ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಎಂಜಿನಿಯರ್ ಆಸೀಫ್ ಇಕ್ಬಾಲ್ ಖಲೀಲ್ ಮಾತನಾಡಿ, ಹಳೇ ಉಂಡುವಾಡಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, 31 ಓವರ್‌ ಹೆಡ್ ಟ್ಯಾಂಕ್‌ ಗಳಲ್ಲಿ 22 ಪೂರ್ಣವಾಗಿ, 7 ಟ್ಯಾಂಕ್ ಏಪ್ರಿಲ್ ತಿಂಗಳಲ್ಲಿ ಮುಗಿಯಲಿದೆ. ಉಳಿದ 2 ಜೂನ್ ತಿಂಗಳಲ್ಲಿ ಮುಗಿಯಲಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ನಗರ ಮತ್ತು ಹೊರ ವಲಯದ ಬಡಾವಣೆಗಳು, ಗ್ರಾಮಾಂತರ ಪ್ರದೇಶದ ಹಳ್ಳಿಗಳಿಗೆ ದಿನದ 24 ಗಂಟೆಗಳ ಕಾಲ ಕುಡಿಯುವ ನೀರು ಒದಗಿಸುವ ಹಳೇ ಉಂಡುವಾಡಿ ಯೋಜನೆ ಕಾಮಗಾರಿ ಆರು ತಿಂಗಳಲ್ಲಿ ಮುಗಿಯಲಿದ್ದು, ಅಲ್ಲಿಯವರೆಗೆ ಕಾವೇರಿ, ಕಬಿನಿ ಜಲ ಮೂಲದಿಂದ ಒದಗಿಸುತ್ತಿರುವ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು.

ನಗರ ಪಾಲಿಕೆ ವಲಯ ಕಚೇರಿ 3ರ ಸಭಾಂಗಣದಲ್ಲಿ ಶನಿವಾರ ನಡೆದ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯ ಪಾಲಿಕೆ ವಲಯ ಕಚೇರಿ, ಪಟ್ಟಣ ಪಂಚಾಯ್ತಿ, ನಗರಸಭೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ 6 ತಿಂಗಳ ಕಾಲ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾಗಿರುವ ಕಾರಣ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಎಂಜಿನಿಯರ್ ಆಸೀಫ್ ಇಕ್ಬಾಲ್ ಖಲೀಲ್ ಮಾತನಾಡಿ, ಹಳೇ ಉಂಡುವಾಡಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, 31 ಓವರ್‌ ಹೆಡ್ ಟ್ಯಾಂಕ್‌ ಗಳಲ್ಲಿ 22 ಪೂರ್ಣವಾಗಿ, 7 ಟ್ಯಾಂಕ್ ಏಪ್ರಿಲ್ ತಿಂಗಳಲ್ಲಿ ಮುಗಿಯಲಿದೆ. ಉಳಿದ 2 ಜೂನ್ ತಿಂಗಳಲ್ಲಿ ಮುಗಿಯಲಿದೆ. ಪೈಪ್‌ ಲೈನ್ ಕಾಮಗಾರಿ ನಡೆಯುತ್ತಿದೆ ಎಂದು ವಿವರಿಸಿದರು.

ಹಳೇ ಉಂಡುವಾಡಿ ಯೋಜನೆ ಪೂರ್ಣವಾಗುವ ತನಕ ಮೇಳಾಪುರ, ಹೊಂಗಳ್ಳಿ ಮೂಲದಿಂದ ರಮ್ಮನಹಳ್ಳಿ ಭಾಗಕ್ಕೆ, ಕಬಿನಿ ಮೂಲದಿಂದ ಶ್ರೀರಾಂಪುರ, ಬೋಗಾದಿ ಭಾಗಕ್ಕೆ ಹರಿಸಲಾಗುತ್ತಿದೆ. ಕಬಿನಿ ಎರಡನೇ ಹಂತದ 60 ಎಂಎಲ್‌ ಡಿ ನೀರಿನಲ್ಲಿ ವಿಜಯನಗರ 3ನೇ ಹಂತ, ಎಸ್‌ ಬಿಎಂ ಲೇಔಟ್, ರೂಪಾನಗರ ಇನ್ನಿತರ ಪ್ರದೇಶಗಳಿಗೆ ಹರಿಸಲಾಗುತ್ತದೆ ಎಂದರು.

ಈ ವೇಳೆ ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಹಾಲಿ ಬಡಾವಣೆಗಳು, ಗ್ರಾಮಗಳಿಗೆ ನೀರು ಕೊಡುವ ಜತೆಗೆ ಖಾಸಗಿ ಬಡಾವಣೆಗಳಿಗೆ ನೀರು ಕೊಡಬೇಕು. ಬಡಾವಣೆಗಳಲ್ಲಿ ನಿರ್ಮಿಸಿರುವ ಓವರ್‌ ಹೆಡ್ ಟ್ಯಾಂಕ್‌ ಗೆ ಸಂಪರ್ಕ ಕೊಡಬೇಕು. ಎಲ್ಲೆಲ್ಲಿ ಪೈಪ್‌ ಲೈನ್ ಅಗತ್ಯವಿದೆ, ಯಾವ್ಯಾವ ಕಡೆಗಳಲ್ಲಿ ಸಂಪರ್ಕ ಕೊಡಬೇಕು, ಎಲ್ಲಿ ಮಿಸ್ಸಿಂಗ್ ಲಿಂಕ್ ಇದೆ ಎನ್ನುವುದನ್ನು ಪರಿಶೀಲಿಸಬೇಕು. ಪಾಲಿಕೆ, ಸ್ಥಳೀಯ ಸಂಸ್ಥೆಗಳು, ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳು ಜಂಟಿ ಸರ್ವೇ ಮಾಡಿ ವರದಿ ತಯಾರಿಸಬೇಕು ಎಂದರು.

ಖಾಸಗಿ ಬಡಾವಣೆಗಳಿಗೆ ನೀರು ಕೊಡಲು ಪೈಪ್‌ ಲೈನ್ ಅಗತ್ಯವಿದ್ದರೆ ತಕ್ಷಣವೇ ಕ್ರಿಯಾ ಯೋಜನೆ ರೂಪಿಸಿ ಅನುಮೋದನೆ ಪಡೆದು ಟೆಂಡರ್ ಪ್ರಕ್ರಿಯೆ ಆರಂಭಿಸಬೇಕು. ರಮ್ಮನಹಳ್ಳಿ ಪಪಂ ವ್ಯಾಪ್ತಿಯಲ್ಲಿ ಜಂಟಿ ಸರ್ವೆ ನಡೆಸಿ ಮ್ಯಾಪ್ ಮಾಡಿ ಎಲ್ಲೆಲ್ಲಿ ಏನಾಗಬೇಕೆಂದು ಗುರುತಿಸಲಾಗಿದೆ. ವಸಂತನಗರ, ಪೊಲೀಸ್ ಬಡಾವಣೆ, ಸಾತಗಳ್ಳಿ ಬಡಾವಣೆಗಳಿಗೆ ನೀರು ಹೋಗಲು ಇರುವ ಸಮಸ್ಯೆ ನಿವಾರಿಸುವ ಕೆಲಸ ನಡೆದಿದೆ. ಅದೇ ರೀತಿ ಬೇರೆ ಪಂಚಾಯಿತಿಗಳಲ್ಲೂ ಸರ್ವೆ ಮಾಡಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.ಜೂನ್ ತಿಂಗಳವರೆಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದಾಗಿರುವುದರಿಂದ ಸಮಸ್ಯೆಗಳ ಪಟ್ಟಿ ಮಾಡಬೇಕು. ಪರಸ್ಪರ ಸಮನ್ವಯತೆಯಿಂದ ನೀರು ಕೊಡಬೇಕು. ಪ್ರತಿನಿತ್ಯ ಜನರು ಬಂದು ಸಮಸ್ಯೆ ಹೇಳುತ್ತಾರೆ. ಅಧಿಕಾರಿಗಳು ಒಬ್ಬರಿಗೊಬ್ಬರು ಮಾತನಾಡಿಕೊಂಡು ದಿನನಿತ್ಯ ನಿವಾಸಿಗಳಿಗೆ ನೀರು ಹರಿಸುವ ಕೆಲಸ ಮಾಡಬೇಕು. ಯುಜಿಡಿ ಸಮಸ್ಯೆ ಬರದಂತೆ ನಿತ್ಯ ಅಧಿಕಾರಿಗಳು ಬಡಾವಣೆಗಳಿಗೆ ಭೇಟಿ ನೀಡಿ ವೀಕ್ಷಿಸಿದರೆ ಗೊತ್ತಾಗುತ್ತದೆ.

- ಜಿ.ಟಿ. ದೇವೇಗೌಡ, ಶಾಸಕ