ಸಾರಾಂಶ
ಬಾಳೆಹೊನ್ನೂರು, ಸಾಹಿತಿ ಹಾ.ಮಾ.ನಾಯಕ್ ಅವರು ತನ್ನ ನಿಷ್ಠೆ, ಪ್ರಾಮಾಣಿಕತೆಗೆ ಹೆಸರಾದ ವ್ಯಕ್ತಿ ಎಂದು ಸಾಹಿತಿ ಕೊಪ್ಪದ ಎಸ್.ಎನ್. ಚಂದ್ರಕಲಾ ಹೇಳಿದರು.
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಸಾಹಿತಿ ಹಾ.ಮಾ.ನಾಯಕ್ ಅವರು ತನ್ನ ನಿಷ್ಠೆ, ಪ್ರಾಮಾಣಿಕತೆಗೆ ಹೆಸರಾದ ವ್ಯಕ್ತಿ ಎಂದು ಸಾಹಿತಿ ಕೊಪ್ಪದ ಎಸ್.ಎನ್. ಚಂದ್ರಕಲಾ ಹೇಳಿದರು.ವಾಟುಕೊಡಿಗೆಯ ಕೋಕಿಲ ಲಿಂಗಪ್ಪಗೌಡ ಅವರ ಮನೆಯಂಗಳದಲ್ಲಿ ಎನ್.ಆರ್.ಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗುರುವಾರ ಆಯೋಜಿಸಿದ್ದ ಎಚ್.ವಿ.ಬೈರೇಗೌಡ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಹಾ.ಮಾ. ನಾಯಕ್ ಬದುಕು, ಬರಹ ಕುರಿತು ಮಾತನಾಡಿದರು.ಹಾ.ಮಾ.ನಾಯಕ್ ಅವರು ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದು, ಅವರು ಯಾವುದೇ ಹಣ, ಆಸ್ತಿ, ಅಂತಸ್ತಿಗೆ ಆಸೆ ಪಟ್ಟ ವ್ಯಕ್ತಿಯಲ್ಲ. ತಮ್ಮ ಜೀವನದಲ್ಲಿ ಯಾವುದೇ ಹಣ ಸಂಪಾದನೆ ಮಾಡದೆ ಕೇವಲ ತನ್ನ ಜ್ಞಾನ ದಾಹ ತೀರಿಸಿ ಕೊಳ್ಳಲು ಬಯಸುತ್ತಿದ್ದರು.ಅಮೇರಿಕಾಕ್ಕೆ ಒಮ್ಮೆ ತೆರಳಿದ್ದ ಹಾಮಾನಾ ಅವರು ಅಲ್ಲಿಂದ ಹಣ, ಒಡವೆ ತರದೆ 29 ಸಾವಿರ ಪುಸ್ತಕಗಳನ್ನು ಹಡಗಿನಲ್ಲಿ ತರಿಸಿಕೊಂಡು ತನ್ನ ಜ್ಞಾನದ ಮೇಲಿನ ಕಾಳಜಿ ಮೆರೆದಿದ್ದರು. ಅವರು ತನ್ನ ಮರಣಕ್ಕೂ ಮೊದಲು ಬರೆದ ಉಯಿಲಿನಲ್ಲಿ ತನ್ನಲ್ಲಿರುವ ಎಲ್ಲಾ ಪುಸ್ತಕಗಳನ್ನು ಧರ್ಮಸ್ಥಳದ ಪುಸ್ತಕಾಲಯಕ್ಕೆ ನೀಡುವಂತೆ ತಿಳಿಸಿದ್ದರು. ಪುಸ್ತಕವನ್ನು ಉಯಿಲು ಬರೆದ ವ್ಯಕ್ತಿಯಲ್ಲಿ ಇವರೇ ಮೊದಲಿಗರು.ಹಾಮಾನಾ ಅವರಿಗೆ ಅತ್ಯಂತ ಕಡು ಬಡತನವಿದ್ದರೂ ಸಹ ಉತ್ತಮ ಶಿಕ್ಷಣ ಪಡೆಯುವಲ್ಲಿ ಅವರು ಹಿಂದಿರಲಿಲ್ಲ. ಸಾಹಿತ್ಯ ರಚನೆಯಲ್ಲಿ ಪದಗಳ ಜೋಡಣೆ, ಅಭಿವ್ಯಕ್ತಿಗೊಳಿಸ ಸೂಕ್ತ ಪದ ಬಳಕೆ ಮಾಡುತ್ತಿದ್ದರು. ಪಿಯುಸಿ ಹಂತದಲ್ಲಿಯೇ ಪತ್ರಿಕೆ ಗಳಿಗೆ ಬರವಣಿಗೆ ಮೂಲಕ ತನ್ನ ಸಾಹಿತ್ಯದ ಸದಭಿರುಚಿ ಬೆಳೆಸಿಕೊಂಡಿದ್ದರು ಎಂದರು.ತಾಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಮಾತನಾಡಿ, ತಾಲೂಕು ಕಸಾಪ ನಿರಂತರವಾಗಿ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ತಾಲೂಕಿನಾದ್ಯಂತ ವಿವಿಧ ಸಾಹಿತ್ಯ ಕಾರ್ಯಕ್ರಮ ನಡೆಸುತ್ತಿದೆ. ನಮ್ಮೊಳಗಿನ ನೋವನ್ನು ಬೇರೆಯವರಿಗೆ ತೋರಿಸದೆ ನಗುವುದೇ ನಿಜವಾದ ಜೀವನವಾಗಿದ್ದು, ನಮ್ಮೊಳಗಿನ ನೋವು ಇತರರಿಗೆ ಹೇಳಿದರೆ ಟೀಕೆ ಮಾಡುವವರೂ ಇದ್ದಾರೆ. ಇಂತಹ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ ಸಾಹಿತ್ಯದ ಕಾರ್ಯಕ್ರಮಗಳ ಮೂಲಕ ಜನರ ಮನಗೆಲ್ಲುವ ಪ್ರಯತ್ನ ಮಾಡುತ್ತಿದೆ ಎಂದರು.ಪಿಎಸಿಎಸ್ ಉಪಾಧ್ಯಕ್ಷೆ ಕೋಕಿಲ ಲಿಂಗಪ್ಪಗೌಡ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಟಿ.ವೆಂಕಟೇಶ್, ಎನ್.ಆರ್.ಪುರ ಜೇಸಿಐ ಮಾಜಿ ಅಧ್ಯಕ್ಷ ಮಂಜು ಎನ್.ಗೌಡ, ಹೋಬಳಿ ಕಸಾಪ ಅಧ್ಯಕ್ಷ ಕಾರ್ತಿಕ್ ಕಾರ್ಗದ್ದೆ, ಎ.ಆರ್.ಲತಾ, ಉಪನ್ಯಾಸಕಿ ಮಧುರಾ ಮಂಜುನಾಥ್, ದಿವ್ಯಾನಿ ಮತ್ತಿತರರು ಹಾಜರಿದ್ದರು.೨೪ಬಿಹೆಚ್‌ಆರ್ ೧:
ಬಾಳೆಹೊನ್ನೂರಿನ ವಾಟುಕೊಡಿಯಲ್ಲಿ ಎನ್.ಆರ್.ಪುರ ತಾಲೂಕು ಕಸಾಪ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ದಲ್ಲಿ ಪಿಎಸಿಎಸ್ ಉಪಾಧ್ಯಕ್ಷೆ ಕೋಕಿಲ ಲಿಂಗಪ್ಪಗೌಡ ಅವರನ್ನು ಸನ್ಮಾನಿಸಲಾಯಿತು. ಎಸ್.ಎಚ್.ಪೂರ್ಣೇಶ್, ಎಸ್.ಎನ್.ಚಂದ್ರಕಲಾ, ಕೆ.ಟಿ.ವೆಂಕಟೇಶ್, ಎ.ಆರ್.ಲತಾ ಇದ್ದರು.