ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಅಭಿವೃದ್ಧಿ ಕುಂಠಿತವಾಗಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಗರದಲ್ಲಿ ಚಾಲನೆ ನೀಡಿದ್ದ ₹ 200 ಕೋಟಿಗಿಂತ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಆರೋಪಿಸಿದರು.ಇಲ್ಲಿನ ಬಿವಿವಿ ಸಂಘದ ಮಿನಿಸಭಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕೆಲಸ ನಿಲ್ಲಿಸಿ, ರಾಜ್ಯವನ್ನು ಯಾವ ದಿಕ್ಕಿನತ್ತ ಕೊಂಡೊಯ್ಯಲಿದೆ ಎಂದು ಪ್ರತಿಯೊಬ್ಬರು ಯೋಚಿಸಬೇಕಿದೆ ಎಂದರು.
ಬಿಟಿಡಿಎಯಿಂದ ಹಮ್ಮಿಕೊಂಡಿದ್ದ ₹42 ಕೋಟಿ ಅನುದಾನದಲ್ಲಿ ನವನಗರದ ಯೂನಿಟ್ 2 ಹಾಗೂ 3ಕ್ಕೆ ಸೇರುವ ಆನದಿನ್ನಿ ಜಾಕ್‌ವೆಲ್, ₹34 ಕೋಟಿ ವೆಚ್ಚದಲ್ಲಿ ಎಸ್‌ಪಿಆರ್ ಟೆಕ್ನಾಲಜಿ ಯೂನಿಟ್ ಪ್ಲಾಂಟ್, ಲೋಕೋಪಯೋಗಿ ಇಲಾಖೆಯಿಂದ ಮಾಡಿ ಉಳಿದಿದ್ದ ಸಂಗಮ ಕ್ರಾಸ್‌ನಿಂದ ಆಲಮಟ್ಟಿವರೆಗೆ 16 ಕಿಮೀ ರಸ್ತೆಗೆ ₹28 ಕೋಟಿ, ₹ 45 ಕೋಟಿ ವೆಚ್ಚದಲ್ಲಿ ಹಳೇ ಬಾಗಲಕೋಟೆಯಿಂದ ಆರ್.ಬಿ.ನಿರಲಕೇರಿವರೆಗೆ ರಸ್ತೆ ನಿರ್ಮಾಣಕ್ಕೆ ಹಾಗೂ ₹85 ಕೋಟಿ ವೆಚ್ಚದ ಎಪಿಎಂಸಿಯಿಂದ ಹೊನ್ನಾಕಟ್ಟಿ ಕ್ರಾಸ್‌ವರೆಗಿನ ರಸ್ತೆ ಸೇರಿ ₹234 ಕೋಟಿ ಅನುದಾನದಲ್ಲಿ ಕೆಲಸ ಪ್ರಾರಂಭಿಸಬೇಕಿದ್ದ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸುವ ಹೀನ ಕೆಲಸ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕೂಡಲೇ ಈ ಕೆಲಸ ಪ್ರಾರಂಭಿಸಬೇಕು ಎಂದೂ ಅವರು ಆಗ್ರಹಿಸಿದರು.ಈ ಎಲ್ಲ ಕಾಮಗಾರಿಗಳನ್ನು ಕಳೆದ ಡಿಸೆಂಬರ್ 26ರಂದು ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿದ್ದ ಕೃಷ್ಣಾ ಭಾಗ್ಯ ಜಲ ನಿಗಮದ ಬೋರ್ಡ್ ಸಭೆಯಲ್ಲಿ ಸ್ಥಗಿತಗೊಳಿಸುವ ನಿರ್ಧಾರ ಮಾಡಲಾಗಿದೆ. ಅಭಿವೃದ್ಧಿ ಕೆಲಸಗಳನ್ನು ಸರ್ಕಾರ ಕೈಗೊಳ್ಳುತ್ತಿಲ್ಲ. ಅಂತಹದರಲ್ಲಿ ಪ್ರಾರಂಭಿಸಬೇಕಿದ್ದ ಕಾಮಗಾರಿಗಳನ್ನು ಏಕೆ ನಿಲ್ಲಿಸಿದೆ ಎಂದು ಪ್ರಶ್ನಿಸಿದರು.
ಬಿಟಿಡಿಎ ಬಳಿಯಿದ್ದ ₹385.50 ಕೋಟಿ ಕಾರ್ಪಸ್ ಫಂಡ್ ಅನ್ನು ಸರ್ಕಾರ ಪಡೆದಿದೆ. ಅದರಲ್ಲಿ ನವನಗರದಲ್ಲಿ ವಿವಿಧ ಕೆಲಸ ನಿರ್ವಹಿಸಿದ ಗುತ್ತಿಗೆದಾರರ ಬಿಲ್ ಬಾಕಿ ಇರುವುದರಿಂದ ಕೇವಲ ₹ 50 ಕೋಟಿ ಬಿಟಿಡಿಎಗೆ ನೀಡಲಾಗಿದೆ. ಬಿಟಿಡಿಎಯ ಒಟ್ಟು ₹385.50 ಕೋಟಿ ಕಾರ್ಪಸ್ ಫಂಡ್ ಅನ್ನು ಬಡ್ಡಿ ಸಮೇತವಾಗಿ ಹಿಂದಿರುಗಿಸಬೇಕು. ಮೂಲೆ ನಿವೇಶನಗಳನ್ನು ಮಾರಿ ಬಂದಿರುವ ಕಾರ್ಪಸ್ ಫಂಡ್ ಅನ್ನು ಪಡೆಯಲು ಸರ್ಕಾರಕ್ಕೆ ಅಧಿಕಾರವಿಲ್ಲ. ಕಾರಣ ಕೂಡಲೇ ಹಣ ನೀಡಬೇಕು ಎಂದು ಆಗ್ರಹಿಸಿದರು.₹49 ಕೋಟಿ ಅನುದಾನ ಮುಚಖಂಡಿ ಕೆರೆ ತುಂಬುವ ಕೆಲಸ ವರ್ಷದಿಂದ ಪ್ರಾರಂಭವಾಗಿಲ್ಲ. ₹346 ಕೋಟಿ ಭಗವತಿ ಏತ ನೀರಾವರಿ ಯೋಜನೆ ಹಾಗೂ ₹243 ಕೋಟಿ ಅನುದಾನದಲ್ಲಿ ಕರ್ನಾಟಕ ನೀರಾವರಿ ನಿಗಮದಿಂದ ಹಮ್ಮಿಕೊಂಡಿದ್ದ ಶಿರೂರ ಏತ ನೀರಾವರಿ ಯೋಜನೆ ಕೂಡ ಪ್ರಾರಂಭವಾಗಿಲ್ಲ ಎಂದರು.ಬಿಟಿಡಿಎಯಿಂದ ಹಮ್ಮಿಕೊಂಡಿರುವ 5 ಕಾಮಗಾರಿ, 2 ಏತ ನೀರಾವರಿ ಯೋಜನೆ ಹಾಗೂ ಮುಚಖಂಡಿ ಕೆರೆ ತುಂಬುವ ಕೆಲಸವನ್ನು ಕೂಡಲೇ ಪ್ರಾರಂಭಿಸಿ ಮುಗಿಸದಿದ್ದರೆ ಲೋಕಸಭೆ ಚುನಾವಣೆ ಬಳಿಕ ಹೋರಾಟ ಪ್ರಾರಂಭ ಮಾಡಲಾಗುತ್ತದೆ.
- ವೀರಣ್ಣ ಚರಂತಿಮಠ, ಮಾಜಿ ಶಾಸಕ