ಮತ್ತೆ ಹಾಫ್ ಹೆಲ್ಮೆಟ್ ತಲೆಬಿಸಿ: ಎಸ್‌ಪಿ ಕ್ಲಾಸ್‌

| Published : Oct 17 2025, 01:00 AM IST

ಮತ್ತೆ ಹಾಫ್ ಹೆಲ್ಮೆಟ್ ತಲೆಬಿಸಿ: ಎಸ್‌ಪಿ ಕ್ಲಾಸ್‌
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಇದೀಗ ಮತ್ತೆ ಹಾಫ್ ಹೆಲ್ಮೆಟ್ ವಿರುದ್ಧ ಕಾರ್ಯಾಚರಣೆ ಆರಂಭವಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸ್ವತಃ ಫೀಲ್ಡ್‌ಗೆ ಇಳಿದು ಹಾಫ್‌ ಹೆಲ್ಮೆಟ್‌ಧಾರಿಗಳಿಗೆ ಕಾನೂನು ಪಾಠ ಹೇಳಿದ್ದು ವಿಶೇಷವಾಗಿತ್ತು.

- ನಿಯಮ ಉಲ್ಲಂಘಿಸಿದವರಿಗೆ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಕಾನೂನು ಪಾಠ - - -

ದಾವಣಗೆರೆ: ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಇದೀಗ ಮತ್ತೆ ಹಾಫ್ ಹೆಲ್ಮೆಟ್ ವಿರುದ್ಧ ಕಾರ್ಯಾಚರಣೆ ಆರಂಭವಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸ್ವತಃ ಫೀಲ್ಡ್‌ಗೆ ಇಳಿದು ಹಾಫ್‌ ಹೆಲ್ಮೆಟ್‌ಧಾರಿಗಳಿಗೆ ಕಾನೂನು ಪಾಠ ಹೇಳಿದ್ದು ವಿಶೇಷವಾಗಿತ್ತು.

ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ನಾಲ್ಕೂ ದಿಕ್ಕಿನಿಂದ ಯಾವುದೇ ಹೆಲ್ಮೆಟ್ ಧರಿಸದೇ ಹಾಗೂ ಹಾಫ್‌ ಹೆಲ್ಮೆಟ್‌ ಧರಿಸಿ ದ್ವಿಚಕ್ರ ವಾಹನಗಳಲ್ಲಿ ಬರುತ್ತಿದ್ದ ಸವಾರರನ್ನು ತಡೆದು, ಬೈಕ್‌-ಸ್ಕೂಟಿ ಚಾಲನೆ ಮಾಡುವಾಗ ಕಡ್ಡಾಯವಾಗಿ ಫುಲ್ ಹೆಲ್ಮೆಟ್ ಧರಿಸುವಂತೆ, ಸಂಚಾರ ನಿಯಮ ಪಾಲನೆ ಮಾಡುವಂತೆ, ನಿಗದಿತ ವೇಗದಲ್ಲಿ ಜವಾಬ್ದಾರಿಯಿಂದ ವಾಹನ ಚಾಲನೆ ಮಾಡುವಂತೆ ತಾಕೀತು ಮಾಡಿದರು.

ಹಾಫ್ ಹೆಲ್ಮೆಟ್ ಧರಿಸುವುದು ಕಾನೂನು ಪ್ರಕಾರ ತಪ್ಪು. ಹಾಫ್ ಹೆಲ್ಮೆಟ್ ಧರಿಸುವುದು ಪುನಃ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ದಂಡ ವಿಧಿಸುವ ಕಾರ್ಯಾಚರಣೆ ಮುಂದುವರಿಸಲಾಗಿದೆ. ಹಾಫ್ ಹೆಲ್ಮೆಟ್ ಧರಿಸಿದ್ದಾಗ ಆಕಸ್ಮಾತ್ ಯಾವುದೇ ಅವಘಡ ಸಂಭವಿಸಿದರೆ ತೊಂದರೆ ಅನುಭವಿಸಬೇಕಾಗುತ್ತದೆ. ಇದು ದಂಡ ಕಟ್ಟುವುದಕ್ಕಿಂತ ಮುಖ್ಯವಾಗಿ ಜನರ ಜೀವದ ಪ್ರಶ್ನೆ ಎಂದು ಹೆಲ್ಮೆಟ್ ಧರಿಸದವರಿಗೆ, ಹಾಫ್ ಹೆಲ್ಮೆಟ್ ಧರಿಸಿದವರಿಗೆ ಸೂಚ್ಯವಾಗಿ ಎಚ್ಚರಿಸಿದರು.

ಅದೇ ವೇಳೆ ಪತ್ನಿ ಜೊತೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನ ಸವಾರನ ಹೆಲ್ಮೆಟ್ ತೆಗೆದು, ಪತ್ನಿಯಾದ ನೀವಾದರೂ ಫುಲ್ ಹೆಲ್ಮೆಟ್ ಹಾಕಲು ನಿಮ್ಮ ಮನೆಯವರಿಗೆ ಹೇಳಬೇಕಲ್ಲವೇ ಮೇಡಂ ಎಂದು ಎಸ್‌ಪಿ ಮೇಡಂ ಸಲಹೆ ನೀಡಿದ್ದು ಗಮನ ಸೆಳೆಯಿತು.

ಈಗಾಗಲೇ ಇಲಾಖೆಯಿಂದ ಹಾಫ್ ಹೆಲ್ಮೆಟ್ ಧಾರಣೆ ವಿರುದ್ಧ ಅನೇಕ ಸಲ ಎಚ್ಚರಿಕೆ ನೀಡಿ, ದಂಡ ಸಹ ವಿಧಿಸಲಾಗಿದೆ. ಶೇ.60-70ರಷ್ಟು ಸವಾರರು ಫುಲ್ ಹೆಲ್ಮೆಟ್ ಹಾಕುತ್ತಿದ್ದಾರೆ. ಆದರೂ, ಕೆಲವರು ಕಾಟಾಚಾರಕ್ಕೆ ಹಾಫ್‌/ಹೆಲ್ಮೆಟ್ ಧರಿಸುತ್ತಿರುವುದು ಕಂಡುಬರುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಮತ್ತೆ ಹಾಫ್ ಹೆಲ್ಮೆಟ್ ವಿರುದ್ಧ ಕಾರ್ಯಾಚರಣೆ ಶುರು ಮಾಡಿದ್ದೇವೆ ಎಂದು ಎಸ್‌ಪಿ ಸ್ಪಷ್ಟಪಡಿಸಿದರು.

ಈ ಸಂದರ್ಭ ನಗರ ಡಿವೈಎಸ್ಪಿ ಬಿ.ಶರಣ ಬಸವೇಶ್ವರ ಭೀಮರಾವ್‌, ಬಡಾವಣೆ ಠಾಣೆ ಇನ್‌ಸ್ಪೆಕ್ಟರ್ ಗಾಯತ್ರಿ ರೊಡ್ಡ, ಸಂಚಾರ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಶೈಲಜಾ ಸೇರಿದಂತೆ ಅಧಿಕಾರಿ-ಸಿಬ್ಬಂದಿ ಇದ್ದರು.

- - -

(ಟಾಪ್‌ ಕೋಟ್‌) ಹಬ್ಬಗಳ ಹಿನ್ನೆಲೆ ಬಂದೋಬಸ್ತ್ ವ್ಯವಸ್ಥೆ ಇನ್ನಿತರೆ ಕಾರಣಕ್ಕೆ ಹಾಫ್‌ ಹೆಲ್ಮೆಟ್ ವಿರುದ್ಧ ಕಾರ್ಯಾಚರಣೆ ನಡೆಸಿರಲಿಲ್ಲ. ಇನ್ನು ಮುಂದೆ ನಗರ, ಜಿಲ್ಲಾದ್ಯಂತ ಹಾಫ್‌ ಹೆಲ್ಮೆಟ್‌ ಕಾರ್ಯಾಚರಣೆ ಮುಂದುವರಿಯಲಿದೆ. ದಂಡ ವಿಧಿಸುವ ಜೊತೆಗೆ ಹಾಫ್ ಹೆಲ್ಮೆಟ್ ಧರಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಸಹ ಕೈಗೊಳ್ಳಲಾಗುವುದು.

- ಉಮಾ ಪ್ರಶಾಂತ, ಜಿಲ್ಲಾ ಎಸ್‌ಪಿ.

- - -

-16ಕೆಡಿವಿಜಿ6, 7, 8:

ಪಿ.ಜೆ. ಬಡಾವಣೆಯ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಹಾಫ್ ಹೆಲ್ಮೆಟ್ ವಿರುದ್ಧ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಕಾರ್ಯಾಚರಣೆಗಿಳಿದು ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ದಂಡ ವಿಧಿಸಿ, ಸಂಚಾರ ನಿಯಮಗಳ ಜಾಗೃತಿ ಮೂಡಿಸಿದರು.