಬಕ್ಕೂ ಸುಗ್ಗಿಯ ಆಚರಣೆಗೂ ಅಂತಹ ವ್ಯತ್ಯಾಸಗಳೇನೂ ಇಲ್ಲ. ಈ ಎಲ್ಲ ಹಬ್ಬ ಜಾತ್ರೆಗಳ ಹಿನ್ನೆಲೆಯಲ್ಲಿಯೇ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲಕ್ಕಿ ಒಕ್ಕಲಿಗರ ಸುಗ್ಗಿ ಕುಣಿತ ರಸದೌತಣ ನೀಡುತ್ತಿದೆ.