ಸಾರಾಂಶ
ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಕುರಿತು ಕೊಲ್ಲಾಪುರ ಜಿಲ್ಲಾಧಿಕಾರಿಯ ಜೊತೆಗೆ ಒಂದು ಗಂಟೆ ಚರ್ಚೆ ನಡೆಸಿ ಮಾಹಿತಿ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಕುರಿತು ಕೊಲ್ಲಾಪುರ ಜಿಲ್ಲಾಧಿಕಾರಿಯ ಜೊತೆಗೆ ಒಂದು ಗಂಟೆ ಚರ್ಚೆ ನಡೆಸಿ ಮಾಹಿತಿ ಪಡೆಯಲಾಗಿದೆ. ನಮ್ಮ ಅಧಿಕಾರಿಗಳು ಕೊಯ್ನಾ ಜಲಾಶಯದಿಂದ ಪ್ರತಿ ಅರ್ಧಗಂಟೆಗೊಮ್ಮೆ ಮಾಹಿತಿ ನೀಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ಪಂಚಗಂಗಾ ನದಿ ಸತಾರಾದಿಂದ ಕೊಯ್ನಾ ಜಲಾಶಯದಿಂದ ನೀರು ಬಿಡುವ ಕುರಿತು ಪ್ರತಿ ಗಂಟೆಗೂಮ್ಮೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ರಾಜಾಪುರ ಜಲಾಶಯದಿಂದ ಸುಮಾರು 1 ಲಕ್ಷ 80 ಸಾವಿರ ಕ್ಯುಸೆಕ್ ನೀರು ಜಿಲ್ಲೆಗೆ ಬರುತ್ತದೆ. ಅದನ್ನು ದೂಧಗಂಗಾ ನದಿಗೆ ಸೇರಿಸಿಕೊಂಡು ಕಲ್ಲೋಳ ಬ್ಯಾರೇಜ್ ಗೆ 2 ಲಕ್ಷ 25 ಸಾವಿರ ಕ್ಯುಸೆಕ್ ನೀರು ಹರಿಯುತ್ತಿದೆ. ಈ ಎಲ್ಲ ನೀರು ಆಲಮಟ್ಟಿ ಜಲಾಶಯಕ್ಕೆ ಸೇರುತ್ತದೆ ಎಂದರು.
ಘಟಪ್ರಭಾ ನದಿಯಿಂದ 65 ಸಾವಿರ ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಇದು ಸಹ ಆಲಮಟ್ಟಿಗೆ ಸೇರುತ್ತದೆ. ಸುಮಾರು 75 ರಿಂದ 3 ಲಕ್ಷ ಕ್ಯುಸೆಕ್ ನೀರನ್ನು ಆಲಮಟ್ಟಿ ಜಲಾಶಯದಿಂದ ಬಿಡುಗಡೆ ಮಾಡಲಾಗುತ್ತಿದೆ. ಮಹಾರಾಷ್ಟ್ರದಿಂದ ಬರುವ ನೀರನ್ನು ತಡೆ ಹಿಡಿಯಲು ಜಿಲ್ಲಾಡಳಿತ ಸಿದ್ಧವಾಗಿದೆ ಎಂದರು.ಮಳೆಯ ಸಮಸ್ಯೆ ಆಲಿಸಲು ಪ್ರತಿ ತಾಲೂಕಿನಲ್ಲಿ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಪ್ರವಾಹದ ಹೆಲ್ಪ್ ಲೈನ್ ಸಹ ಬಿಡುಗಡೆ ಮಾಡಲಾಗಿದೆ. ಕೊಯ್ನಾ ಜಲಾಶಯದಿಂದಲೂ ನಮ್ಮ ಅಧಿಕಾರಿ ನೇಮಕ ಮಾಡಲಾಗಿದೆ. ಪ್ರತಿ ಅರ್ಧ ಗಂಟೆಗೊಮ್ಮೆ ಅವರು ನಮಗೆ ಮಾಹಿತಿ ನೀಡುತ್ತಿದ್ದಾರೆ. ಜತ್ರಾಟ್ ಬ್ಯಾರೇಜ್ ನಿಂದಲೂ ಸಹ ನಮಗೆ ಮಾಹಿತಿ ಬರುತ್ತಿದೆ ಎಂದು ಹೇಳಿದರು.