ಏ. 2ಕ್ಕೆ ಕಾಳಿ ನೀರಾವರಿ ಯೋಜನೆ ಲೋಕಾರ್ಪಣೆಗೆ ಮುಹೂರ್ತ ನಿಗದಿಗೊಳಿಸಿದ ತಾಲೂಕಾಡಳಿತ
ಕನ್ನಡಪ್ರಭ ವಾರ್ತೆ ಹಳಿಯಾಳಕಾಳಿನದಿ ನೀರಾವರಿ ಯೋಜನೆಯನ್ನು ಶೀಘ್ರ ಜಾರಿಗೊಳಿಸಬೇಕೆಂದು ಆಗ್ರಹಿಸಿ ಸೋಮವಾರ ಕಬ್ಬು ಬೆಳೆಗಾರರ ಸಂಘ ಹಾಗೂ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ನಡೆಸಿದ ಹಳಿಯಾಳ ಬಂದ್ ಪ್ರತಿಭಟನೆ ಯಶಸ್ವಿಯಾಗಿದೆ.
ಪ್ರತಿಭಟನಾಕಾರರ ಬೇಡಿಕೆಗಳಿಗೆ ಮಣಿದ ತಾಲೂಕಾಡಳಿತವು ಕಾಳಿ ನೀರಾವರಿ ಯೋಜನೆ ಲೋಕಾರ್ಪಣೆ ಮಾಡುವುದಾಗಿ ಒಪ್ಪಿಗೆ ಸೂಚಿಸಿದ್ದು, ಲೋಕಾರ್ಪಣೆಗೆ ಏ. 2ಕ್ಕೆ ಮುಹೂರ್ತ ನಿಗದಿಪಡಿಸಿದೆ.ಪ್ರತಿಭಟನಾ ಸ್ಥಳಕ್ಕೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಮೂಹದೊಂದಿಗೆ ಆಗಮಿಸಿದ ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ ಧರಣಿ ನಿರತ ರೈತರಿಗೆ ಬಹಿರಂಗ ಭರವಸೆ ನೀಡಿದರು. ತಹಸೀಲ್ದಾರ ನೀಡಿದ ಭರವಸೆಯಿಂದ ರೈತರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯುವುದಾಗಿಯೂ ಹೇಳಿ, ಒಂದಾನುವೇಳೆ ನೀಡಿದ ಭರವಸೆಯಂತೆ ನಡೆಯದಿದ್ದರೆ ರೈತರೆಲ್ಲರೂ ಉಗ್ರರೂಪದ ಹೋರಾಟಕ್ಕಿಳಿಯಲಿದ್ದಾರೆಂದು ಎಚ್ಚರಿಸಿದರು.
ನೀರಾವರಿ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿಯ ಬೃಹತ್ ಯೋಜನೆಗಳು ವಿಳಂಬವಾಗಿರುವುದನ್ನು ಖಂಡಿಸಿ ಫೆ. 27ರಿಂದ ಮಾರ್ಚ್ ಮೊದಲ ವಾರದವರೆಗೆ ಪಾದಯಾತ್ರೆ ನಡೆಸಿದ ರೈತರು ಸೋಮವಾರ ಹಳಿಯಾಳ ಬಂದ್ ನಡೆಸಿದರು.
ಭಾಗಶಃ ಬಂದ್:
ನೀರಾವರಿ ಯೋಜನೆ ಸೇರಿದಂತೆ ವಿವಿಧ ಬೃಹತ್ ಯೋಜನೆಗಳು ಕಾರ್ಯಾರಂಭಿಸುವುದು ವಿಳಂಬವಾಗುವುದನ್ನು ಪ್ರಶ್ನಿಸಿ ಸೋಮವಾರ ನೀಡಿದ ಸ್ವಯಂ ಪ್ರೇರಿತ್ ಬಂದ್ ಭಾಗಶಃ ಯಶಸ್ವಿಯಾಗಿತ್ತು. ತಾಲೂಕಾಡಳಿತ ಸೌಧದ ಶಿವಾಜಿ ವೃತದಲ್ಲಿ ಬೆಳಗ್ಗೆ ಹನ್ನೊಂದು ಗಂಟೆಯಿಂದ ಸಂಜೆಯವರೆಗೂ ಪ್ರತಿಭಟನಾ ಸಭೆ ಹಾಗೂ ರಸ್ತೆ ನಡೆಸಲಾಯಿತು. ಈ ವೃತದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಯ ಮೇಲೆಯೇ ಪ್ರತಿಭಟನಾ ಸಭೆಗಾಗಿ ಬೃಹತ್ ಶಾಮಿಯಾನ್ ಹಾಕಿದ್ದರಿಂದ ವಾಹನ ಸಂಚಾರಕ್ಕೂ ಅಡ್ಡಿಯಾಯಿತು. ದೇಶಪಾಂಡೆ ವಿರುದ್ಧ ಆಕ್ರೋಶ:ಕಾಳಿ ನೀರಾವರಿ ಯೋಜನೆಯು ಕಳೆದ 8 ವರ್ಷದಿಂದ ನನೆಗುದಿಗೆ ಬಿದ್ದಿರುವುದನ್ನು ಖಂಡಿಸಿ ಮಾತನಾಡಿದ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜೆರಿ, ರಾಜ್ಯ ಕಾರ್ಯಾದ್ಯಕ್ಷ ಮಹೇಶಗೌಡ ಸುಬೇದಾರ, ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಸಂದೀಪಕುಮಾರ ಬೊಬಾಟೆ, ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾಗೇಂದ್ರ ಜಿವೋಜಿ ಅವರು ಮಾಜಿ ಸಚಿವ, ಶಾಸಕ ದೇಶಪಾಂಡೆಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಳಿನದಿ ನೀರಾವರಿ ಸೇರಿದಂತೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಪಟ್ಟಣಕ್ಕೆ ನೀರು ಪೂರೈಸುವ ಅಮೃತ-2 ಯೋಜನೆ, ಒಳಚರಂಡಿ ಯೋಜನೆಯ ವಿಳಂಬವಾಗಿದ್ದನ್ನು ಪ್ರಶ್ನಿಸಿದರು, ಪ್ರತಿಭಟನಾ ಸ್ಥಳಕ್ಕೆ ಸಂಬಂಧಿತ ಇಲಾಖೆಯಯ ಅಧಿಕಾರಿಗಳು, ಗುತ್ತಿಗೆದಾರರನ್ನು ಕರೆಯಿಸುವಂತೆ ಪಟ್ಟು ಹಿಡಿದರು.ಪ್ರತಿಭಟಕಾಕಾರರ ಒತ್ತಡಕ್ಕೆ ಮಣಿದ ತಾಲೂಕಾಡಳಿತವು ತಹಸೀಲ್ದಾರ ಮುಂದಾಳತ್ವದಲ್ಲಿ ವಿವಿಧ ಅಧಿಕಾರಿಗಳ ನಿಯೋಗವು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಕಾಳಿ ನೀರಾವರಿ ಯೋಜನೆಯ ಪ್ರಸ್ತುತ ಸ್ಥಿತಿ ಹಾಗೂ ಯೋಜನೆ ವಿಳಂಬವಾಗಲು ಕಾರಣವಾದ ಅಂಶ ಹೇಳಲು ಮುಂದಾದರೂ, ಅಧಿಕಾರಿಗಳ ಮಾತನ್ನು ಆಲಿಸುವ ಮನಸ್ಥಿತಿಯಲ್ಲಿಲ್ಲದ ಪ್ರತಿಭಟನಾಕಾರರು ಲಿಖಿತವಾಗಿ ಹೇಳಿಕೆ ನೀಡುವಂತೆ ಪಟ್ಟು ಹಿಡಿದರು, ಈ ಹಿನ್ನೆಲೆ ಮತ್ತೇ ಕಚೇರಿಗೆ ಮರಳಿದ ತಹಸೀಲ್ದಾರರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಂಜೆ ಮತ್ತೊಮ್ಮೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಕಾಳಿನೀರಾವರಿ ಯೋಜನೆಯನ್ನು ಲೋಕಾರ್ಪಣೆ ಮಾಡುವ ಭರವಸೆ ನೀಡಿದರು. ನೀರಾವರಿ ಇಲಾಖೆಯ ಪ್ರಭಾರೆ ಕಾರ್ಯನಿರ್ವಾಹಕ ಎಂಜಿನಿಯರ್ ಮಹೇಶಕುಮಾರ ಏ. 2ರಂದು ನೀರಾವರಿ ಯೋಜನೆಗೆ ಚಾಲನೆ ನೀಡುವ ಭರವಸೆ ನೀಡಿ, ಯೋಜನೆಯಲ್ಲಿ ಒಳಗೊಳ್ಳದ ಕೆರೆಗಳಿಗೂ ನೀರು ಹರಿಸಲು ಪ್ರಯತ್ನ ನಡೆಸುವ ಭರವಸೆ ನೀಡಿದರು.
ತದನಂತರ ಪ್ರಸ್ತುತ ಯೋಜನೆಯಲ್ಲಿ ಒಳಗೊಳ್ಳದ ಕೆರೆ ಸೇರಿಸಿ ಹೊಸ ವಿಸ್ತೃತ ಯೋಜನೆಯನ್ನು ರೂಪಿಸಿಬೇಕೆಂಬ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರರಿಗೆ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಹಳಿಯಾಳ ಸೇರಿದಂತೆ ನೆರೆಯ ಧಾರವಾಡ, ಬೆಳಗಾವಿ ಜಿಲ್ಲೆಯ ರೈತ ಪ್ರಮುಖರು ಆಗಮಿಸಿದ್ದರು.