ಸಾರಾಂಶ
ಗಜ ಶಾಲೆ ಆವರಣದಲ್ಲಿ ನಿರ್ಮಾಣ ಕಾರ್ಯ ಆರಂಭ
ಕನ್ನಡಪ್ರಭ ವಾರ್ತೆ ಹೊಸಪೇಟೆವಿಶ್ವ ವಿಖ್ಯಾತ ಹಂಪಿ ಉತ್ಸವದಲ್ಲಿ ಜನಕಾರ್ಷಣೆ ಆಗಿರುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕಾಗಿ ಗಜ ಶಾಲೆ ಆವರಣದಲ್ಲಿ 12 ಕಿರು ವೇದಿಕೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ.
ಫೆ.17ರಂದು ವೇದಿಕೆ ನಿರ್ಮಾಣ ಕಾರ್ಯವನ್ನು ಬೆಂಗಳೂರಿನ ಉಡುಪಾಸ್ ಸಂಸ್ಥೆ ಆರಂಭಿಸಿದೆ. ವಿಜಯನಗರ ಸಾಮ್ರಾಜ್ಯ ಕಥನ ಕಟ್ಟಿಕೊಡುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಭಾರೀ ಬೇಡಿಕೆ ಇರುವ ಹಿನ್ನೆಲೆ ಕೇಂದ್ರ ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಸುವ ಮೂಲಕ ವಿಜಯನಗರ ಜಿಲ್ಲಾಡಳಿತ ಹಸಿರು ನಿಶಾನೆ ಪಡೆದಿದೆ. ಹಾಗಾಗಿ ಈಗ ವೇದಿಕೆ ನಿರ್ಮಾಣ ಕಾರ್ಯವೂ ಆರಂಭಿಸಲಾಗಿದೆ.ಧ್ವನಿ ಮತ್ತು ಬೆಳಕು ಕಾರ್ಯಕ್ರಮದಲ್ಲಿ 110 ಕಲಾವಿದರು ಹಾಗೂ 20 ಜನ ತಂತ್ರಜ್ಞರು ಹಾಗೂ ಸಹಾಯಕ ಸಿಬ್ಬಂದಿ ಇರಲಿದ್ದಾರೆ. ವಿಜಯನಗರ ಸಾಮ್ರಾಜ್ಯದ ಸ್ಥಾಪನೆ, ಸುವರ್ಣಯುಗ, ಸಾಮ್ರಾಜ್ಯದ ಪತನವನ್ನು ಈ ಕಲಾವಿದರು ಕಟ್ಟಿಕೊಡಲಿದ್ದಾರೆ. ಹಾಗಾಗಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ವೀಕ್ಷಣೆಗೆ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ.
ಹಂಪಿ ಉತ್ಸವ ಮೂರು ದಿನಗಳವರೆಗೆ ನಡೆದರೆ, ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಏಳು ದಿನಗಳವರೆಗೆ ನಡೆಯಲಿದೆ. ಈ ಕಾರ್ಯಕ್ರಮದ ವೀಕ್ಷಣೆಗೆ ದೂರದ ಊರುಗಳಿಂದ ಜನರು ಆಗಮಿಸುತ್ತಾರೆ. ಹಂಪಿ ಉತ್ಸವದಲ್ಲಿ ಈಗಲೂ ಬೇಡಿಕೆ ಇರುವ ಕಾರ್ಯಕ್ರಮ ಇದಾಗಿದೆ.ಫೆ.19ರಂದು ಕಲಾವಿದರ ಆಯ್ಕೆ ಪ್ರಕ್ರಿಯೆ:
ಹಂಪಿ ಉತ್ಸವ 2025 ರ ನಿಮಿತ್ತವಾಗಿ ‘ವಿಜಯ ವೈಭವ’ ಬೃಹತ್ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ಕಲಾವಿದರ ಆಯ್ಕೆ ಪ್ರಕ್ರಿಯೆಯನ್ನು ಫೆ.19ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ತಿಳಿಸಿದ್ದಾರೆ.ಹಂಪಿಯ ಆನೆಲಾಯದ ಆವರಣದಲ್ಲಿ ಫೆ.28 ರಿಂದ ಮಾ.6 ಆಯೋಜಿಸಿರುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಅವಶ್ಯಕತೆ ಇರುವ ಕಲಾವಿದರ ಆಯ್ಕೆ ಪ್ರಕ್ರಿಯೆಯನ್ನು ಫೆ.19ರಂದು ಬೆ.10 ಗಂಟೆಯಿಂದ ನೌಕರರ ಭವನ, ಸಂಡೂರು ರಸ್ತೆ, ಹೊಸಪೇಟೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಕ್ತ ಕಲಾವಿದರು ಮತ್ತು ಭರತ ನಾಟ್ಯ ಪರಿಣತರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಎರಡು ಸ್ಟ್ಯಾಂಪ್ ಸೈಜ್ ಫೋಟೋ ಮತ್ತು ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ, ಗೆಜೆಟೆಡ್ ಅಧಿಕಾರಿಗಳಿಂದ ಪಡೆದ ನಡತೆ ಪ್ರಮಾಣ ಪತ್ರ, ಈ ಹಿಂದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ದಾಖಲೆಗಳು ಹಾಗೂ ಸರ್ಕಾರಿ ಮತ್ತು ಅನುದಾನಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ತಮ್ಮ ನೇಮಕಾತಿ ಪ್ರಾಧಿಕಾರದಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಸ್ಪಷ್ಟವಾದ ಅನುಮತಿ ಪತ್ರ ಪಡೆದು ಜಿಲ್ಲಾಧಿಕಾರಿಗಳಿಂದ ಪತ್ರಕ್ಕೆ ಅನುಮೋದನೆ ಪಡೆದು ಆಯ್ಕೆ ಪ್ರಕ್ರಿಯೆ ನಡೆಯುವ ಸ್ಥಳದಲ್ಲಿ ನೀಡಲಾಗುವ ನಿಗದಿತ ಅರ್ಜಿಯನ್ನು ಭರ್ತಿ ಮಾಡಿ ಮೇಲೆ ತಿಳಿಸಿದ ದಾಖಲೆಗಳನ್ನು ಕಡ್ಡಾಯವಾಗಿ ಲಗತ್ತಿಸುವ ಮೂಲಕ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ.
ಆಯ್ಕೆಯಾದ ಕಲಾವಿದರು 7 ದಿನಗಳ ಪೂರ್ವಸಿದ್ದತಾ ತರಬೇತಿ ಹಾಗೂ 7 ದಿನಗಳ ಪ್ರದರ್ಶನ ಅವಧಿಯಲ್ಲಿ ಯಾವುದೇ ಗೈರು ಹಾಜರಾತಿ ಇಲ್ಲದೇ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ. ಕಲಾವಿದರ ಆಯ್ಕೆ ಸಮಿತಿಯ ಅಂತಿಮ ತೀರ್ಮಾನಕ್ಕೆ ಒಳಪಟ್ಟಿರುತ್ತದೆ ಎಂದು ತಿಳಿಸಿದ್ದಾರೆ.ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕಾಗಿ ವೇದಿಕೆಗಳ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಫೆ.19ರಂದು ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಯ್ಕೆಯಾದ ಕಲಾವಿದರು ಏಳು ದಿನಗಳ ಪೂರ್ವಸಿದ್ದತಾ ತರಬೇತಿ ಪಡೆಯಲಿದ್ದಾರೆ ಎಂದು ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ಸಂಯೋಜಕ ಎಲ್.ಡಿ. ಜೋಶಿ ತಿಳಿಸಿದ್ದಾರೆ.