ರಾಮನಗರದ ಹಳ್ಳಿಮಾಳ ಕೃಷಿ ಸಹಕಾರ ಸಂಘ ಜೆಡಿಎಸ್ ತೆಕ್ಕೆಗೆ

| Published : Jul 23 2024, 12:32 AM IST

ಸಾರಾಂಶ

ತೀವ್ರ ಕುತೂಹಲ ಮೂಡಿಸಿದ್ದ ರಾಮನಗರದ ಹಳ್ಳಿಮಾಳ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಕೃಷ್ಣೇಗೌಡ ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾದರು.

ಸೊಸೈಟಿ ಅಧ್ಯಕ್ಷರಾಗಿ ಕೃಷ್ಣೇಗೌಡ ಅವಿರೋಧ ಆಯ್ಕೆ ।2 ಬಾರಿ ಮುಂದೂಡಿಕೆಯಿಂದ ಕುತೂಹಲ ಮೂಡಿಸಿದ್ದ ಚುನಾವಣೆ ಕನ್ನಡಪ್ರಭ ವಾರ್ತೆ ರಾಮನಗರ

ತೀವ್ರ ಕುತೂಹಲ ಮೂಡಿಸಿದ್ದ ತಾಲೂಕಿನ ಹಳ್ಳಿಮಾಳ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಕೃಷ್ಣೇಗೌಡ ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾದರು.

ಈ ಹಿಂದೆ ಅಧ್ಯಕ್ಷರಾಗಿದ್ದ ಸುರೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನದ ಚುನಾವಣೆ ರಾಜಕೀಯ ಕಾರಣಗಳಿಂದಾಗಿ 2 ಬಾರಿ ಚುನಾವಣೆ ಮುಂದೂಡಿಕೆ ಮಾಡಲಾಗಿತ್ತು. ಇದರಿಂದ ಆಕ್ರೋಶಗೊಂಡು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

ಅಂತಿಮವಾಗಿ ಇಂದು ನಡೆದ ಚುನಾವಣೆಯಲ್ಲಿ ಕೃಷ್ಣೇಗೌಡ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಸಂಘವನ್ನು ಜೆಡಿಎಸ್ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸಂಘದ ಸಭಾಂಗಣದಲ್ಲಿ ಬೆಳಗ್ಗೆ ಚುನಾವಣೆ ಪ್ರಕ್ರಿಯೆ ಆರಂಭಗೊಂಡಾಗ ಜೆಡಿಎಸ್ ಬೆಂಬಲಿತ ನಿರ್ದೇಶಕ ಕೃಷ್ಣೇಗೌಡ ಅವರನ್ನು ಹೊರತುಪಡಿಸಿ ಬೇರೆ ಯಾರೂ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿಲ್ಲ. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಮಂಜುನಾಥ್ ಅವರು ಅ‍ವಿರೋಧ ಆಯ್ಕೆ ಘೋಷಿಸಿದರು.

ಚುನಾವಣಾ ಪ್ರಕ್ರಿಯೆಯಲ್ಲಿ ಜೆಡಿಎಸ್ ಬೆಂಬಲಿತ 8 ಮಂದಿ ನಿರ್ದೇಶಕರು ಪಾಲ್ಗೊಂಡರೆ, ಕಾಂಗ್ರೆಸ್ ಬೆಂಬಲಿತ 3 ನಿರ್ದೇಶಕರು ಗೈರಾಗಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಸಂಘದ ಸುತ್ತಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ನೂತನ ಅಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಕೆಲಸ ಹಾಗೂ ಜನ ಸೇವೆ ಮಾಡಲು ಮತದಾರರು ಇಕ್ಬಾಲ್ ಹುಸೇನ್ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಆದರೆ, ಶಾಸಕರು ಕುತಂತ್ರ ರಾಜಕಾರಣದಲ್ಲಿ ತೊಡಗಿದ್ದಾರೆ. ಬಡ ರೈತ ಮಗನ ಮೇಲೆ ಕುತಂತ್ರ ಮಾಡುವುದನ್ನು ಇನ್ನಾದರು ಬಿಡಬೇಕು ಎಂದರು.

ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಯರೇಹಳ್ಳಿ ಮಂಜುರವರು ರೈತರಿಗೆ ಸವಲತ್ತುಗಳನ್ನು ಒದಗಿಸಿಕೊಡುವಲ್ಲಿ ವಿಫಲರಾಗಿದ್ದಾರೆ. ಅವರಿಗೆ ಅಧಿಕಾರ ಬೇಕೇ ಹೊರತು ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು ಬೇಕಾಗಿಲ್ಲ. ರೈತರನ್ನು ಜೆಡಿಎಸ್-ಕಾಂಗ್ರೆಸ್ ಎಂದು ಇಬ್ಬಾಗ ಮಾಡುವುದನ್ನು ಬಿಡಬೇಕು ಎಂದು ಹೇಳಿದರು.

ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ.ಅಶ್ವತ್ಥ್, ನಗರಸಭೆ ಸದಸ್ಯ ಮಂಜುನಾಥ್, ಜೆಡಿಎಸ್ ಮುಖಂಡರಾದ ಸಬ್ಬಕೆರೆ ಶಿವಲಿಂಗಯ್ಯ, ದೊರೆಸ್ವಾಮಿ, ರಾಮಕೃಷ್ಣಯ್ಯ, ರಾಜು, ಮಹದೇವು, ಕೃಷ್ಣ, ಪಾಂಡು, ಗೂಳಿಗೌಡ, ಚಂದ್ರಶೇಖರ್, ಜಯಕುಮಾರ್, ಬಿಜೆಪಿ ಮುಖಂಡರಾದ ಗಿರಿಗೌಡ, ಪ್ರವೀಣ್ ಗೌಡ ಮತ್ತಿತರರು ನೂತನ ಅಧ್ಯಕ್ಷ ಕೃಷ್ಣೇಗೌಡ ಅವರನ್ನು ಅಭಿನಂದಿಸಿದರು.